ADVERTISEMENT

ಬಾಲಕಾರ್ಮಿಕ ಪದ್ಧತಿ ದೇಶಕ್ಕೆ ಕಳಂಕ: ರಘುವೀರಸಿಂಗ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 9:23 IST
Last Updated 24 ಜನವರಿ 2017, 9:23 IST
ಬಾಲಕಾರ್ಮಿಕ ಪದ್ಧತಿ ದೇಶಕ್ಕೆ ಕಳಂಕ: ರಘುವೀರಸಿಂಗ್‌
ಬಾಲಕಾರ್ಮಿಕ ಪದ್ಧತಿ ದೇಶಕ್ಕೆ ಕಳಂಕ: ರಘುವೀರಸಿಂಗ್‌   

ಸುರಪುರ: ‘ಮಕ್ಕಳ ದುಡಿಮೆ ದೇಶಕ್ಕೆ ಕಳಂಕ. ಇದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಆದರೂ ನಾವು ನಿರೀಕ್ಷಿತ ಪ್ರಮಾಣ ದಲ್ಲಿ ಇದನ್ನು ತಡೆಗಟ್ಟಲಾಗುತ್ತಿಲ್ಲ. ಇದಕ್ಕೆ ತಾಲ್ಲೂಕಿನ ಎಲ್ಲಾ ಅನುಷ್ಠಾನ ಅಧಿಕಾರಿಗಳು ಸಹಕರಿಸಬೇಕು’ ಎಂದು ಬಾಲಕಾರ್ಮಿಕ ಯೋಜನಾಧಿಕಾರಿ ರಘುವೀರಸಿಂಗ ಠಾಕೂರ್ ಹೇಳಿದರು.

ಇಲ್ಲಿಯ ತಹಶೀಲ್ದಾರ್‌ ಕಚೇರಿಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕುರಿತು ಶನಿವಾರ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.‘ತಂದೆ, ತಾಯಿಯ ಪ್ರೀತಿ ವಾತ್ಸಲ್ಯದಿಂದ ವಂಚಿತರಾದ ಮತ್ತು ಬಡತನ ಕಾರಣದಿಂದ ಅನೇಕ ಮಕ್ಕಳು ಡಾಬಾ, ಹೋಟೆಲ್‌, ಗ್ಯಾರೇಜ್‌, ರೆಸ್ಟೋರೆಂಟ್, ಗಾರೆ,  ಇಟಗಿ ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಾರೆ. ಆಕಸ್ಮಿಕವಾಗಿ ತಮಗೆ ಕಂಡು ಬಂದಲ್ಲಿ ತಕ್ಷಣ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಕೋರಿದರು.

‘ಅಂತಹ ಮಕ್ಕಳು ಕಂಡು ಬಂದಲ್ಲಿ ತಾವು ಕೂಡಾ ಮಕ್ಕಳಿಗೆ ಮತ್ತು ಮಾಲೀಕರಿಗೆ ತಿಳಿ ಹೇಳಿಬೇಕು. ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ₹ 20 ಸಾವಿರ ದಂಡ ಮತ್ತು 1 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ’ ಎಂದು ತಿಳಿಸಿದರು.

‘ಬಾಲ ಕಾರ್ಮಿಕ ಪದ್ಧತಿ ಕೇವಲ ಕಾನೂನಿನ ಮೂಲಕ ತಡೆಗಟ್ಟುವುದು ಅಸಾಧ್ಯ. ಇದಕ್ಕೆ ಪಾಲಕರ, ಪೋಷಕರ ಮತ್ತು ಸಮಾಜ ಸೇರಿದಂತೆ ಎಲ್ಲರ ಸಹಭಾಗಿತ್ವ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತಾವೆಲ್ಲ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

ಗ್ರೇಡ್-2 ತಹಶೀಲ್ದಾರ್‌ ಸುಫೀಯಾ ಸುಲ್ತಾನ್‌. ಕಾರ್ಮಿಕ ನಿರೀಕ್ಷಕ ಗಂಗಾಧರ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಚಂದ್ರಶೇಖರ ಜೇವರ್ಗಿ, ಸಿಡಿಪಿಓ ಅನಿಲ ಕಾಂಬ್ಳೆ, ನಗರಸಭೆ ಕಂದಾಯ ಅಧಿಕಾರಿ ವೆಂಕಟೇಶ, ಬಿಇಒ ಕಚೇರಿಯ ಕೊಪ್ರೇಶ ಹಳಿಜೋಳ ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.