ADVERTISEMENT

ಸೂಗೂರ ಗ್ರಾಮ ಪಂಚಾಯಿತಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:23 IST
Last Updated 23 ಮೇ 2017, 7:23 IST

ಸುರಪುರ: ‘ತಾಲ್ಲೂಕಿನ ಸೂಗೂರ ಗ್ರಾಮ ಪಂಚಾಯಿತಿಯ ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದ್ದು ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸೋಮವಾರ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಚಿನ್ನಾಕಾರ ಮಾತನಾಡಿ, ‘ಸೂಗೂರ ಗ್ರಾಮ ಪಂಚಾಯಿತಿಯ ಉದ್ಯೋಗ ಖಾತರಿ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಬೋಗಸ್ ಬಿಲ್‌ ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ. ಬಡ ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ಈ ಯೋಜನೆ ಹಳ್ಳ ಹಿಡಿದಿದೆ’ ಎಂದು ದೂರಿದರು.

‘ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ನೀಡಿದರೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕ್ಯಾರೆ ಎನ್ನುತ್ತಿಲ್ಲ. ಪರೋಕ್ಷವಾಗಿ ಅವರೂ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಶಂಕೆ ಇದೆ. ಕಾರಣ ಅವರನ್ನು ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸೂಗೂರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಅವರನ್ನು ಅಮಾನತುಗೊಳಿಸಬೇಕು. ಎಲ್ಲಾ ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಬೇಕು. ತಕ್ಷಣ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮಣ್ಣ ದೊರಿ, ನಂದಣ್ಣ ವಾರಿ, ವೆಂಕೋಬ ಪಾಟೀಲ, ಶಿವರಾಜ ದೊರಿ, ರಮನಯ್ಯ ನಾಯಕ, ದಂಡಪ್ಪ ಹುಲಕಲ್, ರಾಮುನಾಯಕ ದೊರಿ, ಶಿವರಾಜ ಕರಿಗುಡ್ಡ, ಚಂದಪ್ಪ ಮೇಟಿ, ಶಂಕ್ರಪ್ಪ ಒಂಟೂರ, ಲಕ್ಷಪತಿ ದೊರಿ, ಮಹಾಂತೇಶ ಚೌಡೇಶ್ವರಿಹಾಳ, ಭೀಮಣ್ಣ ಗುಜ್ಜಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.