ADVERTISEMENT

ಹೊಂಡದ ತ್ಯಾಜ್ಯ ದೊಡ್ಡ ಕೆರೆಗೆ; ಆತಂಕ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 8:19 IST
Last Updated 18 ಸೆಪ್ಟೆಂಬರ್ 2017, 8:19 IST
ಯಾದಗಿರಿಯ ದೊಡ್ಡ ಕೆರೆ ಒಡಲಿನಲ್ಲೇ ನಗರಸಭೆ ನಿರ್ಮಿಸಿರುವ ಹೊಂಡ ತುಂಬಿರುವ ದೃಶ್ಯ
ಯಾದಗಿರಿಯ ದೊಡ್ಡ ಕೆರೆ ಒಡಲಿನಲ್ಲೇ ನಗರಸಭೆ ನಿರ್ಮಿಸಿರುವ ಹೊಂಡ ತುಂಬಿರುವ ದೃಶ್ಯ   

ಯಾದಗಿರಿ: ಗಣೇಶ ಚತುರ್ಥಿಗೆ ಮುಂಜಾಗ್ರತೆ ವಹಿಸದ ನಗರಸಭೆ ನಗರದಾದ್ಯಂತ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಕಾರಣವಾಯಿತು. ಪ್ರತಿಷ್ಠಾಪನೆ ಗೊಂಡಿದ್ದ ಪಿಒಪಿ ಗಣೇಶನ ಮೂರ್ತಿಗಳಿಂದ ಜಲಮೂಲ ರಕ್ಷಿಸುವಂತೆ ಜಿಲ್ಲಾಡಳಿತ ಕಟ್ಟಪ್ಪಣೆ ಹೊರಡಿಸಿದಾಗ ಒಂದೂ ಆಲೋಚಿಸದ ನಗರಸಭೆ ದೊಡ್ಡ ಕೆರೆ ಅಂಗಳದಲ್ಲೇ ತಾತ್ಕಾಲಿಕ ಹೊಂಡ ನಿರ್ಮಿಸಿ ವಿಸರ್ಜನೆಗೆ ಅವಕಾಶ ಕಲ್ಪಿಸಿತು. ನಿರಂತರ ಮಳೆಯಿಂದ ಈಗ ಹೊಂಡ ತುಂಬಿದೆ. ಹೊಂಡದ ತ್ಯಾಜ್ಯ ದೊಡ್ಡಕೆರೆಯ ಒಡಲು ಸೇರುವ ಆತಂಕ ಈಗ ಸೃಷ್ಟಿಗೊಂಡಿದೆ.

ಗಣೇಶ ಚತುರ್ಥಿ ಒಂದು ತಿಂಗಳು ಇರುವಾಗಲೇ ನಗರಸಭೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಗೆ ಅವಕಾಶ ಕಲ್ಪಿಸಬೇಕಿತ್ತು. ಕನಿಷ್ಠ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುವ ವಿರುದ್ಧ ಕಟ್ಟೆಚ್ಚರಿಕೆ ನೀಡಬೇಕಿತ್ತು.

ಆದರೆ, ಹೊರರಾಜ್ಯಗಳಿಂದ ಬಂದ ವ್ಯಾಪಾರಿಗಳು ನಗರದಲ್ಲಿ ನೂರಾರು ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದರೂ, ಜಾಣ ಕುರುಡು ಪ್ರದರ್ಶಿಸಿದ ನಗರಸಭೆ ಕನಿಷ್ಠ ಅವುಗಳಿಂದ ಜಲಮೂಲ ರಕ್ಷಿಸಲಾದರೂ ನಗರ ಹೊರವಲಯದಲ್ಲಿ ತಾತ್ಕಾಲಿಕ ಹೊಂಡ ನಿರ್ಮಿಸಿಬೇಕಿತ್ತು. ಆದರೆ ಕೆರೆ ಅಂಗಳವನ್ನೇ ಬಳಸಿಕೊಂಡಿರುವುದು ಮಾತ್ರ ಅವೈಜ್ಞಾನಿಕ ಕ್ರಮ ಎಂಬುದಾಗಿ ಪರಿಸರ ಸಂರಕ್ಷಣಾ ಸಂಘಟನೆಗಳು ಆರೋಪಿಸಿವೆ.

ADVERTISEMENT

52 ಮೂರ್ತಿಗಳು: ಹೊರರಾಜ್ಯದ ವ್ಯಾಪಾರಿಗಳು ಪಿಒಪಿ ಗಣೇಶ ಮೂರ್ತಿಗಳನ್ನು ಭರ್ಜರಿ ವ್ಯಾಪಾರ ಮಾಡಿಕೊಳ್ಳಲು ಸಹಕರಿಸಿದ ನಗರಸಭೆ ಕೊನೆ ಕ್ಷಣದಲ್ಲಿ ಜಿಲ್ಲಾಡಳಿತದ ಒತ್ತಾಯಕ್ಕೆ ಮಣಿದು 70 ಪಿಒಪಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿತ್ತು. ಕೊನೆಗಳಿಗೆಯಲ್ಲಿ ಅವೂ ಸಹ ಮಾರಾಟ ಆಗುವಂತೆ ನೋಡಿಕೊಂಡಿತು. ಇದರಿಂದ ನಗರದ ತಾತ್ಕಾಲಿಕ ಹೊಂಡದಲ್ಲಿ ಒಟ್ಟು 52 ಪಿಒಪಿ ಗಣೇಶ ಮೂರ್ತಿಗಳು ಮುಳುಗಿವೆ ಎಂಬುದಾಗಿ ಗಣೇಶ ಪ್ರತಿಷ್ಠಾಪನೆಗೆ ಪರವಾನಗಿ ನೀಡಿರುವ ನಗರ ಠಾಣೆಯ ಪೊಲೀಸ್‌ ವರದಿ ಹೇಳುತ್ತದೆ.

‘ರಾಸಾಯನಿಕಯುಕ್ತವಾಗಿರುವ ತಾತ್ಕಾಲಿಕ ಹೊಂಡ ನಿರಂತರ ಮಳೆಯಿಂದ ತುಂಬಿದ್ದು, ಅದೆಲ್ಲಾ ಈಗ ದೊಡ್ಡ ಕೆರೆಯ ಒಡಲು ಸೇರಲಿದೆ. ನಗರಸಭೆಯ ಇಂತಹ ಅವೈಜ್ಞಾನಿಕ ಕೆಲಸದಿಂದ ಕೆರೆನೀರು ಕಲುಷಿತಗೊಳ್ಳುತ್ತಿದೆ’ ಎಂದು ಟೋಕ್ರೆ ಕೋಲಿ ಕಬ್ಬಲಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಮುದ್ನಾಳ ಆತಂಕ ವ್ಯಕ್ತಪಡಿಸಿದ್ದಾರೆ.

‘ನಗರಸಭೆ ಪೌರಾಯುಕ್ತರಿಗೆ ಜಲಮೂಲ ರಕ್ಷಣೆ ಬಗ್ಗೆ ಯಾವುದೇ ಕಾಳಜಿ ಇಲ್ಲ. ನಗರದಲ್ಲಿ ಎಷ್ಟು ಮೂರ್ತಿಗಳು ಪ್ರತಿಷ್ಠಾಪಿಸಲ್ಪಟ್ಟಿವೆ. ತಾತ್ಕಾಲಿಕ ಹೊಂಡ ಎಲ್ಲಿ ನಿರ್ಮಿಸಬೇಕು. ವಿಸರ್ಜನೆಯ ನಂತರ ಏನು ಕ್ರಮಕೈಗೊಳ್ಳಬೇಕು? ಎಂಬ ಯಾವುದೇ ಕ್ರಮಬದ್ಧ ಆಲೋಚನೆ ಇಲ್ಲದೆ ದೊಡ್ಡಕೆರೆಯ ಒಡಲಿನಲ್ಲೇ ಹೊಂಡ ನಿರ್ಮಿಸಿರುವುದು ನಿಜಕ್ಕೂ ದುರಂತ. ಜಿಲ್ಲಾಧಿಕಾರಿ ಈ ಕುರಿತು ಪರಿಶೀಲನೆ ನಡೆಸಿ ತಕ್ಷಣ ಹೊಂಡ ಮುಚ್ಚಿಸಲು ಮುಂದಾಗಬೇಕಿದೆ’ ಎಂದು ಅವರು ಒತ್ತಾಯಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.