ADVERTISEMENT

ಹತ್ತು ನಿಮಿಷದಲ್ಲಿಯೇ ಊರು ಸೇರುತ್ತಿದ್ದೇವು...

ಮಲ್ಲೇಶ್ ನಾಯಕನಹಟ್ಟಿ
Published 21 ಫೆಬ್ರುವರಿ 2017, 5:49 IST
Last Updated 21 ಫೆಬ್ರುವರಿ 2017, 5:49 IST

ಯಾದಗಿರಿ: ಅದುವರೆಗೂ ಹೆತ್ತೊಡಲಿನಲ್ಲಿ ಕಿಲಕಿಲನೆ ನಗುತ್ತಿದ್ದ ಐದು ವರ್ಷದ ಲಕ್ಷ್ಮಿ ಹೆತ್ತಮ್ಮನ ಕಣ್ಣ ಮುಂದೆ ಜೀವಬಿಟ್ಟಳು... ಭರಿಸಲಾಗದ ನೋವಿನಲ್ಲೂ ಆ ತಾಯಿ ಕರುಳಬಳ್ಳಿಯ ಸಾವು ನೋಡಿ ರೋದಿಸುತ್ತಿದ್ದ ದೃಶ್ಯ ಕರಳು ಕತ್ತರಿಸುವಂತಿತ್ತು... ಇನ್ನು ನಿಶ್ಚಿತಾರ್ಥದ ಶುಭ ಸಮಾರಂಭದಲ್ಲಿ ಮನೆ ತುಂಬಾ ಕುಣಿದು ಕುಪ್ಪಳಿಸಿದ್ದ 12ರ ಆ ಪೋರಿಯ ದೇಹ ನಿಸ್ತೇಜವಾಗಿ ಮಲಗಿತ್ತು... ಮತ್ತೊಂದು ಕಡೆ ಹೆತ್ತಮ್ಮನ ಸಾವಿನ ಸುದ್ದಿ ಕೇಳಿ ಒಂದೇ ಉಸುರಿಗೆ ಧಾವಿಸಿ ಬಂದಿದ್ದ ಮಗ ಹಡೆದವ್ವಳ ಶವದ ಮುಂದೆ ಕಣ್ಣೀರು ಸುರಿಸುತ್ತಾ ಕುಳಿತಿದ್ದ...  ಇಡೀ ಊರಿಗೆ ಮಗನ ನಿಶ್ಚಿತಾರ್ಥದ ಸುದ್ದಿ ಹಂಚಿ ಸಂಭ್ರಮದಲ್ಲಿ ಕರೆದೊಯ್ದಿದ್ದ  ಸಾಬಣ್ಣನ ಶವದ ಮುಂದೆ ಇಡೀ ಗ್ರಾಮವೇ ರೋದಿಸುತ್ತಿತ್ತು...

ಇಲ್ಲಿಗೆ ಸಮೀಪದ ರಾಮಸಮುದ್ರದ ಬಳಿ ಸೋಮವಾರ ಸಂಭವಿಸಿದ ಭೀಕರ ಅಪಘಾತದ ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಕಂಡ ಕರುಣಾಜನಕ ದೃಶ್ಯಗಳಿವು.

‘ಇನ್ನು ಹತ್ತು ನಿಮಿಷದಲ್ಲಿ ಊರು ಸೇರುತ್ತಿದ್ದೆವು. ನಾವು ಒಳಗೆ ಕುಳಿತಿದ್ವಿ. ಒಮ್ಮೆಗೆ ಭಾರೀ ಶಬ್ದ ಆತ್ರಿ... ಎಚ್ಚರಾದಾಗ ನಮಗೆ ಅಪಘಾತ ಆಗಿದೆ ಅಂತ ಗೊತ್ತಾಯ್ತು. ಭಾಳ್ ಮಂದಿ ಇದ್ವಿ... ನಾವೆಲ್ಲಾ ಬದುಕುಳಿದಿರೋದೇ ದೊಡ್ಡ ಪವಾಡ...’ ಅಪಘಾತದಲ್ಲಿ ಮಾನಸಿಕವಾಗಿ  ಜರ್ಜರಿತಗೊಂಡಿದ್ದ ಅನಸೂಯಾ ಹೇಳುವಾಗ ಅಪಘಾತದ ಭೀಕರತೆ ಕಾಣುತ್ತಿತ್ತು.

‘ಎಲ್ಲ ಸಣ್ಣ ಮಕ್ಳು ಇದ್ದವ್ರಿ.. ದೊಡ್ಡೋರಿಗೆ ಏನಾದ್ರೂ ಸಹಿಸಿಕೊಳ್ಳಬಹುದು... ಮಕ್ಕಳಿಗೆ ಏನಾದ್ರೂ ಆದ್ರೆ ಸಹಿಸಿಕೊಳ್ಳೋಕೆ ಆಗಲ್ರಿ... ನಮ್‌ ಪಾಪು ತೆಲೆಗೆ ಹೊಡೆತ ಬಿದ್ದಿದೆ... ’ ಎಂದು ಅವರು ದುಃಖಿಸಿದರು.

‘ಐದರಿಂದ 15 ವಯೋಮಾನದ ಹೆಣ್ಣುಮಕ್ಳು ಲಾರಿಯಲ್ಲಿ ಹೆಚ್ಚಿದ್ದರು. ಅವರಲ್ಲಿ ಕನಿಷ್ಠ 6 ಮಂದಿಗೆ ಹೆಣ್ಣು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಒಂದು ಮಗುವಿನ ಬಲಗೈ ಮೂಳೆ ಮುರಿದಿದೆ, ಮತ್ತೊಂದು ಮಗುವಿಗೆ ತಲೆಗೆ ಗಾಯವಾಗಿ ರಕ್ತ ಒಸರುತ್ತಿದೆ. ಅಂತಹ ದೃಶ್ಯ ಸಹಿಸಿಕೊಳ್ಳೋದು ನಮಗೂ ಕಷ್ಟ’ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಪಾಟೀಲ ಹೇಳಿದರು.

‘ಮಗನ ನಿಶ್ಚಿತಾರ್ಥಕ್ಕೆ ಇಡೀ ಊರನ್ನೇ ಕರೆಯಿಸಿ ಖುಷಿಪಟ್ಟೆಲ್ಲೋ ಯಪ್ಪಾ... ಇದೆಂಥಾ ಗ್ರಹಚಾರನಪ್ಪಾ... ಅಯ್ಯೋ ದೇವರೆ ನಿನಗೆ ಕರುಣೆನೇ ಇಲ್ವ...’ ಎಂದು ನಿಶ್ಚಿತಾರ್ಥ ಮಾಡಿಕೊಂಡ ಬುಗ್ಗಪ್ಪ ಅಪ್ಪನ ಶವದ ಮುಂದೆ ರೋದಿಸುತ್ತಿದ್ದ ದೃಶ್ಯ ಅಲ್ಲಿದ್ದವರ ಕಣ್ಣಲ್ಲೂ ನೀರು ತರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.