ADVERTISEMENT

ವಜ್ರ ದೊರೆತ ಊರಲ್ಲಿ ಹಲವು ಸಮಸ್ಯೆ

ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮ

ಟಿ.ನಾಗೇಂದ್ರ
Published 3 ಜನವರಿ 2017, 13:08 IST
Last Updated 3 ಜನವರಿ 2017, 13:08 IST
ವಜ್ರ ದೊರೆತ ಊರಲ್ಲಿ ಹಲವು ಸಮಸ್ಯೆ
ವಜ್ರ ದೊರೆತ ಊರಲ್ಲಿ ಹಲವು ಸಮಸ್ಯೆ   

ಶಹಾಪುರ: ವಿಶ್ವ ಪ್ರಸಿದ್ಧ  ಕೊಹಿನೂರ ವಜ್ರ ದೊರೆತ ಸ್ಥಳದ ನೆಲೆಯಾದ ಕೊಳ್ಳೂರ(ಎಂ) ಗ್ರಾಮ ಕೃಷ್ಣಾ ನದಿ ತಟದಲ್ಲಿದೆ. ಕಲಬುರ್ಗಿ– ರಾಯಚೂರು ರಾಜ್ಯ ಹೆದ್ದಾರಿಯ ಸಮೀಪವೇ ಈ ಗ್ರಾಮವಿದ್ದರೂ  ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಗ್ರಾಮ ಪಂಚಾಯಿತಿಯ ಕೇಂದ್ರವಾಗಿದ್ದು, ಸುಮಾರು 3,000 ಸಾವಿರ ಜನಸಂಖ್ಯೆಯನ್ನು ಹೊಂದಿದೆ. 1ರಿಂದ 10ನೇ ತರಗತಿಯವರೆಗೆ ಶಾಲೆಯಿದ್ದು 740 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಒಳ ಚರಂಡಿಯ ವ್ಯವಸ್ಥೆ ಇಲ್ಲದೆ  ಇರುವುದರಿಂದ ಮನೆಯ ಅಕ್ಕಪಕ್ಕದ ನೀರು ನೇರವಾಗಿ ರಸ್ತೆಯನ್ನು ಆಕ್ರಮಿಸಿಕೊಂಡು ಕಲುಷಿತ ವಾತಾವರಣ ನಿರ್ಮಾಣಗೊಂಡಿದೆ.  ಸಮರ್ಪಕವಾದ ಒಳ ರಸ್ತೆಗಳಿಲ್ಲ. ಬೀದಿ ದೀಪಗಳು ಕಣ್ಣು ಮುಚ್ಚಿ ಅದೆಷ್ಟು ವರ್ಷವಾಗಿವೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂಬುದು ಸಮಾಧಾನದ ಸಂಗತಿ ಎನ್ನುತ್ತಾರೆ ಗ್ರಾಮದ ಮುಖಂಡ ಹಣಮಂತ ಭಂಗಿ.

ಗ್ರಾಮಕ್ಕೆ ಹೆದ್ದಾರಿಗೆ ಹೊಂದಿಕೊಂಡಿರುವ ಬಸ್ ತಂಗುದಾಣ ಶಿಥಿಲಾವಸ್ಥೆಗೆ ತಲುಪಿದೆ. ಅಲ್ಲಿ ಕುಳಿತುಕೊಳ್ಳಬೇಕು ಎಂದರೆ ಜೀವ ಕೈಯಲ್ಲಿ ಹಿಡಿದುಕೊಳ್ಳಬೇಕು. ಯಾವುದೇ  ಸಂದರ್ಭದಲ್ಲಿ ಅದು ಕುಸಿಯುವ ಭೀತಿ ಇದೆ.  ದೂರದ ಊರಿಗೆ ಪ್ರಯಾಣಿಸಲು ಆಗಮಿಸುವ ಮಹಿಳೆಯರು ಕುಳಿತುಕೊಳ್ಳಲು ಸ್ಥಳ ಇಲ್ಲವಾಗಿದೆ.

ಶಿಥಿಲಾವಸ್ಥೆಯಲ್ಲಿರುವ ನಿಲ್ದಾಣದ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ಕಟ್ಟಡ ಸ್ಥಾಪಿಸಲು ಗ್ರಾಮ ಪಂಚಾಯಿತಿ ಸದಸ್ಯ ಕೆಂಚಪ್ಪ ಕೋರಿ ಮನವಿ ಮಾಡಿದ್ದಾರೆ.ಗ್ರಾಮದಲ್ಲಿ ಶೌಚಾಲಯದ ಸಮಸ್ಯೆ ಹೆಚ್ಚು ಕಾಡುತ್ತಿದೆ. ಅದರಲ್ಲಿ ಮಹಿಳಾ ಶೌಚಾಲಯ ಇಲ್ಲವಾಗಿವೆ.

ರಾತ್ರಿ ಆಗುತ್ತಿದ್ದಂತೆ ಮಹಿಳೆಯರು ರಸ್ತೆ ಪಕ್ಕದಲ್ಲಿಯೇ ತುರ್ತು ಕ್ರಿಯೆಗಳನ್ನು ಪೂರೈಯಿಸಿಕೊಳ್ಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಾಣವು ಜಾಗೃತಿಯ ಕೊರತೆಯಿಂದ ಮುಗ್ಗರಿಸಿದೆ ಎನ್ನುತ್ತಾರೆ ಗ್ರಾಮದ ಯುವತಿ ಮಲ್ಲಮ್ಮ ಹೊತಪೇಟ.

ಗ್ರಾಮದಲ್ಲಿ ತ್ವರಿತವಾಗಿ ಒಳಚರಂಡಿ ಹಾಗೂ ಸಿ.ಸಿ ರಸ್ತೆಗಳನ್ನು ನಿರ್ಮಿಸಬೇಕು. ಹೊಸದಾಗಿ ಬಸ್ ನಿಲ್ದಾಣ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮಸ್ಥರ ಮನವಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.