ADVERTISEMENT

‘ತ್ವರಿತ ನ್ಯಾಯದಾನಕ್ಕೆ ವಕೀಲರು ಸಹಕರಿಸಿ’

ಶಹಾಪುರದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ ಕಾಯಂಪೀಠ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 8:32 IST
Last Updated 3 ಜನವರಿ 2017, 8:32 IST

ಶಹಾಪುರ: ಜನರಿಗೆ ತ್ವರಿತವಾಗಿ ನ್ಯಾಯ ದೊರಕಲಿ ಎನ್ನುವ ಉದ್ದೇಶದಿಂದ ಹೆಚ್ಚು ನ್ಯಾಯಾಲಯಗಳ ಸ್ಥಾಪನೆ ಮಾಡಲಾಗುತ್ತಿದೆ. ವಕೀಲರು,  ಕಕ್ಷಿದಾರರ ಹಿತವನ್ನು ಕಾಪಾಡುವುದರ ಜತೆಗೆ ತ್ವರಿತ ನ್ಯಾಯದಾನಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ಎನ್.ನಾಯಕ ಹೇಳಿದರು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಸೋಮವಾರ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ನ್ಯಾಯಾಂಗ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ  ಸೋಮವಾರ ಹಿರಿಯ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಕಾಯಂ ಪೀಠ ಉದ್ಘಾಟಿಸಿ  ಮಾತನಾಡಿದರು.

‘ದೇಹಕ್ಕೆ ತೊಂದರೆಯಾದರೆ ಚಿಕಿತ್ಸೆಗೆ ವೈದ್ಯರ ಬಳಿ ತೆರಳುತ್ತೇವೆ. ಅದರಂತೆ ಯಾವುದೇ ವ್ಯಕ್ತಿಗೆ ತನ್ನ ಹಕ್ಕಿಗೆ ಚ್ಯುತಿ ಉಂಟಾದರೆ ನ್ಯಾಯಾಲಯದ ಮೊರೆ ಹೋಗುತ್ತಾನೆ.

ನ್ಯಾಯದಾನವು ಸಹ ನಮ್ಮ ದೇಹದ ಭಾಗದಂತೆ ಕೆಲಸ ನಿರ್ವಹಿಸುತ್ತಿದೆ. ವಕೀಲರು ನ್ಯಾಯದಾನದ ಕಾಲು ಆಗಿದ್ದರೆ, ನ್ಯಾಯಾಂಗ ಸಿಬ್ಬಂದಿ ಕೈಗಳು. ಕಕ್ಷಿದಾರರು ಅದರ ಕಿವಿ ಮತ್ತು ಕಣ್ಣಿನಂತೆ. ನ್ಯಾಯಾಧೀಶರು ದೇಹದ ತಲೆಯಂತೆ ಆಗಿದ್ದಾರೆ ಎಂದು ಅವರು ವಿವರಿಸಿದರು.

ಹಿರಿಯ ವಕೀಲರಾದ ಭಾಸ್ಕರ ರಾವ್‌ ಮುಡಬೂಳ ಹಾಗೂ ಕೆ.ನಯ್ಯಮ್ ಅಹ್ಮದ ತಿಮ್ಮಾಪೂರಿ ಮಾತನಾಡಿ, ‘ಯುವ ವಕೀಲರು ನ್ಯಾಯಾಲಯದ ಘನತೆ ಗೌರವ ಕಾಪಾಡುವುದು ಮುಖ್ಯವಾಗಿದೆ. ವಾದ ಮಂಡನೆಯ ಸಮಯದಲ್ಲಿ ಪ್ರಕರಣದ ಬಗ್ಗೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕು.

ಕಲಾಪದ ವೇಳೆ ಶಿಸ್ತು, ಸಂಯಮ, ಶಾಂತತೆಯನ್ನು ಕಾಪಾಡಿಕೊಳ್ಳುಬೇಕು. ನಿರಂತರ ಅಧ್ಯಯನಶೀಲರಾಗಬೇಕು. ವಕೀಲರು ಸಮಾಜದ ಚಿಕಿತ್ಸಕರು ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು. ಅಲ್ಲದೇ ಶಹಾಪುರಕ್ಕೆ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥರಡ್ಡಿ ಮಾಲಿ ಪಾಟೀಲ್ ಅಧ್ಯಕ್ಷತೆ  ವಹಿಸಿದ್ದರು. ಸಂಘದ ಕಾರ್ಯದರ್ಶಿ ದೊಡ್ಡೇಶ ದರ್ಶನಾಪುರ, ಸುರಪುರ ನ್ಯಾಯವಾದಿಗಳ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಬೇವಿನಕಟ್ಟಿ, ಯಾದಗಿರಿ ವಕೀಲರ ಸಂಘದ ಅಧ್ಯಕ್ಷ ಅಮೀನರಡ್ಡಿ ಇಟಗಿ, ಆರ್.ಎಂ.ಹೊನ್ನಾರಡ್ಡಿ, ಸಂತೋಷ್ ಸತ್ಯಂಪೇಟೆ, ಶಿವಶರಣ ಹೊತಪೇಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.