ADVERTISEMENT

ಡಿ.11ರಂದು ಕಾಂಗ್ರೆಸ್ ಎಸ್‌ಟಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 10:09 IST
Last Updated 21 ನವೆಂಬರ್ 2017, 10:09 IST

ಸುರಪುರ: ‘ಹೊಸಪೇಟೆಯಲ್ಲಿ ಡಿಸೆಂಬರ್‌ 11ರಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ ತಿಳಿಸಿದರು.

ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ನಗರದ ಟೇಲರ್ ಮಂಜಿಲ್‌ನಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಸಮಾವೇಶ ಕುರಿತು ರಾಯಚೂರಿನಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶ ಉದ್ಘಾಟಿಸಲಿದ್ದು ಸಚಿವರು, ಶಾಸಕರು ಮತ್ತು ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

‘ಲಕ್ಷಾಂತರ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಪರಿಶಿಷ್ಟ ಪಂಗಡಕ್ಕೆ ನೀಡುತ್ತಿರುವ ಶೇ 3.5 ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸಲು ಒತ್ತಾಯಿಸಲಾಗುವುದು’ ಎಂದು ಹೇಳಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಹೈನುಗಾರಿಕೆ, ಗಂಗಾ ಕಲ್ಯಾಣ, ಮುದ್ರಾ ಯೋಜನೆ ಇನ್ನಿತರ ಯೋಜನೆಗಳ ಮೂಲಕ ಸಮುದಾಯದ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ’ ಎಂದರು.

ಮುಖಂಡರಾದ ಗಂಗಾಧರ ನಾಯಕ ತಿಂಥಣಿ, ವೆಂಕಟೇಶ ಬೇಟೆಗಾರ, ಶರಣುನಾಯಕ, ಮಲ್ಲಣ್ಣ ರಾಜಾಪುರ, ವಿಠ್ಠಲ ಸಿಂಗ್, ಭೀಮರಾಯ ಹೆಮನೂರು, ಭೀಮರಾಯ ಹಾಲಗೇರಾ, ನರಸಿಂಗ ಆಲ್ದಾಳ, ಮಲ್ಲಿಕಾರ್ಜುನ ಬೇವಿನಾಳ, ಸಲೀಂಸಾಬ್ ಚೇರಮೆನ್, ಹನುಮೇಶ, ಲಕ್ಷಪತಿ ದೊರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.