ADVERTISEMENT

ಸೌಲಭ್ಯದ ಜತೆಗೆ ಜವಾಬ್ದಾರಿ ನೀಡಿದ ಜಿಎಸ್‌ಟಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 11:18 IST
Last Updated 16 ಜುಲೈ 2017, 11:18 IST

ಯಾದಗಿರಿ: ‘ಹಿಂದೆ ಇದ್ದ ಕೆಎಸ್‌ಟಿ, ವ್ಯಾಟ್‌ ತೆರಿಗೆ ಪದ್ಧತಿಯಂತೆ ‘ಜಿಎಸ್‌ಟಿ’ ಹಲವು ಸೌಲಭ್ಯಗಳನ್ನು ಹೊಂದಿದ್ದರೂ, ಈ ನೂತನ ತೆರಿಗೆ ಪದ್ಧತಿ ವರ್ತಕ ಸಮುದಾಯಕ್ಕೆ ಕೆಲವೊಂದು ಕಡ್ಡಾಯ ಜವಾಬ್ದಾರಿಗಳನ್ನು ನೀಡಿದೆ’ ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಪದ್ಮಕರ ಕುಲಕರ್ಣಿ ಅಭಿಪ್ರಾಯಪಟ್ಟರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಆಶ್ರಯದಲ್ಲಿ ಶನಿವಾರ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ‘ಸರಕು ಮತ್ತು ಸೇವೆ ತೆರಿಗೆ ಜಾಗೃತಿ’ ಕುರಿತ ಕಾರ್ಯಾಗಾರದಲ್ಲಿ ಅವರು ವರ್ತಕರ ಗೊಂದಲಗಳಿಗೆ ಉತ್ತರಿಸಿದರು.

‘ದೇಶದಲ್ಲಿ ಚಾಲ್ತಿಯಲ್ಲಿದ್ದ ಒಟ್ಟು 17 ತೆರಿಗೆ ಪದ್ಧತಿಯನ್ನು ಒಟ್ಟುಗೂಡಿಸಿ ಏಕ ತೆರಿಗೆ ಪದ್ಧತಿಗೆ ‘ಜಿಎಸ್‌ಟಿ’ಯ ಸ್ವರೂಪ ನೀಡಲಾಗಿದೆ. ‘ಒಂದು ರಾಷ್ಟ್ರ ಒಂದು ತೆರಿಗೆ’ ತತ್ವದಡಿ ಆರಂಭಗೊಂಡಿರುವ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಗ್ರಾಹಕರೂ ಸೇರಿದಂತೆ ವರ್ತಕ ಸಮುದಾಯಕ್ಕೂ ಅನೇಕ ಸೌಲಭ್ಯಗಳನ್ನು ಹೊಂದಿದೆ. ಆದರೆ, ಮಾರಾಟ ಮಾಡುವ ವಸ್ತು ಮತ್ತು ಖರೀದಿಸಿದ ಪಟ್ಟಿಯನ್ನು ಕಡ್ಡಾಯವಾಗಿ ಜಿಎಸ್‌ಟಿ ನೋಂದಣಿ ಅಡಿ ಸಮಯಕ್ಕೆ ತಕ್ಕಂತೆ ಸಲ್ಲಿಸಲೇಬೇಕಾಗಿದೆ’ ಎಂದು ವಿವರಿಸಿದರು.

‘ಒಂದು ಆರ್ಥಿಕ ವರ್ಷದಲ್ಲಿ ₹20ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಎಲ್ಲರೂ ಜಿಎಸ್‌ಟಿ ನೋಂದಣಿ ಮಾಡಿಸಬೇಕಾಗುತ್ತದೆ. ಅಲ್ಲದೇ ವರ್ತಕರು ಕೂಡ ಜಿಎಸ್‌ಟಿ ನೋಂದಣಿ ಇರುವ ಕಂಪೆನಿ, ವ್ಯಕ್ತಿ ಇತ್ಯಾದಿಗಳಿಂದ ಖರೀದಿಸಿದ ಸರಕು ಮತ್ತು ಸೇವೆಗಳಿಗೆ ಮಾತ್ರ ಜಿಎಸ್‌ಟಿ ತೆರಿಗೆ ಪದ್ಧತಿಯಲ್ಲಿ ಸೌಲಭ್ಯ ಪಡೆಯಬಹುದು. ಆದರೆ, ಹಿಂದಿನ ವ್ಯಾಟ್‌ ತೆರಿಗೆ ಪದ್ಧತಿಯಂತೆ ಜಿಎಸ್‌ಟಿಯಲ್ಲಿ ಪರಿಷ್ಕೃತ ಸೌಲಭ್ಯ ಇರುವುದಿಲ್ಲ’ ಎಂದು ವಿವರಿಸಿದರು.

ADVERTISEMENT

ವಾಣಿಜ್ಯ ತೆರಿಗೆ ಉಪ ಆಯುಕ್ತರಾದ ಮೀರಾ ಎಸ್‌. ಪಂಡಿತ್‌ ಮಾತನಾಡಿ,‘ಈ ಮೊದಲು ವರ್ತಕರು ಹತ್ತಾರು ಕಡೆಗಳಲ್ಲಿ ತೆರಿಗೆ ನೋಂದಣಿ ಮತ್ತು ತೆರಿಗೆ ಪಾವತಿ ಮಾಡುತ್ತಿದ್ದರು. ಹಿಂದಿನ ಪದ್ಧತಿಗೆ ಹೋಲಿಸಿದರೆ ಜಿಎಸ್‌ಟಿ ಸರಳವಾಗಿದೆ. ಆದರೆ, ಹೊಸ ಪದ್ಧತಿಗೆ ಬಗ್ಗೆ ಊಹಾಪೋಹ ಗೊಂದಲಗಳಿಗೆ ವರ್ತಕರು ಕಿವಿ ತೆರೆದುಕೊಂಡಿರುವ ಕಾರಣ ಜಿಎಸ್‌ಟಿ ಬಗ್ಗೆ ಭಯ ಕಾಡುತ್ತಿದೆ’ ಎಂದರು.

‘ಜಿಎಸ್‌ಟಿ ಜಾರಿಗೊಂಡ ಮೇಲೆ ಮುಖ್ಯವಾಗಿ ವರ್ತಕರಿಗೆ ವ್ಯಾಟ್‌ ತೆರಿಗೆ ಪದ್ಧತಿಯಡಿ ಖರೀದಿಸಿರುವ ಸರಕು ಸಂಗ್ರಹದ ಪರಿಸ್ಥಿತಿ ಏನು? ಎಂಬುದಾಗಿದೆ. ವ್ಯಾಪಾರಿಗಳ ಬಳಿರುವ ಈ ಸರಕು ಸಂಗ್ರಹಕ್ಕೆ ಈಗಾಗಲೇ ವ್ಯಾಟ್‌ ತೆರಿಗೆ ಕಟ್ಟಿರುವ ತೆರಿಗೆ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ಅದನ್ನು ಆಗಸ್ಟ್ 30ರ ಒಳಗಾಗಿ ಸಂಗ್ರಹ ಸರಕುಗಳ ಮಾಹಿತಿ, ತೆರಿಗೆ ವಿವರಗಳನ್ನು ಜಿಎಸ್‌ಟಿಗೆ ಅಪ್‌ಲೋಡ್‌ ಮಾಡಿಸಬೇಕು. ಜಿಎಸ್‌ಟಿ ಗೆ ಅಪ್‌ಲೋಡ್‌ ಮಾಡದೇ ಹಾಗೇ ಉಳಿಸಿಕೊಂಡರೆ ಆ ಸರಕಿಗೂ ಪುನಃ ಜಿಎಸ್‌ಟಿ ತೆರಿಗೆ ಬೀಳುತ್ತದೆ’ ಎಂದು ವಿವರಿಸಿದರು.

‘ಸರ್ಕಾರ ಜಿಎಸ್‌ಟಿ ನೋಂದಣಿಯಡಿ ಸರಕು ಪಟ್ಟಿಯನ್ನು ಆಗಸ್ಟ್‌10ರ ಒಳಗಾಗಿ ಸಲ್ಲಿಸಬೇಕು. ಪಟ್ಟಿಯಲ್ಲಿ ಆಗುವ ಲೋಪದೋಷ ಸರಿಪಡಿಸಲು ಆಗಸ್ಟ್‌ ಕಾಲಾವಧಿ ಇರುತ್ತದೆ. ಪಟ್ಟಿಯಲ್ಲಾಗಿರುವ ಲೋಪದೋಷ, ಬಿಟ್ಟು ಹೋಗಿರುವ ಮಾರಾಟ ಇನ್‌ವೈಸ್‌ ಸರಿಪಡಿಸಲು ಆಗಸ್ಟ್‌ 15ರವರೆಗೆ ಕಾಲಾವಧಿ ನೀಡಲಾಗಿದೆ’ ಎಂದು ತಿಳಿಸಿದರು.

‘ಪ್ರತಿ ತಿಂಗಳು ಜಿಎಸ್‌ಟಿಲ್ಲಿ ಸರಕು, ಸೇವೆಗಳ ಬಗ್ಗೆ ಮಾಹಿತಿ ನಮೂದಿಸಬೇಕಾಗುತ್ತದೆ. ಅಕಾರಣವಾಗಿ ಆ ತಿಂಗಳು ಮಾಹಿತಿ ಸಲ್ಲಿಕೆ ನಮೂದಿಸದೆ ಹೋದರೆ ಮುಂದಿನ ತಿಂಗಳ ಜಿಎಸ್‌ಟಿ ಆ್ಯಪ್‌ ತೆರೆದುಕೊಳ್ಳುವುದಿಲ್ಲ. ಹಾಗಾಗಿ, ಪಾವತಿಸಬೇಕಾದ ತೆರಿಗೆ ಜತೆಗೆ ದಂಡ ಶುಲ್ಕ ಸಹಿತ ಅಧಿಕಾರಿಗಳು ವಸೂಲಿ ಮಾಡುತ್ತಾರೆ. ಆದ್ದರಿಂದ ವರ್ತಕರು ಆಯಾ ತಿಂಗಳಿನ ಸರಕು ಮತ್ತು ಸೇವೆಗಳ ಮಾಹಿತಿಯನ್ನು ನಮೂದಿಸಿ ತೆರಿಗೆ ಪಾವತಿಸಬೇಕಾಗುತ್ತದೆ. ಈ ಜವಾಬ್ದಾರಿಯನ್ನು ವರ್ತಕರು ನಿಭಾಯಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ಎನ್‌. ನಾಯಕ್ ಕಾರ್ಯಾಗಾರ ಉದ್ಘಾಟಿಸಿದರು. ವಾಣಿಜ್ಯ ತೆರಿಗೆ ವಿಭಾಗೀಯ ಜಂಟಿ ಆಯುಕ್ತ ಇನಾಂದಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಖುಷ್ಬೂ ಗೋಯಲ್‌ ಚೌಧರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತ ಎ.ಟಿ.ಅಂಬಲಗಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಹನುಮದಾಸ ಮುಂದದ, ಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ ಅಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.