ADVERTISEMENT

ಮಹಲರೋಜಾ: 34 ಜೋಡಿಗೆ ಕಂಕಣಭಾಗ್ಯ

ಶಹಾಪುರ: ಯಮನೂರಪ್ಪ ಜಾತ್ರಾ ಮಹೋತ್ಸವ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:19 IST
Last Updated 22 ಮಾರ್ಚ್ 2017, 9:19 IST
ಶಹಾಪುರ ತಾಲ್ಲೂಕಿನ ಮಹಲರೋಜಾ ಗ್ರಾಮದ ಯಮನೂರಪ್ಪ ಮುತ್ಯಾ ಜಾತ್ರಾ ಮಹೋತ್ಸವ ಪ್ರಯುಕ್ತ   ಮಂಗಳವಾರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನವದಂಪತಿ
ಶಹಾಪುರ ತಾಲ್ಲೂಕಿನ ಮಹಲರೋಜಾ ಗ್ರಾಮದ ಯಮನೂರಪ್ಪ ಮುತ್ಯಾ ಜಾತ್ರಾ ಮಹೋತ್ಸವ ಪ್ರಯುಕ್ತ ಮಂಗಳವಾರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನವದಂಪತಿ   

ಶಹಾಪುರ: ಮಧ್ಯಮ ವರ್ಗದ ಸಮುದಾಯಕ್ಕೆ ಸಾಮೂಹಿಕ ವಿವಾಹ ಹೊಸ ಬದಲಾವಣೆಗೆ ನಾಂದಿಯಾಗಲಿದೆ. ಅನವಶ್ಯಕ ದುಂದುವೆಚ್ಚ ಮಾಡಿ ಆರ್ಥಿಕ ತೊಂದರೆ ಅನುಭವಿಸುವುದು ಬೇಡ. ಅದ್ದೂರಿ ಮದುವೆಗೆ ವೆಚ್ಚ ಮಾಡುವ ಹಣ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡಬೇಕು ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.

ತಾಲ್ಲೂಕಿನ ಮಹಲರೋಜಾ ಗ್ರಾಮದ ಯಮನೂರಪ್ಪ ಜಾತ್ರಾ ಮಹೋತ್ಸವ ಪ್ರಯುಕ್ತ ಮಂಗಳವಾರ ನಡೆದ 34 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಠಗಳು ಸಮಾಜಮುಖಿ ಕೆಲಸ ನಿರ್ವಹಿಸುತ್ತಿರುವ ಕಾರಣ ನಾವು ಅದರ ನೆರಳಿನಲ್ಲಿ ಬೆಳೆಯುತ್ತಿದ್ದೇವೆ. ಜಾತ್ರೆ ಪ್ರಯುಕ್ತ  ದೇವಸ್ಥಾನದ ಪೀಠಾಧಿಪತಿ ಹಣಮಂತರಾಯ ಪೂಜಾರಿಯವರ  ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುವ ಸಾಮೂಹಿಕ ವಿವಾಹದ ಪುಣ್ಯದ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ದಾಂಪತ್ಯಕ್ಕೆ ಕಾಲಿಡುವ ಜೋಡಿಗಳು ತಾಳ್ಮೆ, ಸಂಯಮ ಬೆಳೆಸಿಕೊಳ್ಳಬೇಕು. ಪತಿ–ಪತ್ನಿ ಜೀವನರಥದ ಎರಡು ಚಕ್ರದ ಕೀಲು ಇದ್ದಂತೆ. ಎರಡೂ ಸಮಾನಾಂತರವಾಗಿ ಸಾಗಿದಾಗ ಬದುಕು ಹಾಲು– ಜೇನಿನಂತೆ ಇರುತ್ತದೆ. ಮಿತ ಸಂತಾನ ಆದ್ಯತೆಯಾಗಲಿ ಎಂದರು.

ಜೆಡಿಎಸ್‌ ಮುಖಂಡ ಶರಣಪ್ಪ ಸಲಾದಪುರ ಮಾತನಾಡಿ, ಆಡಂಬರ, ಪ್ರತಿಷ್ಠೆಗೆ ಜೋತುಬಿದ್ದು ಹೈರಾಣ ಆಗುವುದಕ್ಕಿಂತ ಸರಳ ವಿವಾಹ ಸೂಕ್ತ ಎಂದರು. 
ದೇವಸ್ಥಾನದ ಪೀಠಾಧಿಪತಿ ಹಣಮಂತರಾಯ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶರಣಮ್ಮ ಕಾಶಿರಾಜ,

ಶಿವಲಿಂಗ ಶರಣರು, ಮುನೇಂದ್ರ ದೇವಿ ಸ್ವಾಮೀಜಿ, ಅನಂದಶ್ರಮದ ಶರಣಮ್ಮತಾಯಿ, ಮಾರ್ಥಂಡಪ್ಪ ಪೂಜಾರಿ, ಶರಣಪ್ಪ ಶರಣರು, ಸೂಗೂರೇಶ್ವರ, ಅಯ್ಯಣ್ಣ ಕನ್ಯಾಕೊಳ್ಳೂರ, ಈಶ್ವರ ರೋಜಾ, ಪ್ರಕಾಶ ನಾಯ್ಕೋಡಿ, ದೇವು ನಾಯ್ಕೋಡಿ, ಮಲ್ಲಣ್ಣ ಹೊಸ್ಮನಿ, ಭೀಮಣ್ಣ, ಶೇಖಾವತ ಪೊಲೀಸ ಪಾಟೀಲ  ಇದ್ದರು.

*
ಮದುವೆಗೆ ಅನಗತ್ಯ ಖರ್ಚುವೆಚ್ಚ ಮಾಡುವುದು ಕೈಬಿಡಬೇಕು. ಸರಳ ವಿವಾಹ ಜೀವನದಲ್ಲಿ ಹೆಚ್ಚು ಭದ್ರತೆ ನೀಡುತ್ತದೆ. ದಾಂಪತ್ಯ ದಲ್ಲಿ ಹೊಂದಾಣಿಕೆ ಮುಖ್ಯ.
-ರಾಜೂ ಗೌಡ,
ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT