ADVERTISEMENT

ರಾಜ್ಯ ರೈತರ ನೂರಾರು ಎಕರೆ ಭೂಮಿ ಮುಳುಗಡೆ

ನಿರಂತರ ಮಳೆಗೆ ತೆಲಂಗಾಣದ ಸಂಗಂಬಂಡ ಜಲಾಶಯ ಭರ್ತಿ

ಮಲ್ಲೇಶ್ ನಾಯಕನಹಟ್ಟಿ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಯಾದಗಿರಿ ಸಮೀಪದ ರಾಜ್ಯ ಗಡಿಯ ಚಿಲೇರಿ ಗ್ರಾಮದ ರೈತರ ಭೂಮಿ ತೆಲಂಗಾಣ ರಾಜ್ಯದ ಸಂಗಂಬಂಡ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿವುದು
ಯಾದಗಿರಿ ಸಮೀಪದ ರಾಜ್ಯ ಗಡಿಯ ಚಿಲೇರಿ ಗ್ರಾಮದ ರೈತರ ಭೂಮಿ ತೆಲಂಗಾಣ ರಾಜ್ಯದ ಸಂಗಂಬಂಡ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿವುದು   

ಯಾದಗಿರಿ: ಕರ್ನಾಟಕದ ಗಡಿಯಲ್ಲಿ ತೆಲಂಗಾಣ ರಾಜ್ಯ ಸರ್ಕಾರವು ನಿರ್ಮಿಸಿರುವ ಸಂಗಂಬಂಡ ಜಲಾಶಯವು ನಿರಂತರ ಮಳೆಯಿಂದ ತುಂಬಿದ್ದು, ಜಿಲ್ಲೆಯ ಕರಣಗಿ, ಜೈಗ್ರಾಮ, ಇಡ್ಲೂರ, ಚಿಲೇರಿ ಗ್ರಾಮದ ರೈತರ ನೂರಾರು ಎಕರೆ ಭೂಮಿ ಮುಳುಗಡೆಯಾಗಿದೆ. ಯಾದಗಿರಿ ತಾಲ್ಲೂಕಿನ ಮಳೆ ಬೀಳುವ ಕಣಿವೆ ಪ್ರದೇಶವನ್ನು ಗುರಿಯಾಗಿಸಿಕೊಂಡು ತೆಲಂಗಾಣ ಸಂಗಂಬಂಡ ಗ್ರಾಮದ ಬಳಿ ಒಟ್ಟು 3 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಿದೆ.

ಸೇಡಂ ತಾಲ್ಲೂಕು ಭಾಗದಲ್ಲಿ ಹಾಗೂ ಯಾದಗಿರಿಯ ಗುರುಮಠಕಲ್ ಭಾಗದ ಕಣಿವೆ ಭಾಗದಲ್ಲಿ ಬೀಳುವ ಮಳೆನೀರು ನಂದೇಪಲ್ಲಿ ಬೃಹತ್‌ ಹಳ್ಳದ ಮೂಲಕ ಸಂಗಂಬಂಡ ಜಲಾಶಯ ಸೇರುತ್ತದೆ. ಜಲಾಶಯ ಭರ್ತಿಯಾದಾಗಲೆಲ್ಲಾ ಕರಣಗಿ, ಜೈಗ್ರಾಮ, ಇಡ್ಲೂರ, ಚಿಲೇರಿ ಗ್ರಾಮಗಳ ಫಲವತ್ತಾದ ಭೂಮಿ ಮುಳುಗಡೆಯಾಗುತ್ತದೆ.

ಈ ಬಾರಿಯ ನಿರಂತರ ಮಳೆಗೆ ನಂದೇಪಲ್ಲಿ ಹಳ್ಳ ಹರಿಯುತ್ತಿದೆ. ತೆಲಂಗಾಣದ ಜಲಾರ್‌ ಬಳಿಯ ಕೃಷ್ಣಾ ನದಿಯಿಂದಲೂ ಜಲಾಶಯಕ್ಕೆ ಕಾಲುವೆ ಮೂಲಕ ನೀರು ಸಂಗ್ರಹಿಸುತ್ತಿರುವುದರಿಂದ ಸಂಗಂಬಂಡ ಜಲಾಶಯ ತುಂಬುತ್ತಿದೆ. ಇದರಿಂದ ಹಿನ್ನೀರಿನಲ್ಲಿ ರೈತರ ಭೂಮಿ ಮುಳುಗಡೆಯಾಗುತ್ತಿದ್ದು, ಲಕ್ಷಾಂತರ ರೂಪಾಯಿ ಬೆಳೆಹಾನಿಯಾಗಿದೆ.

ADVERTISEMENT

‘ರಾಯಚೂರು ಜಿಲ್ಲೆಯ ಸಮೀಪ ತೆಲಂಗಾಣ ಕೃಷ್ಣಾ ನದಿಗೆ ಜುರಾರ್ ಹೆಸರಿನ ಬೃಹತ್‌ ಡ್ಯಾಂ ನಿರ್ಮಿಸಿದೆ. ರಾಜ್ಯದಲ್ಲಿ ಮಳೆ ಕೊರತೆಯಾದಾಗ ಈ ಡ್ಯಾಂನಿಂದ ಕಾಲುವೆ ಮೂಲಕ ಸಂಗಂಬಂಡ ಜಲಾಶಯಕ್ಕೆ ನೀರು ಸಂಗ್ರಹಿಸಲಾಗುತ್ತದೆ. ಮಳೆ ಕೊರತೆಯಾದಾಗಲೂ ಇಲ್ಲಿನ ಜಲಾಶಯದ ಹಿನ್ನೀರಿನಲ್ಲಿ ರೈತರ ಭೂಮಿ ನಿರಂತರ ಮುಳುಗಡೆ ಆಗುತ್ತದೆ’ ಎಂದು ರೈತ ಆಶಪ್ಪ ಬಾಗಲಿ ಹೇಳುತ್ತಾರೆ.

‘ತೆಲಂಗಾಣ 3 ಟಿಎಂಸಿಯಷ್ಟು ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಿಕೊಂಡು ರಾಜ್ಯದಲ್ಲಿನ ಮಳೆನೀರನ್ನು ಸಂಗ್ರಹಿಸುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ತಕರಾರು ತೆಗೆದಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಸರ್ಕಾರಕ್ಕೆ ಆಕ್ಷೇಪಣಾ ವರದಿ ಸಲ್ಲಿಸಿಲ್ಲ. ಗಡಿಭಾಗದ ರೈತರು ಭೂಮಿ ಮುಳುಗಡೆಯಂತಹ ಸಂಕಷ್ಟ ಅನುಭವಿಸುತ್ತಿದ್ದರೂ ಜಿಲ್ಲಾಡಳಿತ ಕೂಡ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ’ ಎಂದು ಗುರುಮಠಕಲ್‌ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಾಯಿಬಣ್ಣ ಬೋರಬಂಡಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.