ADVERTISEMENT

‘ಬಡವರ ಹಸಿವು ನೀಗಿಸುವ ಅನ್ನದಾನ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 8:24 IST
Last Updated 23 ಮಾರ್ಚ್ 2017, 8:24 IST

ಯಾದಗಿರಿ: ‘ದೇಶದಲ್ಲಿ ಹಸಿವಿನಿಂದ ಬಳಲಿ ಅಸುನೀಗುವವರ ಸಂಖ್ಯೆ ದೊಡ್ಡದಿದೆ. ಅನ್ನ ಇರುವ ಜನರು ಎರಡು ತುತ್ತನ್ನಾದರೂ ಅನ್ನದಾನ ಮಾಡಿದರೆ ಹಸಿವಿನಿಂದ ಸಾಯುವವರ ಸಂಖ್ಯೆ ಕಡಿಮೆಯಾಗಲಿದೆ. ಪುಕರಾಜ ದೋಖಾ ಪರಿವಾರ ಅನ್ನದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ’ ಎಂದು ನಗರ ಪಿಎಸ್‌ಐ ಸುನಿಲ್‌ಕುಮಾರ್ ಹೇಳಿದರು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಮಂಗಳವಾರ ಪುಕರಾಜ ದೋಖಾ ಪರಿವಾರ ಹಮ್ಮಿಕೊಂಡಿದ್ದ ₹ 2ಗೆ ಪಲಾವ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ದೇವರ, ಧರ್ಮದ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಅನ್ನಛತ್ರಗಳಿಂದಾಗಿ ಎಷ್ಟೋ ಬಡ ಮಕ್ಕಳು ಬದುಕಿದ್ದಾರೆ. ವಿಶ್ವಸಂಸ್ಥೆ ಕೂಡ ವಿಶ್ವದಲ್ಲಿ ಅನ್ನ ಅಭಾವದಿಂದ ಯಾರೂ ಸಾಯಬಾರದು ಅಂತ ಅನೇಕ ಯೋಜನೆ, ಕಾನೂನು ಜಾರಿ ಮಾಡಿದೆ. ಆದರೂ ಹಸಿವಿನಿಂದ ಸಾಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಪ್ರತಿಯೊಬ್ಬರೂ ಒಂದೊಂದು ತುತ್ತು ಅನ್ನದಾನ ಮಾಡುವ ಮನಸ್ಸು ಮಾಡಿದರೆ ಹಸಿವಿನಿಂದ ಯಾವುದನ್ನು ತಡೆಗಟ್ಟಬಹುದು’ ಎಂದು ಸಲಹೆ ನೀಡಿದರು.

ಸಾಹಿತಿ ಅಯ್ಯಣ್ಣ ಹುಂಡೇಕರ್ ಮಾತನಾಡಿ,‘ಉಳ್ಳವರ ಮನದಲ್ಲಿ ಅನ್ನದಾನ ಮಾಡುವ ಯೋಜನೆ ಮೂಡಿದರೆ ಭೂಮಿ ಮೇಲೆ ಯಾರೂ ಹಸಿವು ಎನ್ನುವುದಿಲ್ಲ. ಆರ್ಥಿಕ, ಉದ್ಯೋಗ  ಅಸಮಾನತೆ ಕಾರಣ ಹಸಿವಿನಿಂದ ಬಳಲುವವರು ಇದ್ದಾರೆ’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಬು ದೋಖಾ ಮಾತನಾಡಿ, ಉಚಿತವಾಗಿ ವಿತರಿಸುವ ಬದಲಾಗಿ ದೇವರ ಕೆಲಸದಲ್ಲಿ ಭಾಗಿಯಾಗಲಿ ಎಂಬ ಉದ್ದೇಶದಿಂದ ₹2 ಗಳಿಗೆ ಪಲಾವ್ ಪಾಕೇಟ್ ವಿತರಿಸಲಾಗುತ್ತಿದೆ’ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಸಂಗಪ್ಪ ಲಾಳಸಂಗಿ, ಮಹ್ಮದ್ ಇಸಾಕ್, ಶಂಕರಲಿಂಗಪ್ಪ ಕಾಜಗಾರ, ಸುಭಾಷ ಆಯಾರಕರ್, ಹನುಮಾನಸೇಠ್, ಗೌತಮಸೇಠ್ ದೋಖಾ, ನಾಗರಾಜ ಹೆಂದೆ, ದಿಲೀಪ ದೋಖಾ, ಅಂಬಯ್ಯ ಶಾಬಾದಿ, ನೂರಂದಪ್ಪ ಲೇವಡಿ, ಅಜೀತ ದೋಖಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.