ADVERTISEMENT

ಹದಗೆಟ್ಟ ರಸ್ತೆ: ಸಂಚಾರ ಹೈರಾಣ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:51 IST
Last Updated 18 ನವೆಂಬರ್ 2017, 9:51 IST

ಕಕ್ಕೇರಾ: ಪಟ್ಟಣದಿಂದ ಹುಣಸಗಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಪರದಾಡಬೇಕಿದೆ. ಕಕ್ಕೇರಾದಿಂದ ಹುಣಸಗಿ 12 ಕಿ.ಮೀ ದೂರವಿದೆ. ರಸ್ತೆ ಹದಗೆಟ್ಟಿರುವುದರಿಂದ ಈ ಅಂತರವನ್ನು ಕ್ರಮಿಸಲು ಕನಿಷ್ಠ ಎರಡು ತಾಸು ಬೇಕಾಗುತ್ತದೆ ಎನ್ನುತ್ತಾರೆ ಆಟೊ ಚಾಲಕರು.

ರಸ್ತೆ ಹಾಳಾಗಿ ವರ್ಷಗಳೇ ಕಳೆದಿವೆ. ಆದರೆ, ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿಲ್ಲ ಎಂದು ಪಟ್ಟಣದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಸ್ತೆಯಲ್ಲಿ ಗುಂಡಿಗಳೇ ಹೆಚ್ಚಾಗಿವೆ. ಈ ರಸ್ತೆಯಲ್ಲಿ ಸಂಚರಿಸಿದರೆ ವಾಹನಗಳ ಟೈರ್‌ ಹಾಳಾಗುತ್ತವೆ. ಅಲ್ಲದೆ, ವಾಹನ ರಿಪೇರಿಗೆ ಗಳಿಸಿದ್ದನ್ನೆಲ್ಲ ಸುರಿಯಬೇಕಾಗುತ್ತದೆ ಎಂದು ಆಟೊ ಚಾಲಕ ಸದ್ದಾಂ ಹುಸೇನ್ ಅಳಲು ತೋಡಿಕೊಂಡರು.

ADVERTISEMENT

ರಸ್ತೆ ಹದಗೆಟ್ಟಿರುವುದರಿಂದ ಈ ಮಾರ್ಗದಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ. ರಸ್ತೆ ದುರಸ್ತಿಗೆ ಟೆಂಡರ್ ಕರೆದಿದ್ದೇವೆ ಎಂದು ಸ್ಥಳೀಯ ಶಾಸಕರು ಮೂರ್ನಾಲ್ಕು ವರ್ಷಗಳಿಂದ ಹೇಳುತ್ತಿದ್ದಾರೆ. ಅವರ ಅವಧಿ ಮುಗಿಯುತ್ತಾ ಬಂದರೂ ರಸ್ತೆಗಳು ಮಾತ್ರ ಸುಧಾರಣೆಯಾಗಿಲ್ಲ ಎಂಬುವುದು ಸಾರ್ವಜನಿಕರ ದೂರು.

ಯಾವುದೇ ಪಟ್ಟಣ ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕಾದರೆ ರಸ್ತೆ, ಸಾರಿಗೆ ವ್ಯವಸ್ಥೆ ಉತ್ತಮವಾಗಿರಬೇಕು. ಗುಣಮಟ್ಟದ ರಸ್ತೆಗಳಿಲ್ಲದಿದ್ದರೆ ಆ ಪಟ್ಟಣ ಆರ್ಥಿಕವಾಗಿ ಹಿಂದುಳಿಯುತ್ತದೆ. ಹೀಗಾಗಿ ಸಂಬಂಧಪಟ್ಟವರು ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕ ದೇವಿಂದ್ರಪ್ಪ ಬಳಿಚಕ್ರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.