ADVERTISEMENT

ಮಹತ್ವ ಕಳೆದುಕೊಂಡ ಸಮ್ಮೇಳನದ ಗೋಷ್ಠಿಗಳು!

ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಸನ್ಮಾನಕ್ಕೆ ಹೆಚ್ಚು ಬಳಕೆಯಾದ ಸಮಯ, ಬಿಸಿಲಲ್ಲಿ ಬಳಲಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 8:21 IST
Last Updated 6 ಮಾರ್ಚ್ 2017, 8:21 IST
ಮಹತ್ವ ಕಳೆದುಕೊಂಡ ಸಮ್ಮೇಳನದ ಗೋಷ್ಠಿಗಳು!
ಮಹತ್ವ ಕಳೆದುಕೊಂಡ ಸಮ್ಮೇಳನದ ಗೋಷ್ಠಿಗಳು!   
ಶಹಾಪುರ: ಶಹಾಪುರದಲ್ಲಿ ಶನಿವಾರ ನಡೆದ ದ್ವೀತಿಯ ಕನ್ನಡ ಸಾಹಿತ್ಯ ಸಮ್ಮೇಳನವು ಕೇವಲ ಅಬ್ಬರದ ಮೆರವಣಿಗೆಯಲ್ಲಿ ಕಾಲ ಹರಣವಾಗಿದೆ. ಅರ್ಥಪೂರ್ಣ ಚಿಂತನೆ ಗೋಷ್ಠಿ ನಡೆಯದೆ ಸಮಯದ ಅಭಾವದಿಂದ ಮೊಟಕುಗೊಂಡಿರುವುದು ಬೇಸರ ಮೂಡಿಸಿತು ಎಂದು ಭೀಮರಾಯನಗುಡಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಸಂಚಾಲಕ ಭಾಸ್ಕರರಾವ ಬೇಸರ ವ್ಯಕ್ತಪಡಿಸಿದ್ದಾರೆ.
 
ಬೆಳಿಗ್ಗೆ 9ಗಂಟೆ ಶುರುವಾದ ಅಧ್ಯಕ್ಷರ ಮೆರವಣಿಗೆ ಯಾವುದೇ ಉತ್ಸವಕ್ಕಿಂತ ಕಡಿಮೆ ಇಲ್ಲದಂತೆ ಭರ್ಜರಿಯಾಗಿ ಸಾಗಿತು. ಡೊಳ್ಳು, ಹಲಗೆ, ಲೇಜಿಮ್ ಹೀಗೆ ನಾನಾ ತಂಡಗಳು  ಸಾಥ್ ನೀಡಿದ್ದವು, ನಗರದ ವಿವಿಧ ಶಾಲಾ ಮಕ್ಕಳು ತಂಡೋಪತಂಡವಾಗಿ ಭಾಗವಹಿಸಿದ್ದವು.
 
ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಮಕ್ಕಳು ಬಸವಳಿಯ ತೊಡಗಿದರು. ಕುಡಿಯಲು ನೀರಿಲ್ಲದೆ ರಸ್ತೆಯಲ್ಲಿ ಪರದಾಡಿದರು. ಮೆರವಣಿಗೆಗೆ ಕರೆದುಕೊಂಡು ಬಂದ ಶಿಕ್ಷಕರು ಹೆಚ್ಚಿನ ಸಂಕಷ್ಟ ಎದುರಿಸಿದರು. ಬೀದರ್‌–ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಮೇಲೆ ಕುಳಿತುಕೊಂಡಿದ್ದರು. ನೀರಿನ ಬಾಯಾರಿಕೆಯಾದರೂ ಯಾರು ಕುಡಿಯುವ ನೀರಿನ ವ್ಯವಸ್ಥೆ  ಮಾಡಲಿಲ್ಲ ಎಂದು ಸಿಪಿಎಸ್ ಶಾಲಾ ವಿದ್ಯಾರ್ಥಿನಿ ಮೇಘ ಅಳಲು ತೋಡಿಕೊಂಡರು.
 
ಬೆಳಿಗ್ಗೆ 11.30ಕ್ಕೆ ಆರಂಭವಾಗಬೇಕಾದ ಸಮ್ಮೇಳನ ಮಧ್ಯಾಹ್ನ 12.45 ಚಾಲನೆ ನೀಡಿದರು. ಬರೋಬ್ಬರಿ 3 ನಡೆಯಿತು ಎನ್ನುತ್ತಾರೆ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅಮರೇಶ ಇಟಗಿ.
 
ಮಧ್ಯಾಹ್ನ 1.30ಕ್ಕೆ ಆರಂಭವಾಗಬೇಕಿದ್ದ ವಿವಿಧ ಗೋಷ್ಠಿಗಳು 3ಗಂಟೆಗೆ ಆರಂಭವಾಯಿತು. ಸಮ್ಮೇಳನದಲ್ಲಿ ಸಮಯದ ಅಭಾವದ ಕಾರಣ ವಿಚಾರ ಮಂಡನೆಗೆ ಬಂದಿದ್ದ ಗಣ್ಯರಿಗೆ ಐದರಿಂದ ಹತ್ತು ನಿಮಿಷ ಕಾಲಾವಕಾಶ ನೀಡಲಾಯಿತು. ಇದರಿಂದಾಗಿ ಮಹತ್ವದ ವಿಚಾರಗಳ ಕುರಿತು ನಡೆಯಬೇಕಿದ್ದ ಗೋಷ್ಠಿ ಅರ್ಥ ಕಳೆದುಕೊಂಡವು.
 
ಶಹಾಪುರ ತಾಲ್ಲೂಕಿನ ಸಾಹಿತ್ಯ ಮತ್ತು ಸಂಸ್ಕೃತಿ ಒಂದು ಅವಲೋಕನ ಗೋಷ್ಠಿಯಲ್ಲಿ ಮುಖ್ಯವಾಗಿ ಸಮ್ಮೇಳನಾಧ್ಯಕ್ಷರ ‘ಬರಹ–ಬದುಕು’ ’ಶಹಾಪುರ ತಾಲ್ಲೂಕಿನ ನೀರಾವರಿ ಮತ್ತು ರೈತರ ಸಮಸ್ಯೆಗಳು’ ಸೃಜನಶೀಲ ಸಾಹಿತ್ಯ ಮತ್ತು ಸಾಹಿತಿಗಳು’ ತಾಲ್ಲೂಕಿನ ಸ್ಮಾರಕಗಳು ಮತ್ತು ಸಂಶೋಧನೆ’ ಇಂತಹ ಮಹತ್ವದ ವಿಷಯಗಳ ಬಗ್ಗೆ ಅರ್ಥಪೂರ್ಣವಾಗಿ ಚಿಂತನ–ಮಂಥನ ನಡೆಯದೆ ಸೋತು ಹೋದವು ಎನ್ನುತ್ತಾರೆ ಉಪನ್ಯಾಸ ನೀಡಲು ಬಂದಿದ್ದ ಭಾಸ್ಕರ್‌ ರಾವ ಮುಡಬೂಳ.
 
ಇನ್ನಾದರು ಮುಂದೆ ಸಾಹಿತ್ಯ ಸಮ್ಮೇಳನ ನಡೆಸುವ ಸಂಘಟಕರು ಸಮಯ ಪಾಲನೆ, ಅರ್ಥಪೂರ್ಣ ಚಿಂತನ–ಮಂಥನ ಗೋಷ್ಠಿಗಳಿಗೆ ಹೆಚ್ಚಿನ ಸಮಯ ನೀಡಿದರೆ ಒಂದಿಷ್ಟು ಸಾಹಿತ್ಯ ಆಸಕ್ತಿರಿಗೆ ಉಪಯೋಗವಾಗುತ್ತದೆ ಎನ್ನುವುದು ಸಾಹಿತ್ಯಪ್ರೇಮಿಗಳ ಅನಿಸಿಕೆ. 
 
ಸಾಹಿತಿ ಸಮಾಜದ ಶಾಸಕ: ಸಾಹಿತಿ  ವನದುರ್ಗ
ಶಹಾಪುರ: ಸಮಾಜದ ಸಮಸ್ಯೆ ಹಾಗೂ ಸವಾಲುಗಳಿಗೆ ಸಾಹಿತಿಗಳು ಸದಾ ಪರಿಹಾರ ನೀಡಬೇಕು. ಕಾಲ ಬದಲಾದಂತೆ ಸಮಸ್ಯೆಗಳ ಸ್ವರೂಪ ಕೂಡ ಪಲ್ಲಟ ಹೊಂದುವುದನ್ನು ಸಾಹಿತಿ ಸೂಕ್ಷ್ಮವಾಗಿ ಒಳಗಣ್ಣಿನಿಂದ ನೋಡುತ್ತಾ ಸಾಹಿತಿ ಸಮಾಜದ ಶಾಸಕನಾಗಬೇಕು ಎಂದು ಸಾಹಿತಿ ಡಾ.ರಂಗರಾಜ ವನದುರ್ಗ ಹೇಳಿದರು.

ಆರಬೋಳ ಕಲ್ಯಾಣ ಮಂಟಪದಲ್ಲಿ ಶನಿವಾರ ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವೈದ್ಯರು, ವಕೀಲರು, ಎಂಜಿನಿಯರ್ ಸಮ್ಮೇಳನವನ್ನು ಆಚರಿಸುತ್ತಾರೆ. ಅದರಂತೆ ಸಾಹಿತಿಗಳು ಕೂಡಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸುವುದರ ಮೂಲಕ ತಮ್ಮನ್ನು ತಾವು ಆತ್ಮಾವಲೋಕನಕ್ಕೆ ಒಳಪಡಿಸಿಕೊಳ್ಳುತ್ತಾರೆ. ಸಮಾಜ ಅನುಭವಿಸುತ್ತಿರುವ ಸಮಸ್ಯೆ, ಸಂಕಟ, ಮಹಿಳೆಯ ಶೋಷಣೆ ಹೀಗೆ ಹತ್ತಾರು ಸಂಕಷ್ಟಗಳನ್ನು ನಾವು ಅದರಲ್ಲಿ ಪಾತ್ರದಾರಿಯಂತೆ ಭಾಗವಹಿಸಿ ಅಕ್ಷರದ ರೂಪದಲ್ಲಿ ಅರಿವಿನ ಬೆಳಕನ್ನು ಸಮಾಜಕ್ಕೆ ನೀಡುವ ಸಾಹಿತಿಯ ಕೊಡುಗೆ ಅನ್ಯನ್ಯವಾಗಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಸಿದ್ದರಾಮ ಹೊನ್ಕಲ್ ಮಾತನಾಡಿದರು. ಫಕೀರೇಶ್ವರಮಠದ ಗುರುಪಾದೇಶ್ವರ ಸ್ವಾಮೀಜಿ, ಹನುಮೇಗೌಡ ಮರಕಲ್, ವಿಶ್ವನಾಥರಡ್ಡಿ ಕೊಡಮನಹಳ್ಳಿ, ಶಿವಮಹಾಂತ ಚಂದಾಪೂರ, ಗುಂಡಪ್ಪ ತುಂಬಿಗಿ, ಆರ್.ಎಸ್.ಹಳಗೊಂಡ, ಬಸವರಾಜ ವಿಭೂತಿಹಳ್ಳಿ, ಶಿವಣ್ಣ ಇಜೇರಿ, ಸೂಗಯ್ಯ ಹಿರೇಮಠ, ಡಾ.ಎಂ.ಎಸ್.ಶಿರವಾಳ, ಪತ್ರಕರ್ತರಾದ ಶಿವರಂಜನ ಸತ್ಯಂಪೇಟೆ, ಈರಣ್ಣ ಹಾದಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.