ADVERTISEMENT

‘ಸಂಗೀತದಿಂದ ಮನಸ್ಸಿಗೆ ನೆಮ್ಮದಿ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 10:08 IST
Last Updated 21 ನವೆಂಬರ್ 2017, 10:08 IST

ಕಕ್ಕೇರಾ: ‘ಮನಸ್ಸಿಗೆ ನೆಮ್ಮದಿ, ಶಾಂತಿ ನೀಡುವ ಸಂಗೀತವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವಂತ ಕೆಲಸ ಸಾಗಬೇಕಿದೆ’ ಎಂದು ಮಾಜಿ ಸಚಿವ ರಾಜಾ ಮದನಗೋಪಾಲನಾಯಕ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಚೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕಸಾಪ ವರ್ಷದ ವ್ಯಕ್ತಿ ಪ್ರಶಸ್ತಿಗೆ ಭಾಜನರಾದ ಬಸಣ್ಣ ಗುರಿಕಾರ ಅವರನ್ನು ಸನ್ಮಾನಿಸಿ, ಅವರು ಮಾತನಾಡಿದರು.

‘ಸುಮಾರು ವರ್ಷಗಳಿಂದ ಕಕ್ಕೇರಾ ಪಟ್ಟಣದಲ್ಲಿ ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣವನ್ನು ಧಾರೆ ಎರೆಯುತ್ತಿದ್ದಾರೆ. ಇವರಲ್ಲಿ ಸಂಗೀತ ಅಭ್ಯಾಸ ಮಾಡಿದವರು ಇಂದು ಸರ್ಕಾರಿ ಸಂಗೀತ ಶಿಕ್ಷಕರಾಗಿದ್ದಾರೆ. ಚಿಕ್ಕ ವಯಸಿನಲ್ಲಿಯೇ ಸಂಗೀತದ ಸಾಧನೆಯತ್ತ ಮುಖ ಮಾಡಿದ ಬಾಲಪ್ರತಿಭೆಗಳು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಬಸಣ್ಣ ಗುರಿಕಾರ ಅವರ ಅಸಮಾನ್ಯ ಪ್ರತಿಭೆಯನ್ನು ಸರ್ಕಾರ ಗುರುತಿಸಬೇಕು’ ಎಂದರು.

ADVERTISEMENT

ತಾಲ್ಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ‘ಎಲ್ಲ ಮಾನಸಿಕ ತೊಳಲಾಟಗಳಂತ ಸಮಸ್ಯೆಗಳಿಗೆ ಸಂಗೀತವೇ ಪರಿಹಾರ. ಯುವಕರು ಕನ್ನಡಕ್ಕೆ ಹೆಚ್ಚು ಒತ್ತು ಕೊಡಬೇಕು. ಪ್ರತಿಯೊಬ್ಬರೂ ಇಂಗ್ಲಿಷ್‌ ವ್ಯಾಮೋಹಕ್ಕೆ ಒಳಗಾಗದೆ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕಾಗಿದೆ’ ಎಂದರು. ಕಸಾಪ ವರ್ಷದ ವ್ಯಕ್ತಿ ಬಸಣ್ಣ ಗುರಿಕಾರ ಮಾತನಾಡಿದರು. ಸೋಮನಾಥ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ, ಶ್ರೀಹರಿರಾವ್ ಆದೋನಿ, ಬಸವರಾಜ ಆರೇಶಂಕರ್, ನಿಂಗಯ್ಯ ಬೂದಗುಂಪಿ, ಗವಿಸಿದ್ದಪ್ಪ ಹೊಗರಿ, ಬಸವರಾಜ ಅಂಬಿಗೇರ, ಸೋಮಶೇಖರ ದೊರೆ, ಶರಣಕುಮಾರ ಸೊಲ್ಲಾಪುರ, ನಾಗರಾಜ, ದೇವು, ಪ್ರವೀಣ ಇದ್ದರು. ಲಕ್ಷ್ಮಣ ಲಿಂಗದಳ್ಳಿ ಸ್ವಾಗತಿಸಿದರು. ರಹೀಮ ಹವಾಲ್ದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.