ADVERTISEMENT

ಬಿಜೆಪಿಯಲ್ಲಿ ಭಿನ್ನಮತವಿಲ್ಲ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:44 IST
Last Updated 17 ಮೇ 2017, 6:44 IST

ಹುಣಸಗಿ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ತಮ್ಮ ಮಧ್ಯೆ ಯಾವುದೇ ಭಿನ್ನಮತವಿಲ್ಲ. ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಜಯ ಸಾಧಿಸಲಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಂಗಳವಾರ ಸಮೀಪದ ಹಗರಟಗಿ ಗ್ರಾಮದ ಪ್ರಸಿದ್ಧ ಧರ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ’ ಎಂದು ಪುನರುಚ್ಚರಿಸಿದ ಅವರು, ‘ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಮೇ 18ರಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬರ ಅಧ್ಯಯನ ಪ್ರವಾಸ ನಡೆಯಲಿದೆ. ನಾನು ಕೂಡಾ ಅವರೊಂದಿಗೆ ಇರುತ್ತೇನೆ. ರೈತರ ಜಮೀನುಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿಯುವ ನಿಟ್ಟಿನಲ್ಲಿ  ರಾಜ್ಯದಾದ್ಯಂತ ಸಂಚರಿಸಲಾಗುವುದು’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ರಾಜ್ಯಕ್ಕೆ ₹1,684 ಕೋಟಿ ಬಿಡುಗಡೆ ಮಾಡಿತ್ತು. ರಾಜ್ಯ ಸರ್ಕಾರ ಅದರಲ್ಲಿ ₹9,36 ಕೋಟಿ ಮಾತ್ರ ಖರ್ಚು ಮಾಡಿದೆ. ಆದರೆ, ರಾಜ್ಯದ ಮುಖ್ಯಮಂತ್ರಿ ಹಣ ಬಳಕೆ ಮಾಡುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದರು.

‘ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಪೂರೈಸಿರುವ ರಾಜ್ಯ ಸರ್ಕಾರ ಹಿಂದುಳಿದವರನ್ನು ಕಡೆಗಣಿಸುತ್ತಲೇ ಬಂದಿದೆ’ ಎಂದು ಆರೋಪಿಸಿದರು. ‘ಹಗರಟಗಿ ಗ್ರಾಮವು ಐತಿಹಾಸಿಕ ಹೆಸರುವಾಸಿಯಾಗಿದೆ. ನೂರೊಂದು ದೇಗುಲ ಹಾಗೂ ಅಷ್ಟೇ ಪ್ರಮಾಣದ ಬಾವಿಗಳನ್ನು ಹೊಂದಿದ್ದರೂ ಅವು ಅವಸಾನದತ್ತ ಸಾಗಿವೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣದಿಂದಲೇ ಜೀರ್ಣೋದ್ಧಾರಕ್ಕೆ ಒತ್ತು ಕೊಡಲಾಗುವುದು’ ಎಂದು ಭರವಸೆ ನೀಡಿದರು.

ಬಿಜೆಪಿ ಸುರಪುರ ತಾಲ್ಲೂಕು ಘಟಕದ ಅಧ್ಯಕ್ಷ ಅಮರಣ್ಣ ಹುಡೇದ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ, ಸಂಗನಗೌಡ ಪೊಲೀಸ್‌ ಪಾಟೀಲ, ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ,  ತಾಲ್ಲೂಕು ಪಂಚಾಯಿತಿ ಸದಸ್ಯ ಡಾ.ಬಿ.ಬಿ. ಬಿರಾದಾರ, ಎಪಿಎಂಸಿ ಸದಸ್ಯ ಬಸವಪ್ರಭು ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಶಿವಣ್ಣ ಕರಡಕಲ್ಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.