ADVERTISEMENT

ಬಾಲ್ಯವಿವಾಹ ವಯಸ್ಸಿಗೆ ಮೀರಿದ ಹೊಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:20 IST
Last Updated 23 ಮೇ 2017, 7:20 IST

ಯಾದಗಿರಿ: ‘ಬಾಲ್ಯ ವಿವಾಹದಿಂದ ವಯಸ್ಸಿಗೆ ಮೀರಿದ ಜವಾಬ್ದಾರಿಯನ್ನು ಹೊರಿಸಿದಂತಾಗುತ್ತದೆ. ಅಲ್ಲದೇ ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಹೊಣೆ ಹೊರುವುದರಿಂದ ಮಾನಸಿಕ ಸ್ವಾಸ್ಥ್ಯದ ಜತೆಗೆ ನಾನಾ ದುಷ್ಪರಿಣಾಮಗಳಿಗೆ ದಾರಿಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಬಾಲ್ಯವಿವಾಹವನ್ನು ಯಾರೂ ಮಾಡಬಾರದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಕೆ.ಶೋಭಾವತಿ ಕರೆ ನೀಡಿದರು.

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ವಯಸ್ಸಿಗೆ ಬರದ ಮಕ್ಕಳನ್ನು ಸಂಸಾರದ ಬದುಕಿಗೆ ನೂಕುವುದರಿಂದ ಮುಗ್ಧ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಇದು ಕಾನೂನು ಬಾಹಿರ. ಇಂತಹ ಬಾಲ್ಯ ವಿವಾಹ ಮಾಡಿದ ಪೋಷಕರು ನಂತರ ಮಕ್ಕಳಿಗೆ ಒದಗಿದ ಗತಿ ಕಂಡು ಪಶ್ಚಾತಾಪ ಪಟ್ಟಿದ್ದಾರೆ.

ಮಕ್ಕಳಿಗೆ ದುರ್ಗತಿ ಒದಗಿಸಿದ ನಂತರ ಆತಂಕಪಡುವುದಕ್ಕಿಂತ ಪೋಷಕರು ಮಕ್ಕಳು ದೈಹಿಕ ಮತ್ತು ಮಾನಸಿಕ ಸದೃಢವಾಗುವ ವರೆಗೂ ಕಾಯುವುದು ಲೇಸು. ಪ್ರಾಪಂಚಿಕ ಜ್ಞಾನ ಪಡೆದ ಮಕ್ಕಳು ಎಲ್ಲವನ್ನೂ ನಿರ್ಧರಿಸುವಂತವರಾಗಿ ಬದುಕು ನಡೆಸುತ್ತಾರೆ ಎಂಬುದನ್ನು ಪೋಷಕರು ಅರಿಯಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮಾತನಾಡಿ, ‘ಬಾಲ್ಯ ವಿವಾಹಕ್ಕೊಳಗಾದ ಮಕ್ಕಳು ಖಿನ್ನತೆ ಅನುಭವಿಸುವುದು ಕಂಡುಬರುತ್ತದೆ. ಇದರ ದುಷ್ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಶಿಶುಮರಣ ಹೆಚ್ಚಿದೆ. ಜತೆಗೆ ತಾಯಿ–ಮಕ್ಕಳ ಮರಣ ಕೂಡ ಹೆಚ್ಚಿದೆ. ಇಡೀ ಜೀವನ ಪೂರ್ತಿ ಭಯದ ವಾತಾವರಣದಲ್ಲಿ ಬದುಕುವಂತಾಗುತ್ತದೆ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶರಣಪ್ಪ ಪಾಟೀಲ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಚಂದ್ರಶೇಖರ್ ಅಲ್ಲಿಪೂರ, ಕಾರ್ಮಿಕ ನಿರೀಕ್ಷಕ ಗಂಗಾಧರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಪಿ.ದೊಡ್ಡಮನಿ, ಮಕ್ಕಳ ರಕ್ಷಣಾ ಪೊಲೀಸ್ ಘಟಕದ ಸಿಬ್ಬಂದಿ ಮಹೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.