ADVERTISEMENT

ಭೀಮಾ ನದಿ ಬ್ಯಾರೇಜ್‌ ಗೇಟ್ ಶಿಥಿಲ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 5:10 IST
Last Updated 15 ಮಾರ್ಚ್ 2017, 5:10 IST

ಯಾದಗಿರಿ: ಜಿಲ್ಲೆಯ ಭೀಮಾ ನದಿಗೆ ನಿರ್ಮಿಸಲಾದ ಬ್ಯಾರೇಜ್‌ಗಳ ಗೇಟ್‌ಗಳು ಶಿಥಿಲಾವಸ್ಥೆಯಲ್ಲಿದ್ದು, ಇದರಿಂದ ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಗೇಟ್ ದುರಸ್ತಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವರಡ್ಡಿ ಪಾಟೀಲ್ ಅನಪುರ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳಾವರ ನಡೆದ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲೆಯ ಹೊರವಲಯದಲ್ಲಿನ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನ ಗೇಟ್‌ಗಳು ಸಂಪೂರ್ಣ ಶಿಥಿಲಗೊಂಡಿವೆ. ತಾಲ್ಲೂಕಿನ ಗೊಂದಡಗಿ ಬ್ಯಾರೇಜ್‌ನ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕೋಟ್ಯಂತರ ಅನುದಾನ ಖರ್ಚು ಮಾಡಿ ಬ್ಯಾರೇಜ್ ನಿರ್ಮಿಸಿದೆ. ಆದರೆ, ಗೇಟ್‌ಗಳು ಶಿಥಿಲಗೊಂಡ ಕಾರಣ ನೀರು ನಿಲ್ಲದೇ ವ್ಯರ್ಥವಾಗಿ ತೆಲಂಗಾಣಕ್ಕೆ ಹರಿದು ಹೋಗುತ್ತಿದೆ. ಈ ಗೇಟ್‌ಗಳ ದುರಸ್ತಿಗೆ ಕೂಡಲೇ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಅವರು ಸೂಚಿಸಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಆಸ್ತಿಯನ್ನು ಕೆಲವರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಶಾಲೆಯ ಸುತ್ತಮುತ್ತ  ಕಾಂಪೌಂಡ್ ನಿರ್ಮಿಸಲು ಕೂಡಲೇ ಕ್ರಮಕೈಗೊಳ್ಳ್ಳುವಂತೆ ಡಿಡಿಪಿಐ ಕೆಂಚೇಗೌಡ ಅವರಿಗೆ ಸೂಚಿಸಿದ ಅನಪುರ, ಜಿಲ್ಲೆಯ ಮೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡುತ್ತಿಲ್ಲ.

ADVERTISEMENT

ಇನ್ನೂ ಯಾದಗಿರಿ ಬಿಇಒ ವೈಯಕ್ತಿಕ ವ್ಯವಹಾರದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾರಗಟ್ಟಲೇ ರಜೆ ಹಾಕುತ್ತಿದ್ದಾರೆ. ಇದಕ್ಕೆ ನೀವು ಅನುಮತಿ ನೀಡುವಂತಿಲ್ಲ. ಪರೀಕ್ಷೆ ಮುಗಿದ ಬಳಿಕ ಬೇಕಾದರೆ ರಜೆ ಪಡೆದುಕೊಳ್ಳಲಿ ಎಂದು ಸೂಚಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರ ಪಾಟೀಲ್ ವಜ್ಜಲ್ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿನ ಶಾಲೆಗಳಲ್ಲಿ ಮೂಲಸೌಕರ್ಯ ಒದಗಿಸಲು ಕೂಡಲೇ ಮುಂದಾಗಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ ಯಾಳಗಿ, ಅರಣ್ಯ ಇಲಾಖೆಯಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ನಾನಾ ಯೋಜನೆಗಳಿದ್ದು, ಅಧಿಕಾರಿಗಳು ಪರಿಸರ ಉಳಿವಿಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಸಭೆಯಲ್ಲಿ ಕೃಷಿ, ಆರೋಗ್ಯ,ಅರಣ್ಯ, ಸಮಾಜ ಕಲ್ಯಾಣ ಸೇರಿದಂತೆ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

**

ಅಧಿಕಾರಿಗಳು ಗೈರು; ಅಧ್ಯಕ್ಷ ಗರಂ
ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪುರ ಗರಂ ಆದ ಪ್ರಸಂಗ ಸಭೆಯಲ್ಲಿ ನಡೆಯಿತು. ಸಭೆಯಲ್ಲಿ ನಿರ್ಮಿತಿ, ಸಾಮಾಜಿಕ ಭದ್ರತೆ, ಕೆಬಿಜೆಎನ್‌ಎಲ್, ಜಿಲ್ಲಾ ಶಸ್ತ್ರಚಿಕಿತ್ಸಕ, ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಗೈರು ಹಾಜರಾಗಿದ್ದರು.

ಇದರಿಂದ ಕೆಂಡಾಮಂಡಲರಾದ ಅಧ್ಯಕ್ಷರು, ಇದು ಕೆಡಿಪಿ ಸಭೆ ಎಂಬ ಪ್ರಜ್ಞೆ ಅಧಿಕಾರಿಗಳಿಗಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ಕೆಲ ಇಲಾಖೆ ಅಧಿಕಾರಿಗಳಂತೂ ಸಭೆಗಳಿಗೆ ನೆಂಟರನ್ನು ಕಳಿಹಿಸುವಂತೆ ಇಲಾಖೆ ಸಿಬ್ಬಂದಿಯನ್ನು ಕಳುಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.