ADVERTISEMENT

ಬೆಂಚಿಗಡ್ಡಿ: ಕುಡಿಯುವ ನೀರಿಗಾಗಿ ಪರದಾಟ

ಮಹಾಂತೇಶ ಸಿ.ಹೊಗರಿ
Published 28 ಜನವರಿ 2017, 8:17 IST
Last Updated 28 ಜನವರಿ 2017, 8:17 IST
ಬೆಂಚಿಗಡ್ಡಿ: ಕುಡಿಯುವ ನೀರಿಗಾಗಿ ಪರದಾಟ
ಬೆಂಚಿಗಡ್ಡಿ: ಕುಡಿಯುವ ನೀರಿಗಾಗಿ ಪರದಾಟ   

ಕಕ್ಕೇರಾ: ಇಲ್ಲಿಗೆ ಸಮೀಪದ ಬೆಂಚಿಗಡ್ಡಿ ಗ್ರಾಮದಲ್ಲಿ ಜನರು ಪ್ರತಿದಿನ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಎರಡು ಕೊಳವೆಬಾವಿ ಇವೆ. ಆದರೆ, ಅವು ಹಾಳಾಗಿದ್ದು, ದುರಸ್ತಿ ಮಾಡಿಲ್ಲ. ಹೀಗಾಗಿ ಗ್ರಾಮದ ನಿವಾಸಿಗಳು ಹನಿ ನೀರಿಗೆ ಪರದಾಡಬೇಕಿದೆ.

‘ಆ ಪೈಪಿನಾಗ ನೀರು ಬಂದರ ಕುಡಿಯಾಕ, ಬಳಸಾಕ ತಗೋಂತಿವಿ. ಅಚಾನಾಕ್ ನೀರು ಬರಲಿಲ್ಲಂದ್ರ ಅವತ್ತು ನಮಗ ತೊಂದರೆ ಯಾಗತೈತ್ರಿ’ ಎಂದು ಗ್ರಾಮ ಸಾಮವ್ವ ಸಮಸ್ಯೆ ಬಿಚ್ಚಿಟ್ಟರು.

ಸದ್ಯ ಗ್ರಾಮದಲ್ಲಿರುವ ವಿದ್ಯುತ್‌ ಉತ್ಪಾದನಾ ಕೇಂದ್ರದಿಂದ ನೀರು ಪೂರೈಸುತ್ತಿದ್ದಾರೆ. ಅವರು ನೀರು ಬಿಡದಿದ್ದರೆ ನಿತ್ಯದ ಬಳಕೆಗೆ ನೀರಿಲ್ಲದೆ ಪರದಾಬೇಕಾಗುತ್ತದೆ ಎಂದು ಗ್ರಾಮದ ದೇವಮ್ಮ ಬೆಂಚಿಗಡ್ಡಿ ಅಳಲು ತೋಡಿಕೊಂಡರು.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಹಾಳಾಗಿರುವ ಕೋಳವೆಬಾವಿಗಳನ್ನು ದುರಸ್ತಿ ಮಾಡಿಲ್ಲ. ಅಲ್ಲದೆ, ಹೊಸ ಕೊಳವೆ ಬಾವಿಗಳನ್ನು ಕೊರೆಸಿಲ್ಲ. ವಿದ್ಯುತ್‌ ಉತ್ಪಾದನಾ ಕೇಂದ್ರದವರು ಬಿಡುವ ನೀರನ್ನೇ ಸರದಿಯಲ್ಲಿ ನಿಂತು ಪಡೆಯಬೇಕಾಗಿದೆ. ಅವರು ನೀರು ಬಿಡದಿದ್ದರೆ ಹಳ್ಳಕ್ಕೆ ಹೋಗಿ ತರಬೇಕು ಎಂದು ಪರಸಪ್ಪ ಅಳಲು ತೋಡಿಕೊಂಡರು.

‘ಪಂಚಾಯಿತಿ ವತಿಯಿಂದ  ಕೊಳವೆ ಬಾವಿ ಕೊರೆಸಲಾಗಿದೆ. ತಿಂಗಳ ಹಿಂದೆ ಅದು ಕೆಟ್ಟಿತ್ತು. ಈಗ ಅದನ್ನು ರಿಪೇರಿ ಮಾಡಲಾಗಿದೆ’ ಎಂದು  ಪಂಚಾಯಿತಿಯವರು ಹೇಳುತ್ತಾರೆ.

ಸದ್ಯ ಅಳವಡಿಸಲಾಗಿರುವ ಪೈಪ್‌ ಅಲ್ಲಲ್ಲಿ ಒಡೆದಿದ್ದು, ನೀರಿನ ಜತೆಗೆ ಮಣ್ಣು ಹಾಗೂ ಇನ್ನಿತರ ಕಲ್ಮಷಗಳು ಬರುತ್ತವೆ. ಅದೇ ನೀರು ಕುಡಿಯಬೇಕಾಗಿದೆ. ಅದರಿಂದ ರೋಗ ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.