ADVERTISEMENT

ಸುರಪುರ: ‘ಸೈಟ್‌–ಸಿ’ ಕೇಂದ್ರ ಉದ್ಘಾಟನೆ

ಶಾಲಾ ಮುಖ್ಯ ಶಿಕ್ಷಕರೇ ತಮ್ಮ ಹಣ ಹೊಂದಿಸಿ ಆರಂಭಿಸಿರುವ ಕೇಂದ್ರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 7:09 IST
Last Updated 16 ಫೆಬ್ರುವರಿ 2017, 7:09 IST
ಸುರಪುರದ ಸರ್ಕಾರಿ ಕನ್ಯಾ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಶಾಲಾ ಮಾಹಿತಿ ತಾಂತ್ರಿಕ ವಿನಿಮಯ ಕೇಂದ್ರವನ್ನು ಉದ್ಘಾಟಿಸಿದರು
ಸುರಪುರದ ಸರ್ಕಾರಿ ಕನ್ಯಾ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಶಾಲಾ ಮಾಹಿತಿ ತಾಂತ್ರಿಕ ವಿನಿಮಯ ಕೇಂದ್ರವನ್ನು ಉದ್ಘಾಟಿಸಿದರು   
ಸುರಪುರ:  ಸುರಪುರದ  ಸರ್ಕಾರಿ ಕನ್ಯಾ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೇ ಸೇರಿ ಶಾಲಾ ದಾಖಲೆಗಳ ಡಿಜಿಟಲೀಕರಣಕ್ಕೆ ‘ಸೈಟ್‌–ಸಿ’ ಎಂಬ ಕೇಂದ್ರವನ್ನು ಆರಂಭಿಸಿದ್ದಾರೆ.
 
ಇದು ಡಿಜಿಟಲ್‌ ಯುಗವಾಗಿದ್ದು, ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡ ಲಾಗುತ್ತಿದೆ. ಶಾಲಾ ದಾಖಲಾತಿಗಳೂ ಇದಕ್ಕೆ ಹೊರತಾಗಿಲ್ಲ. ಶಾಲೆಗಳಿಗೆ ಇದಕ್ಕಾಗಿ ಕಂಪ್ಯೂಟರ್‌ ಒದಗಿಸಲು ಯೋಜನೆ ಇಲ್ಲ. ಹೀಗಾಗಿ ಶಿಕ್ಷಕರು ಈ ಕಾರ್ಯಕ್ಕೆ ಖಾಸಗಿ ಕಂಪ್ಯೂಟರ್‌ ಕೇಂದ್ರಗಳನ್ನು ಅವ ಲಂಬಿಸುವಂತಾಗಿತ್ತು.
 
ಇದರಿಂದಾಗಿ  ಶಾಲಾ ದಾಖ ಲಾತಿಗಳು ಸೋರಿಕೆಯಾಗುವ ಭಯ ಇತ್ತು. ಆದರೂ ಶಿಕ್ಷಕರು ಅನಿ ವಾರ್ಯವಾಗಿ ಖಾಸಗಿ ಕೇಂದ್ರಗಳಲ್ಲಿ ತಮ್ಮ ತಮ್ಮ ಶಾಲಾ ಮಾಹಿತಿ, ವಿದ್ಯಾರ್ಥಿ ವೇತನ, ಹಾಜರಾತಿ, ಫಲಿತಾಂಶ, ದಾಖ ಲಾತಿ, ಆಧಾರ ಸಂಖ್ಯೆ ಜೋಡಣೆ, ವರ್ಗಾವಣೆ ಪತ್ರ, ಯೂಡೈಸ್‌ (ಶಾಲಾ ಸಮಗ್ರ ಶೈಕ್ಷಣಿಕ ಮಾಹಿತಿ) ಮಾಹಿ ತಿಗಳನ್ನು ಕಂಪ್ಯೂಟರ್‌ನಲ್ಲಿ ಅಳ ವಡಿಸುತ್ತಿದ್ದರು.
 
ಇದಕ್ಕಾಗಿ ಶಾಲೆಗಳಿಗೆ ಪ್ರತ್ಯೇಕ ಅನುದಾನವೂ ಇರಲಿಲ್ಲ. ಖಾಸಗಿ ಕೇಂದ್ರಗಳು ಹೆಚ್ಚಿನ ಹಣ ಪಡೆ ಯುತ್ತಿದ್ದರಿಂದ ಮುಖ್ಯ ಶಿಕ್ಷಕರಿಗೆ ಇದು ಭಾರವಾಗಿತ್ತು. ಈ ಬಗ್ಗೆ ಸಿಆರ್‌ಪಿಗಳಾದ ತಿಪ್ಪಣ್ಣ ಸಿನ್ನೂರ, ಸೇವಾನಾಯ್ಕ, ಮುಖ್ಯ ಶಿಕ್ಷಕರಾದ ಸಾಮ್ಯೂವೆಲ್‌, ಶಿವಶರಣ, ಚಂದ್ರಕಾಂತ ಇತರರು ಯೋಜನೆಯೊಂದನ್ನು ತಯಾರಿಸಿದರು.
 
ಆಯಾ ಕ್ಲಸ್ಟರ್‌ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಕರೆದು ಈ ಬಗ್ಗೆ ಚರ್ಚಿಸಿದರು. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಇದಕ್ಕೆ ಪೂರಕವಾಗಿ ಸ್ಪಂದಿಸಿದರು. ಹಣ ಹೊಂದಿಸಿ ಕಂಪ್ಯೂಟರ್‌, ಪ್ರಿಂಟರ್‌ ಖರೀದಿಸಿದರು. ನಗರದ ಸರ್ಕಾರಿ ಕನ್ಯಾ ಮಾದರಿಯ ಪ್ರಾಥಮಿಕ (ದರಬಾರ) ಶಾಲೆಯಲ್ಲಿ ಕೇಂದ್ರ ಸ್ಥಾಪಿಸಲು ನಿರ್ಧರಿಸಿದರು.
 
ಇದಕ್ಕೆ ‘ಸೈಟ್‌–ಸಿ’ (ಶಾಲಾ ಮಾಹಿತಿ ತಾಂತ್ರಿಕ ವಿನಿಮಯ ಕೇಂದ್ರ) ಎಂದು ಹೆಸರಿಡಲಾಯಿತ. ಇಂಟರ್‌ನೆಟ್‌ ಸೌಲಭ್ಯವನ್ನು ಕಲ್ಪಿಸಿದರು. ಇದಕ್ಕೆ ₹60 ಸಾವಿರ ವೆಚ್ಚ ಭರಿಸಿದರು. ಎಲ್ಲರ ಶ್ರಮದ ಫಲವಾಗಿ ಸುರಪುರ ಕ್ಲಸ್ಟರ್‌ ವ್ಯಾಪ್ತಿಯಲ್ಲಿ ಕೇಂದ್ರ ಆರಂಭಗೊಂಡಿದೆ.
ಬುಧವಾರ ಕೇಂದ್ರ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು, ‘ಸಿಆರ್‌ಪಿ ಮತ್ತು ಮುಖ್ಯ ಶಿಕ್ಷಕರ ಈ ಪ್ರಯತ್ನ ಶ್ಲಾಘನೀಯವಾದದ್ದು. ಈ ರೀತಿಯ ಕೇಂದ್ರ ಆರಂಭಗೊಂಡಿದ್ದು ರಾಜ್ಯದಲ್ಲೇ ಮೊದಲು’ ಎಂದು ಶ್ಲಾಘಿಸಿದರು.
 
‘ಸುರಪುರ ಕ್ಲಸ್ಟರ್‌ನಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನಿತ ರಹಿತ ಒಟ್ಟು 47 ಶಾಲೆಗಳು ಬರುತ್ತವೆ. ಈ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು. ಖಾಸಗಿ ಕೇಂದ್ರಗಳಲ್ಲಿ ದಾಖಲೆ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ‘ಸೈಟ್‌–ಸಿ’ ಕೇಂದ್ರದಲ್ಲೆ ತಮ್ಮ ದಾಖಲೆಗಳನ್ನು ಅಳವಡಿಸುವಂತೆ’ ಸಲಹೆ ನೀಡಿದರು.
 
‘ಸಿಆರ್‌ಪಿ ಮತ್ತು ಶಿಕ್ಷಕರ ಈ ಮಾದರಿ ಕಾರ್ಯದ ವರದಿಯನ್ನು ಶಿಕ್ಷಣ ಸಚಿವರು, ಡಿಡಿಪಿಐ ಅವರಿಗೆ ಕಳುಹಿಸಲಾಗುವುದು. ಇಂತಹ ಪ್ರಯತ್ನಗಳನ್ನು ತಾಲ್ಲೂಕಿನ ಇತರ ಕ್ಲಸ್ಟರ್‌ಗಳಲ್ಲಿ ಶಿಕ್ಷಕರು ಮಾಡಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗುವಂತೆ ಮಾಡಬೇಕು’ ಎಂದು ಕರೆ ನೀಡಿದರು.
 
ದರಬಾರ ಶಾಲೆಯ ಮುಖ್ಯ ಶಿಕ್ಷಕ ಸೋಮರೆಡ್ಡಿ ಮಂಗಿಹಾಳ ಮಾತನಾಡಿ, ‘ನಮ್ಮ ಶಾಲೆಯಲ್ಲಿ ಸ್ಥಳಾವಕಾಶ ಇರುವುದರಿಂದ ಮತ್ತು ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಇದು ಕೇಂದ್ರವಾಗಿದ್ದರಿಂದ ‘ಸೈಟ್‌–ಸಿ’ ಆರಂಭಿಸಲು ಆವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಕ್ಲಸ್ಟರ್‌ ಎಲ್ಲ ಶಾಲೆಗಳಿಗೆ ಸಹಕಾರ ನೀಡಲಾಗುವುದು’ ಎಂದರು.
 
ಸಿಆರ್‌ಪಿ ತಿಪ್ಪಣ್ಣ ಸಿನ್ನೂರ ಕೇಂದ್ರದ ಬಗ್ಗೆ ವಿವರ ನೀಡಿದರು. ಚಂದ್ರಕಾಂತ ಗುತ್ತೇದಾರ ಸ್ವಾಗತಿಸಿದರು. ಶರಣಯ್ಯ ಸ್ಥಾವರಮಠ ನಿರೂಪಿಸಿದರು. ಸ್ಯಾಮ್ಯೂವೆಲ್‌ ಮ್ಯಾಥ್ಯೂ ವಂದಿಸಿದರು.
 
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಜಯಕುಮಾರ ಜಮಖಂಡಿ, ಚನ್ನು ಪಟೇಲ, ಚಂದಪ್ಪ ಯಾದವ, ಶಾಂತಪ್ಪ ಅಗ್ನಿ, ಶಿವರಾಜ ನಾಯಕ, ಮಲ್ಲಿಕಾರ್ಜುನ ಕಟ್ಟಿಮನಿ, ಸಾಹೇಬರೆಡ್ಡಿ, ಅಪ್ಪಣ್ಣ ಕುಲಕರ್ಣಿ, ಲಂಕೆಪ್ಪ ಕವಲಿ, ಶಿವಕುಮಾರ ಮಸ್ಕಿ, ಅನ್ವರ್‌ ಜಮಾದಾರ, ಕ್ಲಸ್ಟರ್‌ ವ್ಯಾಪ್ತಿಯ ಮುಖ್ಯ ಶಿಕ್ಷಕರು ಇದ್ದರು.
 
* ‘ಸೈಟ್‌–ಸಿ’ ಯೋಜನೆ ಅಪರೂಪದ್ದು. ಶಿಕ್ಷಕರ ಈ ಕಾರ್ಯದಿಂದ ಕಂಪ್ಯೂಟರ್‌ನಲ್ಲಿ ಶಾಲಾ ದಾಖಲೆಗಳನ್ನು ಅಳವಡಿಸಲು ಅನುಕೂಲವಾಗಲಿದೆ
- ಯಲ್ಲಪ್ಪ ಕಾಡ್ಲೂರ್‌, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.