ADVERTISEMENT

ಬೋನಾಳ ಪಕ್ಷಿಧಾಮದಲ್ಲಿ ಹಾಡಹಗಲೇ ಮೀನುಶಿಕಾರಿ!

ಮಲ್ಲೇಶ್ ನಾಯಕನಹಟ್ಟಿ
Published 12 ಏಪ್ರಿಲ್ 2017, 9:53 IST
Last Updated 12 ಏಪ್ರಿಲ್ 2017, 9:53 IST
ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕಿನ ಬೋನಾಳ ಪಕ್ಷಿಧಾಮದ ಕೆರೆಯಲ್ಲಿ ಪಕ್ಷಿ ಸಂಕುಲ ವಿರಳವಾಗಿವೆ (ಎಡಚಿತ್ರ).  ಪಕ್ಷಿಧಾಮದ ಕೆರೆಯ ಏರಿ ರಸ್ತೆ ಹದಗೆಟ್ಟಿರುವ ದೃಶ್ಯ	ಚಿತ್ರಗಳು: ರಾಜ್‌ಕುಮಾರ್
ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕಿನ ಬೋನಾಳ ಪಕ್ಷಿಧಾಮದ ಕೆರೆಯಲ್ಲಿ ಪಕ್ಷಿ ಸಂಕುಲ ವಿರಳವಾಗಿವೆ (ಎಡಚಿತ್ರ). ಪಕ್ಷಿಧಾಮದ ಕೆರೆಯ ಏರಿ ರಸ್ತೆ ಹದಗೆಟ್ಟಿರುವ ದೃಶ್ಯ ಚಿತ್ರಗಳು: ರಾಜ್‌ಕುಮಾರ್   

ಯಾದಗಿರಿ:‘ನೈಸರ್ಗಿಕ ಖನಿ’ ಖ್ಯಾತಿಯ ಜಿಲ್ಲೆಯ ಸುರಪುರ ತಾಲ್ಲೂಕಿನ ಬೋನಾಳ ಪಕ್ಷಿಧಾಮದ ಕೆರೆಯಲ್ಲಿ ಹಾಡಹಗಲೇ ಮೀನು ಶಿಕಾರಿ ನಡೆದಿದ್ದು, ಪಕ್ಷಿ ಸಂಕುಲಕ್ಕೆ ಕಂಟಕ ಎದುರಾಗಿದೆ.ಮಂಗಳವಾರ ‘ಪ್ರಜಾವಾಣಿ’ ಪಕ್ಷಿಧಾಮಕ್ಕೆ ಭೇಟಿ ನೀಡಿದಾಗ ಕೆರೆ ತುಂಬಾ ಮೀನು ಹಿಡಿಯುವ ಬಲೆ ಹಾಕಿರುವ ದೃಶ್ಯ ಕಂಡುಬಂತು. ಈ ಮೊದಲು ಪಕ್ಷಿಧಾಮದ ಕೆರೆಯ ಹಿನ್ನೀರಿನಲ್ಲಿ ನಡೆಯುತ್ತಿದ್ದ ಮೀನುಶಿಕಾರಿ ಈಗ ಹಾಡಹಗಲೇ ರಾಜಾರೋಷವಾಗಿ ನಡೆಯುತ್ತಿದ್ದರೂ ಪ್ರಶ್ನಿಸುವವರಿಲ್ಲದಂತಾಗಿದೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳಲ್ಲಿನ ರೈತರ ಗದ್ದೆಗಳ ನೀರು ಪಕ್ಷಿಧಾಮದ ಕೆರೆಗೆ ಆಧಾರ. ಗದ್ದೆಗಳು ತುಂಬಿದಾಗ ರೈತರು ಹೊರಬಿಟ್ಟ ಹೆಚ್ಚುವರಿ ನೀರು ಹಳ್ಳದ ಮೂಲಕ ಕೆರೆಗೆ ಬಂದು ಸಂಗ್ರಹವಾಗುತ್ತದೆ.

ಒಟ್ಟು 750 ಎಕರೆ ವಿಸ್ತ್ರೀರ್ಣದಲ್ಲಿ ಪಕ್ಷಿಧಾಮದ ಕೆರೆ ಹರಡಿಕೊಂಡಿದೆ. ರಾಜಹಂಸ (ಫ್ಲೆಮಿಂಗೋ), ಬ್ಯಾಹ್ಮಿಡಕ್‌, ಕ್ಯಟಲ್ ಇಗ್ರಿಬಿ, ವೈಟ್‌ ನೆಕೆಡ್‌ ಸ್ಟ್ರೋಕ್, ವೈಟ್ಲಿಬಿಸ್, ಬ್ಲಾಕ್‌ ಲಿಬಿಸ್‌, ಬಾರ್‌ ಹೆಡ್ಡಡ್‌ ಗುಜ್, ಕಾಮನ್ ಟೇಲ್, ಇರಿಟೇಲ್, ಟಫ್ಟೆಡ್, ಪೋಚಾರ್ಡ್‌ ಇಂಡಿಯನ್‌ ಶಾಗ್, ಸ್ನೇಕ್‌ ಬರ್ಡ್, ಕಾಮನ್‌ ಪೋಚಾರ್ಡ್, ಇಂಡಿಯನ್‌ ಮೋರ್‌ ಹೆನ್ನ, ಕುಟಲಾರ್ಜ್ ಕಾರ್ಮೊರೆಂಟ್, ಲಿಟಲ್‌ ಕಾರ್ಮೋರೆಂಟ್, ಪ್ವೆಡ್, ಕಿಂಗ್‌ ಫಿಷರ್ ಇತ್ಯಾದಿ ಪಕ್ಷಿ ಸಂಕುಲದ ಅಮೂಲ್ಯ ಸಂಪತ್ತು ಇಲ್ಲಿದೆ. ಚಳಿಗಾಲದಲ್ಲಿ ಅರ್ಜಂಟೈನಾ, ನೈಜೀರಿಯಾ. ಸೈಬಿರಿಯಾ ಹಾಗೂ ಶ್ರೀಲಂಕಾದಿಂದ ಅನೇಕ ಪ್ರಬೇಧದ ಪಕ್ಷಿಗಳು ಇಲ್ಲಿಗೆ ವಲಸೆ ಬಂದು ಸಂತಾನೋತ್ಪತ್ತಿ ಮಾಡುತ್ತವೆ. ಇಂತಹ ಅಮೂಲ್ಯ ಪಕ್ಷಿಧಾಮ ಈಗ ನಿರ್ವಹಣೆ ಇಲ್ಲದೇ ಕಳಾಹೀನವಾಗುತ್ತಿದೆ. ಮೀನುಗಾರರ ಹಾವಳಿಯಿಂದಾಗಿ ಪಕ್ಷಿಗಳು ಸ್ಥಳ ತೊರೆಯುತ್ತಿವೆ.

ADVERTISEMENT

ಕುಸಿದ ಕೆರೆನೀರು ಸಂಗ್ರಹ: ನಾರಾಯಣಪುರ ಜಲಾಶಯದಲ್ಲಿ ನೀರಿಲ್ಲದಿರುವುದರಿಂದ ಕೃಷ್ಣಾ ಎಡದಂಡೆ ನಾಲೆ ಒಣಗಿದೆ. ಗದ್ದೆಗಳು ಬತ್ತಿವೆ. ಹಾಗಾಗಿ, ಪಕ್ಷಿಧಾಮದಲ್ಲಿ ಕೆರೆ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ. ಇದರಿಂದ ಪಕ್ಷಿ ಸಂಕುಲಕ್ಕೂ ಸಂಕಷ್ಟ ಎದುರಾಗಿದೆ. ಇದರ ಮಧ್ಯೆ ಮೀನುಗಾರರ ಹಾವಳಿ ಪಕ್ಷಿಗಳು ಸ್ಥಳದಿಂದ ವಿಮುಖವಾಗಲು ಕಾರಣವಾಗಿದೆ. ಪಕ್ಷಿಧಾಮದ ಕೆರೆಯಲ್ಲಿರುವ ನೀರನ್ನು ಸುತ್ತಮುತ್ತಲೂ ಇರುವ ರೈತರು ಅಕ್ರಮ ಪಂಪ್‌ಸೆಟ್‌ ಇಟ್ಟು ಹೊಲಗಳಿಗೆ ಪೂರೈಕೆ ಮಾಡಿಕೊಳ್ಳುತ್ತಿರುವುದರಿಂದ ಕೆರೆ ಕೆಲವೇ ದಿನಗಳಲ್ಲಿ ಬರಿದಾಗಲಿದೆ. ಕೆರೆ ಬರಿದಾದರೆ ಪಕ್ಷಿ ಸಂಕುಲದ ಗತಿಯೇನು?! ಎಂಬುದು ಪಕ್ಷಿಪ್ರಿಯರ, ಪ್ರವಾಸಿಗರ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.