ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಹುಣಸಿಹೊಳೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 9:39 IST
Last Updated 14 ನವೆಂಬರ್ 2017, 9:39 IST
ಕಕ್ಕೇರಾ ಪಟ್ಟಣದ ರಸ್ತೆಯ ಮೇಲೆ ಕಿರು ಸರಬರಾಜು ಟ್ಯಾಂಕಿನ ನೀರು ಹರಿದು ಪಾಚಿಗಟ್ಟಿದೆ
ಕಕ್ಕೇರಾ ಪಟ್ಟಣದ ರಸ್ತೆಯ ಮೇಲೆ ಕಿರು ಸರಬರಾಜು ಟ್ಯಾಂಕಿನ ನೀರು ಹರಿದು ಪಾಚಿಗಟ್ಟಿದೆ   

ಕಕ್ಕೇರಾ: ಸಮೀಪದ ಹುಣಸಿಹೊಳೆ ಗ್ರಾಮಸ್ಥರಿಗೆ ಬಯಲು ಶೌಚಾಲವೇ ಗತಿಯಾಗಿದೆ. ಜತೆಗೆ ಸಿ.ಸಿ ರಸ್ತೆ, ಶುದ್ಧ ಕುಡಿಯುವ ನೀರು, ಶಿಕ್ಷಕರ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ನಿವಾಸಿಗಳನ್ನು ಕಾಡುತ್ತಿವೆ.

‘800ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪುಟ್ಟ ಗ್ರಾಮ ತಿಂಥಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ’ ಎನ್ನುವುದು ಗ್ರಾಮಸ್ಥರ ಆರೋಪ.

‘ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಚಿಕ್ಕ ತೊಂದರೆಯಿಂದ ಸುಮಾರು ಒಂದು ವರ್ಷದಿಂದ ಸ್ಥಗಿತಗೊಂಡಿದೆ. ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದರೂ ಪಿಡಿಒ ಹಾಗೂ ಅಧ್ಯಕ್ಷರು ಗಮನಹರಿಸುತ್ತಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.

ADVERTISEMENT

‘ಸರ್ಕಾರಿ ಶಾಲೆಯಿಂದ ರೇವಣಸಿದ್ದೇಶ್ವರ ಮಂದಿರಕ್ಕೆ ಹೋಗುವ ರಸ್ತೆಯ ತುಂಬಾ ಮುಳ್ಳು ಕಂಟಿಗಳು ಬೆಳೆದಿವೆ. ರಸ್ತೆಯ ಮೇಲೆ ಸದಾ ನೀರು ಹರಿಯುತ್ತಿದ್ದರೂ ಜನಪ್ರತಿನಿಧಿಗಳು ಕಣ್ಣಿಗೆ ಕಾಣದ ಹಾಗೆ ಇದ್ದಾರೆ. ನೀರು ರಸ್ತೆಯ ಮೇಲೆ ಹರಿದು ಸರ್ಕಾರಿ ಶಾಲೆಯ ಆವರಣದೊಳಗೆ ಹೋಗುತ್ತದೆ.

ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಎಚ್ಚೆತ್ತು ಸರಿಪಡಿಸಬೇಕು’ ಎಂದು ಮಾರುತಿ ಯುವ ಸಂಘದ ಗೋವಿಂದ ಡಿ.ಮಾಳಳ್ಳಿ ಒತ್ತಾಯಿಸಿದ್ದಾರೆ. ‘5 ವರ್ಷಗಳ ಹಿಂದೆ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ, ಅದು ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದರಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ’ ಎಂದು ಸ್ಥಳೀಯರಾದ ಮರಿಸ್ವಾಮಿ ಕೆ. ತಿಳಿಸಿದರು.

‘ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚೆತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಸ್ಥಳೀಯರಾದ ಭೀಮರಾಯ ವಂದಲಿ, ಮಲ್ಲಯ್ಯ ಗೋಧಿಕಲ್, ಮಂಜು ಹೂಗಾರ, ಬಾಲನಗೌಡ, ಪರಶುರಾಮ, ಗ್ಯಾನಪ್ಪ, ಮಲ್ಲಣ್ಣ ದೊರೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.