ADVERTISEMENT

ಸ್ತ್ರೀ ಗೌರವದ ಪ್ರತೀಕ: ಶಿಭಾ ಜಿಹಾನ್

ದಾಸಬಾಳ ಮಠದಲ್ಲಿ 66ನೇ ಶಿವಾನುಭವ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:13 IST
Last Updated 14 ಮಾರ್ಚ್ 2017, 6:13 IST

ಯಾದಗಿರಿ: ’ಇಡೀ ವಿಶ್ವದಲ್ಲಿಯೇ ಸ್ತ್ರೀ ಗೌರವದ ಪ್ರತೀಕವಾಗಿದ್ದಾಳೆ’ ಎಂದು ಸ್ಟೇಷನ್ ಬಜಾರ ಪ್ರೌಢಶಾಲೆ ಮುಖ್ಯಶಿಕ್ಷಕಿ ಶಿಭಾ ಜಿಹಾನ ಹೇಳಿದರು.
ನಗರದ ದಾಸಬಾಳ ಮಠದಲ್ಲಿ ಭಾನುವಾರ ಹೋಳಿ ಹುಣ್ಣಿಮೆಯ ಪ್ರಯುಕ್ತ ನಡೆದ 66ನೇ ಶಿವಾನುಭವ ಗೋಷ್ಠಿಯಲ್ಲಿ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತ ದೇಶದಲ್ಲಿ ಹೆಣ್ಣಾಗಿ ಹುಟ್ಟಿ ಬರುವುದು ಒಂದು ಸೌಭಾಗ್ಯವೇ ಸರಿ. ಕಾರಣ ಇಲ್ಲಿ ಧಾರ್ಮಿಕ ಪರಂಪರೆಯನುಸಾರ ಹೆಣ್ಣನ್ನು ಆದಿ ಶಕ್ತಿ ಸ್ವರೂಪಿಣಿ ಇತ್ಯಾದಿಯಾಗಿ ಗೌರವಿಸುತ್ತಾರೆ. ಆದರೆ, ಇತ್ತಿಚಿನ ದಿನಗಳಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ’ ಎಂದು ವಿಷಾದಿಸಿದರು..

ಮುಖಂಡ ಮಾಣಿಕರೆಡ್ಡಿ ಕುರುಕುಂದಿ ಮಾತನಾಡಿ,‘ರಾಷ್ಟ್ರೀಯ ಹಬ್ಬಗಳ ಜೊತೆಗೆ ನಮ್ಮ ದೇಶದಲ್ಲಿ ಭಾರತೀಯ ಪರಂಪರೆಯನುಸಾರ ಅನೇಕ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗಿದೆ. ಹೋಳಿಹುಣಮೆಯ ಮಾರನೆ ದಿನ ಸರ್ವ ಧರ್ಮದವರೂ ಆಚರಿಸುವ ಬಣ್ಣದ ಹಬ್ಬ ಭಾವೈಕ್ಯದ ಪ್ರತೀಕವಾಗಿದೆ. ದಾಸಬಾಳ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮದ ಜತೆ ಮಹಿಳೆಯರನ್ನು ಗೌರವಿಸುವುದರೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಆಚರಿಸುತ್ತಿರುವುದು ಶ್ಲಾಘನೀಯವಾದುದು’ ಎಂದರು.

ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿದ್ದ ದಾಸಬಾಳ ಮಠದ ವೀರೇಶ್ವರ ಸ್ವಾಮಿಜಿ, ‘ಯಾವುದೇ ಹಬ್ಬಗಳು ಮನುಕುಲಕ್ಕೆ ಧಕ್ಕೆಯಾಗದಂತೆ ಸರ್ವರ ಹಿತ ಬಯಸಿ ಹಬ್ಬ ಆಚರಿಸುವಲ್ಲಿ ನಾವು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸ್ಟೇಶನ ಬಜಾರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶಿಭಾ ಜಿಹಾನ, ಶಿಕ್ಷಕಿಯರಾದ ಭಾಗ್ಯವತಿ ಕೆಂಬಾವಿ, ಅನುರಾಧಾ.ಬಿ ಮತ್ತು ದೇವಮ್ಮ, ಸಿದ್ದಮ್ಮ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಗಣ್ಯರಾದ ತೇಜಪ್ಪಗೌಡ ಬಿಳ್ಹಾರ, ಪರ್ವತರೆಡ್ಡಿ ಹೊಸಳ್ಳಿ, ಸೋಮಶೇಖರ ಮಣ್ಣೂರ ಉಪಸ್ಥಿತರಿದ್ದರು. ಗುರುಪಾದ ಹುಣಸಿಗಿಡ, ಮಹಾಂತೇಶ ಗೋಗಿ, ಸಿದ್ದಣ್ಣ ಪಾಟೀಲ ಅವರು ಸಂಗೀತ ಸೇವೆ ನಡೆಸಿ ಕೊಟ್ಟರು. ಶಿವಾನುಭವ ಗೋಷ್ಠಿಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.