ADVERTISEMENT

ನದಿ ಇದ್ದರೂ ಕುಡಿವ ನೀರಿಗೆ ಪರದಾಟ

ಟಿ.ನಾಗೇಂದ್ರ
Published 29 ಆಗಸ್ಟ್ 2017, 6:59 IST
Last Updated 29 ಆಗಸ್ಟ್ 2017, 6:59 IST
ಶಹಾಪುರ ತಾಲ್ಲೂಕಿನ ಹಯ್ಯಾಳ ಗ್ರಾಮದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಸಂಗ್ರಹವಾಗಿದೆ
ಶಹಾಪುರ ತಾಲ್ಲೂಕಿನ ಹಯ್ಯಾಳ ಗ್ರಾಮದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಸಂಗ್ರಹವಾಗಿದೆ   

ಶಹಾಪುರ: ಕೃಷ್ಣ ನದಿ ತಟದಲ್ಲಿಯೇ ಗ್ರಾಮವಿದ್ದರೂ ಜನರು ನೀರಿಗಾಗಿ ನಿತ್ಯ ಪರದಾಡುತ್ತಾರೆ. ಇದಕ್ಕೆ ಮರಳು ಮಾಫಿಯಾ ಒಂದು ಕಾರಣವಾದರೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕ ಆಸಮರ್ಪಕ ನಿರ್ವಹಣೆ ಮತ್ತೊಂದು ಕಾರಣ. ಇದು ತಾಲ್ಲೂಕಿನ ಹಯ್ಯಾಳ ಗ್ರಾಮದ ದುಃಸ್ಥಿತಿ.

₹1 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕವು ತಾಲ್ಲೂಕಿನ ಹಯ್ಯಾಳ, ಐಕೂರ, ಬಸವಂತಪೂರ, ಯಕ್ಷಿಂತಿ ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕಾಗಿತ್ತು. ಆದರೆ ಯಕ್ಷಿಂತಿ ಹಾಗೂ ಹಯ್ಯಾಳ ಗ್ರಾಮಕ್ಕೆ ಮಾತ್ರ ಸೀಮಿತವಾಗಿದೆ. ಸಮರ್ಪಕವಾದ ನಿರ್ವಹಣೆ ಕೊರತೆಯಿಂದ ಗ್ರಾಮದ ಕೆಲ ಬಡಾವಣೆಗಳಿಗೆ ಮಾತ್ರ ನೀರು ಪೂರೈಕೆಯಾಗುತ್ತಿದೆ.

‘ಹಯ್ಯಾಳ ಹೋಬಳಿ ಕೇಂದ್ರ ಅಗ್ಗಳಿಕೆ ಹೊಂದಿದ್ದರೂ ಸಹ ಕನಿಷ್ಠ ಮೂಲ ಸೌಲಭ್ಯವಿಲ್ಲದೆ ಗ್ರಾಮಸ್ಥರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕೃಷ್ಣ ನದಿಗೆ ಗ್ರಾಮ ಹೊಂದಿಕೊಂಡಿದ್ದು, ಮರಳು ಮಾರಾಟದ ಭರಾಟೆ ಅಧಿಕವಾಗಿದೆ. ಗ್ರಾಮದಲ್ಲಿ ಹೆಚ್ಚಾಗಿ ಟ್ರ್ಯಾಕ್ಟರ್ ಇದ್ದು, ರಾತ್ರಿ ಆಗುತ್ತಿದ್ದಂತೆ ಮರಳು ಸಾಗಣೆ ಶುರುವಾಗುತ್ತದೆ’ ಎಂದು ಆರೋಪ ಕೇಳಿ ಬರುತ್ತದೆ.

ADVERTISEMENT

‘ಗ್ರಾಮದ ಹೆಚ್ಚಿನ ಬಡಾವಣೆಗಳಲ್ಲಿ ಚರಂಡಿ, ಸಿ.ಸಿ ರಸ್ತೆಗಳು ಇಲ್ಲವಾಗಿವೆ. ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣದ ಕಾರ್ಯ ಪ್ರಗತಿ ಸಾಧಿಸಿಲ್ಲ. ಮಹಿಳೆಯರು ಪಾಡು ಹೇಳತೀರದು’ ಎಂದು ತಿಳಿಸುತ್ತಾರೆ ಗ್ರಾಮಸ್ಥರು.

‘ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರವಿದೆ. ಕೃಷಿ ಇಲಾಖೆಯಿಂದ ಸಬ್ಸಿಡಿ ರೂಪದಲ್ಲಿ ಬರುವ ಕೃಷಿ ಪರಿಕರ, ಗೊಬ್ಬರ ಸಮರ್ಪಕವಾಗಿ ವಿತರಿಸುತ್ತಿಲ್ಲ. ಹೆಚ್ಚಿನ ಸಿಬ್ಬಂದಿ ಕಚೇರಿಗೆ ಬರುವುದು ಅಪರೂಪವಾಗಿದೆ’ ಎಂದು ದೂರುತ್ತಾರೆ ರೈತ ಮುಖಂಡ ಶರಣುರಡ್ಡಿ.

‘1ರಿಂದ 10ನೇ ತಗರಗತಿಯವರೆಗೆ ಶಾಲೆ ಇದೆ. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕುಡಿಯುವ ನೀರು ಹಾಗೂ ಶೌಚಾಲಯದ ಸಮಸ್ಯೆ ಇದೆ. ಶಿಕ್ಷಕರ ಕೊರತೆ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಶಾಲಾ ವಿದ್ಯಾರ್ಥಿನಿಯೊಬ್ಬರು.

‘ಗ್ರಾಮದಲ್ಲಿ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದೆ. ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ತಾಂತ್ರಿಕ ನೆಪದಲ್ಲಿಯೇ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ಶರಣುರಡ್ಡಿ ತಿಳಿಸಿದರು. ‘ಕೃಷಿ, ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿರುವ ಹಯ್ಯಾಳ ಗ್ರಾಮಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.