ADVERTISEMENT

ಸಗಣಿಗೊಬ್ಬರ ಬಳಸಲು ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 8:12 IST
Last Updated 14 ಮೇ 2017, 8:12 IST

ಸೇಡಂ:‘ರೈತರು ಬೇಸಿಗೆಯ ದಿನಗಳಲ್ಲಿ ಉಳುಮೆ ಮಾಡುವ ಸಂದರ್ಭದಲ್ಲಿ ಸಗಣಿ (ತಿಪ್ಪೆ) ಗೊಬ್ಬರವನ್ನು ಬಳಸಿ ಉಳುಮೆ ಮಾಡಬೇಕು. ಇದರಿಂದ ಮಣ್ಣಿನಲ್ಲಿರುವ ರೋಗಗಳು ನಿರ್ಮೂಲ ನೆಯಾಗಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ’ ಎಂದು ರದ್ದೇವಾಡಿ ಕೃಷಿ ವಿಜ್ಞಾನಿ ಪಿ. ಪಾಲಯ್ಯ ಹೇಳಿದರು.

ತಾಲ್ಲೂಕಿನ ಬಿಜನಳ್ಳಿ ಗ್ರಾಮದಲ್ಲಿ ಈಚೆಗೆ ಕಾಗಿಣಾ ಜನಸೇವಾ ಸಂಸ್ಥೆ, ರದ್ದೆವಾಡಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ನಮೋ ಬುದ್ಧ ಸೇವಾ ಕೇಂದ್ರ ಆಯೋಜಿಸಿದ  ಬೀಜೋತ್ಪಾದನೆಯ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿ ವರ್ಷ  ಬೆಳೆದ ಬೆಳೆಯನ್ನೇ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ವರ್ಷಕ್ಕೊಮ್ಮೆ ಬೆಳೆಯನ್ನು ಬದಲಾಯಿಸಿಬೇಕು ಮತ್ತು ಮಿಶ್ರ ಬೇಸಾಯ ಪದ್ಧತಿ ಅನುಸರಿಸ ಬೇಕು. ವೆಚ್ಚ ಕಡಿಮೆ ಮಾಡಿ ಆದಾಯ ಹೆಚ್ಚಿಸಿಕೊಂಡಾಗ ಮಾತ್ರ ರೈತರು ಆರ್ಥಿಕವಾಗಿ ಪ್ರಬಲರಾಗಲು ಸಾಧ್ಯ.

ADVERTISEMENT

ಈ ನಿಟ್ಟಿನಲ್ಲಿ ಹೆಚ್ಚಾಗಿ ಸಾವಯವ ಗೊಬ್ಬರ ಬಳಕೆ ಕೃಷಿಯಲ್ಲಿ ಅವಶ್ಯಕ’ ಎಂದರು.ಕೃಷಿ ಅಧಿಕಾರಿ ಡಾ. ಯುಸುಫ್ ಅಲಿ ಮಾತನಾಡಿ, ‘ಕಲಬುರ್ಗಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿನ ಹೆಚ್ಚಾಗಿ ರೈತರು ತೊಗರಿ ಆರ್ಥಿಕ ಬೆಳೆಯನ್ನಾಗಿ ಬೆಳೆಯುತ್ತಾರೆ. ತೊಗರಿ ಬೆಳೆಯಲ್ಲಿ  ವಿವಿಧ ತಳಿಗಳ ಬೀಜ ಬಿತ್ತಿ ಬೆಳೆಯಬೇಕು. ಇದರಿಂದ ಬೆಳೆಯು ನೆಟೆ ಹೋಗುವುದು ತಪ್ಪಿಸಬಹುದು’ ಎಂದರು.

ಬಿಜನಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯ ದೇವಿಂದ್ರಪ್ಪಾ ಪಾಟೀಲ, ಬಾಬು ರಾವ ಪಾಟೀಲ, ಅಣವೀರಪ್ಪಾ ಕೋರ ವಾರ, ಹಣಮಂತರಾವ ಪೋ. ಪಾಟೀಲ, ರೈತ ಸಂಘದ ಪ್ರಭು ಬಂಡಿ, ಶಾಂತಕುಮಾರ ನಂದಿ, ನಮೋ ಬುದ್ದ ಸೇವಾ ಕೇಂದ್ರದ ರಾಜು ಕಟ್ಟಿ, ಭರತ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.