ADVERTISEMENT

ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಫೆ. 4,5ರಂದು ಮೂರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:14 IST
Last Updated 5 ಜನವರಿ 2017, 9:14 IST

ಸುರಪುರ: ‘ನಗರದಲ್ಲಿ ಫೆ. 4,5ರಂದು ಜರುಗುತ್ತಿರುವ 3ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರು ಸಹಕರಿಸಬೇಕು. ರಾಜ್ಯದಲ್ಲಿಯೇ ಮಾದರಿ ಸಮ್ಮೇಳನ ನಡೆಸಲು ಪ್ರತಿಯೊಬ್ಬರು ಶ್ರಮಿಸಬೇಕು’ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು. ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಬುಧವಾರ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಸಮ್ಮೇಳನದ ಯಶಸ್ವಿಗೆ ನನ್ನ ಸಹಕಾರ ಇದೆ. ಶೀಘ್ರದಲ್ಲಿಯೇ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಲಿದೆ. ಸಮ್ಮೇಳನದ ಸಿದ್ಧತೆ ನಡೆಯುತ್ತಿದೆ’ ಎಂದು ತಿಳಿಸಿದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಜಾ ಮದನಗೋಪಾಲನಾಯಕ ಮಾತನಾಡಿ, ‘ಸುರಪುರದಲ್ಲಿಯೇ 3ನೇ ಜಿಲ್ಲಾ ಸಮ್ಮೇಳನ ಆಯೋಜಿಸಲಾಗುವುದು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ನಡೆದುಕೊಂಡಿದ್ದಾರೆ’ ಎಂದರು. ‘ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಸಮ್ಮೇಳನದ ಯಶಸ್ವಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗೆಯೇ ಜಿಲ್ಲೆಯ ಸಂಘ- ಸಂಸ್ಥೆಗಳು, ಅಧಿಕಾರಿ ವರ್ಗ ಸೇರಿದಂತೆ ಎಲ್ಲರೂ ಕೈಜೋಡಿಸಿ ಒಗ್ಗಟ್ಟಾಗಿ ಕನ್ನಡಮ್ಮನ ತೇರು ಎಳೆಯಬೇಕಾಗಿದೆ’ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ‘ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಸುರಪುರ ತಾಲ್ಲೂಕಿನಲ್ಲಿ ನಡೆಯುತ್ತವೆ. ಜಿಲ್ಲಾ 3ನೇ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಕೂಡಾ ಹೆಮ್ಮೆಯ ಸಂಗತಿ. ಸಮ್ಮೇಳನದ ಯಶಸ್ವಿಗೆ ಎಲ್ಲರೂ ಟೊಂಕಕಟ್ಟಿ ನಿಂತು ಸೇವೆ ಸಲ್ಲಿಸೋಣ’ ಎಂದು ನುಡಿದರು.

ಡಾ. ಸುಭಾಶ್ಚಂದ್ರ ಕೌಲಗಿ ಪ್ರಾಸ್ತಾವಿಕ ಮಾತನಾಡಿದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ವಿಠ್ಠಲ ಯಾದವ, ಪ್ರಮುಖರಾದ ವೆಂಕೋಬ ಮಂಗಳೂರು, ಸೂಲಪ್ಪ ಕಮತಗಿ, ಬಸವರಾಜ ಜಮದ್ರಖಾನಿ, ರಾಜಾ ಮುಕುಂದನಾಯಕ, ಶಾಂತಪ್ಪ ಬೂದಿಹಾಳ, ನಿಂಗಣ್ಣ ಚಿಂಚೋಡಿ, ಅಯ್ಯಣ್ಣ ಹುಂಡೇಕಾರ್, ನೂರಂದಪ್ಪ ಲೇವಡಿ, ಡಾ. ಭೀಮರಾಯ ಲಿಂಗೇರಿ, ಬಿಇಒ ಯಲ್ಲಪ್ಪ ಕಾಡ್ಲೂರು, ಮಹಾದೇವಪ್ಪ ಗುತ್ತೇದಾರ್, ಜಿ.ವಿ. ಶಿವಕುಮಾರ ಅಮ್ಮಾಪುರ, ಶಾಂತರಾಜ ಬಾರಿ, ನರಸಿಂಹಕಾಂತ  ಪಂಚಮಗಿರಿ, ಸಂಗಣ್ಣ ಯೆಕ್ಕೆಳ್ಳಿ, ಮುದ್ದಣ್ಣ ಅಪ್ಪಗೋಳ, ಶ್ರೀನಿವಾಸ ರಫಗಾರ್, ಪಂಡಿತ ನಿಂಬೂರ್, ಬಸವರಾಜ ಕೊಡೇಕಲ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.