ADVERTISEMENT

‘ಕಾಂಗ್ರೆಸ್‌ ದುರಾಡಳಿತದಿಂದ ಜನತೆಗೆ ಬೇಸರ’

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 7:18 IST
Last Updated 13 ಫೆಬ್ರುವರಿ 2016, 7:18 IST

ಯಾದಗಿರಿ: ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನತೆ, ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ. ಈ ಬಾರಿಯ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತದಿಂದ ಅಧಿಕಾರ ನೀಡುವುದು ನಿಶ್ಚಿತ ಎಂದು ಬಿಜೆಪಿ ಮುಖಂಡ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

ತಾಲ್ಲೂಕಿನ ಗುಲಗುಂಜಿ ತಾಂಡಾ, ಅಲ್ಲಿಪುರ ತಾಂಡಾಗಳಲ್ಲಿ ಬಿಜೆಪಿ ಅಭ್ಯರ್ಥಿ ಖಂಡಪ್ಪ ದಾಸನ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಜನವಿರೋಧಿ ಕ್ರಮಗಳಿಂದ ಜನತೆ ತೀವ್ರ ಬೇಸತ್ತಿದ್ದು, ಇದರಿಂದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಸಿಗಲಿದೆ ಎಂದು ಹೇಳಿದರು.

ಬಿಜೆಪಿ ಎಲ್ಲ ಜಾತಿ ಜನಾಂಗದವರಿಗೆ ಟಿಕೆಟ್‌ ನೀಡುವ ಮೂಲಕ ಸರ್ವರಿಗೂ ಸಮಪಾಲು ಸಮಬಾಳು ಎಂಬ ತತ್ವವನ್ನು ಆಚರಣೆಯಲ್ಲಿ ತಂದಿದ್ದು, ಸ್ವಜನ ಪಕ್ಷಪಾತ, ಇಲ್ಲವೇ ಜಾತಿ ರಾಜಕಾರಣ ಮಾಡಿಲ್ಲ. ಬದಲಾಗಿ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ನೀಡುವ ಮೂಲಕ ಇತರರಿಗಿಂತ ವಿಭಿನ್ನ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.

ನಾನು ಯಾವಾಗಲೂ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುತ್ತ ಬಂದಿದ್ದು, ಜನರ ವಿಶ್ವಾಸ ಗಳಿಸಿದ್ದೇನೆಯೇ ಹೊರತು. ಹಣವನ್ನು ಗಳಿಸಿಲ್ಲ ಎಂದ ಅವರು, ಎಲ್ಲರ ಏಳ್ಗೆಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು. ಹತ್ತಿಕುಣಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಭ್ಯರ್ಥಿ ಖಂಡಪ್ಪ ದಾಸನ್, ತಾಲ್ಲೂಕು ಪಂಚಾಯಿತಿ ಅಭ್ಯರ್ಥಿ ಸಾಕಿಬಾಯಿ ರಾಜು ಅವರನ್ನು ಆಯ್ಕೆ ಮಾಡಿದಲ್ಲಿ, ಶಕ್ತಿಮೀರಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

ರಾಮರೆಡ್ಡಿಗೌಡ ಕ್ಯಾಸಪನಹಳ್ಳಿ ಮಾತನಾಡಿ, ಬಂಜಾರಾ ಸಮಾಜಕ್ಕೆ ಟಿಕೆಟ್‌ ನೀಡಿರುವುದನ್ನು ಗುರುತಿಸಿ ಎಲ್ಲರೂ ಒಟ್ಟಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಅಭ್ಯರ್ಥಿ ಖಂಡಪ್ಪ ದಾಸನ್ ಮಾತನಾಡಿ, ಈಗಾಗಲೇ ಒಂದು ಬಾರಿ ಅವಕಾಶ ಮಾಡಿಕೊಟ್ಟಿದ್ದೀರಿ. ಆಗ ಉತ್ತಮ ಸೇವೆ ಮಾಡಿದ್ದು, ಸೇವೆಗೆ ಇನ್ನೊಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಜನಾರ್ದನ ರಾಠೋಡ, ನಾಗಪ್ಪ ಬೆನಕಲ್, ಸ್ವಾಮಿದೇವ ದಾಸನಕೇರಿ, ಪ್ರೇಮಕುಮಾರ ಚವಾಣ್‌, ಗ್ರಾಮಸ್ಥರು ಇದ್ದರು. ಇದೇ ಸಂದರ್ಭದಲ್ಲಿ ತಿಮ್ಮಯ್ಯ, ಕಾರಬಾರಿ ಗೋಪಾಲ, ಚಂದ್ರಪ್ಪ, ದ್ಯಾವಪ್ಪ, ತಿಮ್ಮಣ್ಣ, ಶೇಖರ ನಾಯಕ, ತಾರಾಸಿಂಗ್ ಇತರರು ಬಿಜೆಪಿ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.