ADVERTISEMENT

ಪುಣ್ಯಕ್ಷೇತ್ರದಲ್ಲಿ ಸಮಸ್ಯೆಗಳ ಆಗರ

ಅಶೋಕ ಸಾಲವಾಡಗಿ
Published 5 ಡಿಸೆಂಬರ್ 2017, 6:23 IST
Last Updated 5 ಡಿಸೆಂಬರ್ 2017, 6:23 IST
ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿರುವುದು
ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿರುವುದು   

ಸುರಪುರ: ಸುರಪುರದಿಂದ 12 ಕಿಲೋ ಮೀಟರ್‌ ಅಂತರದಲ್ಲಿರುವ ತಿಂಥಣಿ ಮೂಲ ಸೌಲಭ್ಯ ಕಾಣದೇ ನರಳುತ್ತಿದೆ. 14ನೇ ಶತಮಾನದಲ್ಲಿ ಅವತರಿಸಿ ಜಾತಿ ವ್ಯವಸ್ಥೆ ತೊಲಗಿಸಲು ಶ್ರಮಿಸಿ ತಿಂಥಣಿಯಲ್ಲಿ ಗುಹಾಪ್ರವೇಶ ಮಾಡಿದ ಮೌನೇಶ್ವರರಿಂದ ಈ ಗ್ರಾಮ ಖ್ಯಾತಿ ಪಡೆದಿದೆ.

ಗ್ರಾಮದ ಜನಸಂಖ್ಯೆ 3 ಸಾವಿರಕ್ಕೂ ಅಧಿಕ. ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಈ ಗ್ರಾಮದಲ್ಲಿ 8 ಜನ ಸದಸ್ಯರಿದ್ದಾರೆ. ಗ್ರಾಮದ ಬಹುತೇಕರು ಬಡವರು. ಕೂಲಿ ನಾಲಿ ಅವರ ಜೀವನೋಪಾಯ. ಬಹಳಷ್ಟು ಜನ ಕೂಲಿ ಅರಸಿ ಗುಳೆ ಹೋಗುತ್ತಾರೆ.

ಅಲ್ಲಲ್ಲಿ ಸಿ.ಸಿ ರಸ್ತೆ ಮಾಡಲಾಗಿದೆ. ನೈರ್ಮಲ್ಯ, ಚರಂಡಿಯಿಂದ ವಂಚಿತವಾಗಿದೆ. ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತದೆ. ಗ್ರಾಮ ಪ್ರವೇಶಿಸುವ ರಸ್ತೆಯ ಎರಡೂ ಬದಿ ಗ್ರಾಮಸ್ಥರಿಗೆ ಶೌಚಾಲಯ. ಊರು ಪ್ರವೇಶಿಸುತ್ತಲೇ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ. ಎಲ್ಲೆಡೆ ಕೆಸರು ತುಂಬಿದೆ. ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲ. ಗ್ರಾಮದ ರಸ್ತೆಗಳೆಲ್ಲ ಮುಳ್ಳುಕಂಟಿಗಳಿಂದ ತುಂಬಿ ಹೋಗಿವೆ.

ADVERTISEMENT

ಮಹಿಳಾ ಶೌಚಾಲಯ ಇಲ್ಲದಿರುವುದರಿಂದ ಮಹಿಳೆಯರ ಪಾಡು ದೇವರೇ ಬಲ್ಲ ಎಂಬಂತಾಗಿದೆ. ರಾತ್ರಿ ಇಲ್ಲವೇ ನಸುಕಿನ ಜಾವ ಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ. ಕಾಲುವೆ ಕೊನೆ ಭಾಗಕ್ಕೆ ಬರುವುದರಿಂದ ಜಮೀನುಗಳಿಗೆ ನೀರು ಸಮರ್ಪಕವಾಗಿ ದೊರಕುತ್ತಿಲ್ಲ.

ಕಿರುನೀರು ಸರಬರಾಜು ಯೋಜನೆ ಸಮರ್ಪಕವಾಗಿಲ್ಲ. ನೀರಿನ ಟ್ಯಾಂಕ್‌ ಇದ್ದರೂ ಇಲ್ಲದಂತಾಗಿದೆ. ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿರುವ ಕೊಳವೆಬಾವಿಗಳಲ್ಲಿ ಅರ್ಸೇನಿಕ್ ಅಂಶ ಇದೆ. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಗ್ರಾಮ ಕೃಷ್ಣಾ ನದಿ ದಂಡೆಯ ಮೇಲಿದ್ದರೂ ಗ್ರಾಮಸ್ಥರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ನದಿಗೆ ತೆರಳಲು 2 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು. ಹಾಗಾಗಿ, ಗ್ರಾಮದಲ್ಲಿರುವ ಕೊಳೆಬಾವಿಗಳ ಮುಂದೆ ಕೊಡಗಳ ಉದ್ದನೆಯ ಸಾಲು ಕಾಣಸಿಗುತ್ತದೆ.

ತಗ್ಗು ಪ್ರದೇಶದಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುತ್ತಿದೆ. ಸೊಳ್ಳೆಗಳ ಹಾವಳಿ ಅತಿಯಾಗಿದೆ. ಜಾನುವಾರುಗಳು ಸೊಳ್ಳೆಕಾಟದಿಂದ ನರಳುವಂತಾಗಿದೆ. ಆಗಾಗ ಕಂಡು ಬರುವ ವಾಂತಿಭೇದಿ ಜನರ ಜೀವ ಹಿಂಡುತ್ತಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆ ಇದೆ. ಮಕ್ಕಳ ಹಾಜರಾತಿ ಚೆನ್ನಾಗಿದೆ. ಸಮರ್ಪಕ ಶಿಕ್ಷಕರು ಇದ್ದಾರೆ. ಸಾರ್ವಜನಿಕ ಗ್ರಂಥಾಲಯ ಇದೆ. ಗ್ರಾಮದಲ್ಲಿ ವಿವಿಧ ಜಾತಿ ಜನಾಂಗ ದವರು ಸೌಹಾರ್ದತೆ ಯಿಂದ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿರುವ ಮೌನೇಶ್ವರ ದೇವಸ್ಥಾನ ಭಾವೈಕ್ಯತೆಯ ತಾಣವಾಗಿದೆ.

‘ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ಎಷ್ಟೇ ಪ್ರಯತ್ನ ಪಟ್ಟರೂ ಅಭಿವೃದ್ಧಿ ಕಾಣುತ್ತಿಲ್ಲ. ಮೌನೇಶ್ವರ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೂ ಸಮರ್ಪಕ ಸೌಕರ್ಯ ಇಲ್ಲ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

* * 

ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಅದಕ್ಕೆ ವಿದ್ಯುತ್‌ ಸಂಪರ್ಕ ಇತರ <br/>ವ್ಯವಸ್ಥೆ ಕಲ್ಪಿಸಿದರೆ ಕುಡಿವ ನೀರಿನ ಸಮಸ್ಯೆ ನೀಗುತ್ತದೆ.
ಮನೋಹರ ಕುಲಕರ್ಣಿ
ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.