ADVERTISEMENT

ಮೆರವಣಿಗೆಗೆ ಅನುಮತಿ ಕಡ್ಡಾಯ

ನಾಮಪತ್ರ ಸಲ್ಲಿಕೆ ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 11:47 IST
Last Updated 18 ಏಪ್ರಿಲ್ 2018, 11:47 IST
ಪ್ರವೀಣಪ್ರಿಯಾ
ಪ್ರವೀಣಪ್ರಿಯಾ   

ಸುರಪುರ: ‘ನಾಮಪತ್ರ ಸಲ್ಲಿಸುವ ಸಮಯದಲ್ಲಿ ಮೆರವಣಿಗೆ ನಡೆಸಬೇಕಿ ದ್ದಲ್ಲಿ ಕಡ್ಡಾಯವಾಗಿ ಅನುಮತಿ ಪಡೆಯ ಬೇಕು. ಮೆರವಣಿಗೆಯ ಖರ್ಚು ಆ ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಲಾಗುವುದು’ ಎಂದು ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಡೆವಿಡ್ ತಿಳಿಸಿದರು.

ತಹಶೀಲ್ದಾರ್‌ ಕಚೇರಿಯಲ್ಲಿ ಈಚೆಗೆ ಏರ್ಪಡಿಸಿದ್ದ ಸಭೆಯಲ್ಲಿ ನಾಮಪತ್ರ ಸಲ್ಲಿಸಲು ಇರುವ ಸೂಚನೆಗಳನ್ನು ಅವರು ವಿವರಿಸಿದರು.

‘ಶಾಂತಿಯುತ ಮತ್ತು ವ್ಯವಸ್ಥಿತ ಚುನಾವಣೆಗಾಗಿ ಅಭ್ಯರ್ಥಿಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲಂಘಿಸಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು. ನಾಮಪತ್ರ ಪರಿಶೀಲನೆ ವೇಳೆ ಸೂಚನೆಯನ್ನು ಪಾಲಿಸದೆ ಇರುವ ಅಭ್ಯರ್ಥಿಗಳ ನಾಮಪತ್ರ ಅಸಿಂಧುಗೊಳ್ಳಲಿದೆ. ನಾಮಪತ್ರ ಅರ್ಜಿಯ ಎಲ್ಲಾ ಕಾಲಂಗಳನ್ನು ಸರಿಯಾಗಿ ಭರ್ತಿ ಮಾಡಿರಬೇಕು. ನಮೂನೆ 26ರಲ್ಲಿ 20 ಮುಖ ಬೆಲೆಯ ಛಾಪಾ ಕಾಗದದ ಮೇಲೆ ನೋಟರಿಯೊಂದಿಗೆ ನೀಡಬೇಕು’ ಎಂದು ಹೇಳಿದರು.

ADVERTISEMENT

‘ಹೆಚ್ಚುವರಿಯಾಗಿ 20 ಛಾಪಾ ಕಾಗದದ ಮೇಲೆ ಚರ ಮತ್ತು ಸ್ಥಿರ ಆಸ್ತಿ ಸೇರಿ ಸರ್ಕಾರಕ್ಕೆ ಕಟ್ಟಬೇಕಿದ್ದ ಕರ ಪಾವತಿಸಿರುವ ಪ್ರಮಾಣಪತ್ರ ನೀಡಬೇಕು. ಸಂಬಂಧಪಟ್ಟ ಇಲಾಖೆ ಗಳಿಂದ ಬೇಬಾಕಿ ಪ್ರಮಾಣ ಪತ್ರ ಲಗತ್ತಿಸ ಬೇಕು. ಅನ್ವಯ ಆಗದ ಕಾಲಂಗಳಲ್ಲಿ ಅನ್ವಯಿಸುವುದಿಲ್ಲ ಅಥವಾ ನಿಲ್ ಎಂದು ಬರೆದು ಎಲ್ಲಾ ಪುಟಗಳಲ್ಲಿ ಸಹಿ ಮಾಡಿ ಮೂಲ ಪ್ರತಿಯೊಂದಿಗೆ ಒಂದು ಸೆಟ್ ಜೆರಾಕ್ಸ್‌ ಪ್ರತಿ ಸಲ್ಲಿಸಬೇಕು’ ಎಂದರು.

‘ಅಭ್ಯರ್ಥಿ ಮತ್ತು ಸೂಚಕರ ಮತದಾರ ಪಟ್ಟಿಯ ದೃಢೀಕೃತ ಪಟ್ಟಿ ಲಗತ್ತಿಸಬೇಕು. ರಾಷ್ಟ್ರೀಯ ಪಕ್ಷ ಮತ್ತು ನೋಂದಾಯಿತ ಪಕ್ಷಗಳ ಅಭ್ಯರ್ಥಿಗಳಾಗಿದ್ದಲ್ಲಿ ಎ ಮತ್ತು ಬಿ ನಮೂನೆಯನ್ನು ಏ. 24 ಮಧ್ಯಾಹ್ನ 3 ಗಂಟೆ ಒಳಗಾಗಿ ಕಚೇರಿಗೆ ಸಲ್ಲಿಸಬೇಕು. ಜಾತಿ ಪ್ರಮಾಣ ಪತ್ರದೊಂದಿಗೆ ₹5 ಸಾವಿರ ಠೇವಣಿಯನ್ನು ನಗದು ಅಥವಾ ಖಜಾನೆ ಇಲಾಖೆಯ ಚಾಲನ್ ಮೂಲಕ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತ್ರ ಸಲ್ಲಿಸಬಹುದು. ಠೇವಣಿ ಮಾತ್ರ ಒಂದು ಬಾರಿ ಪಾವತಿಸಿದರೆ ಸಾಕು. ಸೂಚಕರು ಅದೇ ಮತ ಕ್ಷೇತ್ರದವರಾಗಿರಬೇಕು’ ಎಂದು ಮಾಹಿತಿ ನೀಡಿದರು. ‘ರಾಷ್ಟ್ರೀಯ ಅಥವಾ ರಾಜ್ಯ ಪಕ್ಷವಾಗಿದ್ದಲ್ಲಿ ಒಬ್ಬರೆ ಸೂಚಕರ ಸಹಿ ಸಾಕು. ನೋಂದಾಯಿತ, ಪಕ್ಷೇತರರರಾಗಿದ್ದಲ್ಲಿ 10 ಜನ ಸೂಚಕರ ಸಹಿ ಅಗತ್ಯವಾಗಿದೆ. ನಾಮಪತ್ರ ಸಲ್ಲಿಕೆಗೆ ಬರುವ ಅಭ್ಯರ್ಥಿಗಳಿಗೆ 100 ಮೀಟರ್ ಒಳಗಡೆ 3 ವಾಹನಗಳ ಪ್ರವೇಶಕ್ಕೆ ಅವಕಾಶವಿದೆ. ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿ ನಾಲ್ವರು ಮಾತ್ರ ಬರಬೇಕು. ಹೆಚ್ಚಿನ ಜನರನ್ನು ಕರೆತರುವಂತಿಲ್ಲ’ ಎಂದು ವಿವರಿಸಿದರು.

‘ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟ್‌ಗಳು ನಾಲ್ಕು ಸ್ಟಾಂಪ್ ಸೈಜ್ ಹಾಗೂ 4 ಪಾಸ್‌ಫೋಟೊ ಅಳತೆಯ ಒಟ್ಟು 8 ಭಾವಚಿತ್ರಗಳನ್ನು ನೀಡಬೇಕು. ಚುನಾವಣಾ ಉದ್ದೇಶಕ್ಕಾಗಿಯೇ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಹೊಸ ಖಾತೆ ತೆಗೆದು ಪಾಸ್‌ಪುಸ್ತಕ ಜೆರಾಕ್ಸ್ ಪ್ರತಿ ನೀಡಬೇಕು. ‘ಮತ ಪತ್ರದಲ್ಲಿ ತಮ್ಮ ಹೆಸರು ಯಾವ ರೀತಿ ಮುದ್ರಿತವಾಗಬೇಕು ಎಂಬ ಕುರಿತು ಪ್ರಮಾಣ ಪತ್ರ ಸಲ್ಲಿಸಬೇಕು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.