ADVERTISEMENT

ಕಪ್ಪುಹಲಗೆಯ ಭಾವ ಬೆಸುಗೆ

ಆಶಾ ಜಗದೀಶ್
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST
ಕಪ್ಪುಹಲಗೆಯ ಭಾವ ಬೆಸುಗೆ
ಕಪ್ಪುಹಲಗೆಯ ಭಾವ ಬೆಸುಗೆ   

ಮಹೇಶ ಐದನೇ ತರಗತಿಯ ಚೂಟಿ ಮಗು. ಎಲ್ಲ ಚಟುವಟಿಕೆಗಳಲ್ಲೂ ಅವನೇ ಮುಂದು. ಆದರೆ ಅವನ ಶಿಕ್ಷಕರು ಯಾವ ಮಗುವನ್ನೂ ಹತ್ತಿರ ಬಂದು ನಿಲ್ಲಲು ಬಿಡುತ್ತಿರಲಿಲ್ಲ. ಒಂದು ಸಣ್ಣ ತಪ್ಪು ಮಾಡಿದರೂ ಏಟು, ಬೈಗುಳ. ಅವರ ಗಂಟು ಮುಖ ನೋಡಿದರೇ ಮಕ್ಕಳು ಭಯಪಡುತ್ತಿದ್ದರು.

ಒಂದಿನ ಮೇಷ್ಟ್ರು ಹೀಗೇ ತಮ್ಮ ಎಂದಿನ ವೈಖರಿಯಲ್ಲಿ ಅವತ್ತೂ ಮಹೇಶ ಪಕ್ಕದವನೊಂದಿಗೆ ಮಾತನಾಡಿದ ಎಂದು ಬೆತ್ತ ತೆಗೆದು ಬಾರಿಸಿಬಿಟ್ಟರು. ಆದರೆ ಅದು ಹೇಗೆ ಏಟು ಬಿತ್ತೋ ಮಹೇಶನ ಕಿರುಬೆರಳು ಕಿತ್ತು ರಕ್ತ ಸೋರತೊಡಗಿತು. ಮಾರನೆ ದಿನ ಶಾಲೆಗೆ ಬಂದ ಪೋಷಕರು ಜೋರಾಗಿ ಗಲಾಟೆ ಶುರುವಿಟ್ಟುಕೊಂಡರು. ಮಹೇಶ ತನ್ನ ಮೇಷ್ಟ್ರು ಅಂಗಲಾಚುವುದನ್ನು ನೋಡುತ್ತ ನಿಂತ.

ಇನ್ನೊಂದು ಘಟನೆ... ಅದೊಂದು ಶಾಲೆ. ಅಲ್ಲಿ ರಾಜು ಮೇಷ್ಟ್ರು ಎನ್ನುವ ಶಿಕ್ಷಕರಿದ್ದರು. ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ. ಎಂದೂ ಗಟ್ಟಿಯಾಗಿ ಮಕ್ಕಳನ್ನು ಬೈದವರಲ್ಲ. ಕೆಟ್ಟ ಪದ ಬಳಸಿದವರಲ್ಲ. ಮಕ್ಕಳು ತಪ್ಪು ಮಾಡಿದಾಗಲೂ ಪ್ರೀತಿಯಿಂದಲೇ ಗದರಿಕೊಂಡವರು, ಕೂರಿಸಿಕೊಂಡು ಬುದ್ಧಿ ಹೇಳಿದವರು. ಒಂದಿನ ರಾಜೂ ಮೇಷ್ಟ್ರು ಮಕ್ಕಳೊಂದಿಗೆ ತಾವೂ ಸೇರಿಕೊಂಡು ಕಬಡ್ಡಿ ಆಡುತ್ತಿದ್ದರು.

ಆಗ ಎದುರಿನಿಂದ ರೈಡರ್ರಾಗಿ ಬಂದ ನಿತಿನನ್ನು ಈ ಗುಂಪಿನವರೆಲ್ಲ ಕಾಲು ಹಿಡಿದು ಬೀಳಿಸಿ ಓಟ್ ಮಾಡಿ ಗೆದ್ದೆವೆಂದು ಬೀಗುತ್ತಿದ್ದರು... ಅದರೆ ನಿತಿನ್‌ ಜೋರಾಗಿ ಅಳತೊಡಗಿದ್ದ. ಏನಾಯ್ತೆಂದು ನೋಡಿದರೆ ನಿತಿನ್‌ನ ಕಾಲು ಜೋರಾಗಿ ಉಳುಕಿ ಬಾವು ಬಂದುಬಿಟ್ಟಿತ್ತು. ಇಡಲಾರದೆ ಕಷ್ಟಪಟ್ಟು ಹೆಜ್ಜೆ ಕಿತ್ತಿಡುತ್ತಿದ್ದ. ಮೇಷ್ಟ್ರು ತನಗೆ ಗೊತ್ತಿದ್ದ ವೈದ್ಯವನ್ನೆಲ್ಲ ಮಾಡಿದರು, ಮೂವ್ ಹಚ್ಚಿದರು. ಕೊನೆಗೂ ನೋವು ತಹಬದಿಗೆ ಬರಲಿಲ್ಲ.

ADVERTISEMENT

ಮತ್ತೇನು ಮಾಡಲೂ ದಾರಿ ತೋಚದೆ ಆಸ್ಪತ್ರೆಗೆ ಹೋಗಲು ತಿಳಿಸಿ ಮನೆಗೆ ಕಳಿಸಿಕೊಟ್ಟರು. ಮರುದಿನ ನಿತಿನ ಅವನ ಪೋಷಕರೊಂದಿಗೆ ಶಾಲೆಗೆ ಬಂದ. ರಾಜೂ ಮೇಷ್ಟ್ರು ತಾವೇ ಮುಂದಾಗಿ ಬಂದು ಅವನ ಆರೋಗ್ಯ ವಿಚಾರಿಸಿ ತನ್ನ ನಿರ್ಲಕ್ಷ್ಯದಿಂದ ಹೀಗಾಗಿಬಿಟ್ಟಿತು ಎಂದು ಪಶ್ಚಾತಾಪ ಪಟ್ಟರು. ಆದರೆ ಪೋಷಕರೇ ರಾಜು ಮೇಷ್ಟ್ರನ್ನು ಸಮಾಧಾನ ಪಡಿಸಿ ‘ಇನ್ನೆರೆಡು ದಿನದಲ್ಲಿ ಸರಿಹೋಗುತ್ತಾನೆ’ ಎಂದು ಹೇಳಿದರು.

ಈ ಎರಡು ಘಟನೆಗಳನ್ನು ಓದಿದ ಮೇಲೆ ನೀವು ಯಾರಾಗಲು ಬಯಸುತ್ತೀರಿ?! ನಿಸ್ಸಂಶಯವಾಗಿ ನನ್ನನ್ನೂ ಸೇರಿದಂತೆ ನಾವೆಲ್ಲಾ ಮೆಚ್ಚುವುದು, ಒಪ್ಪುವುದು ರಾಜು ಮೇಷ್ಟ್ರನ್ನೇ. ಆದರೆ ನಾವೂ ಸಹ ರಾಜು ಮೇಷ್ಟ್ರಂತೆ ಆಗಬೇಕು ಎಂದೇಕೆ ಅಂದುಕೊಳ್ಳುವುದಿಲ್ಲ?!

ನಾವು ಕೆಲಸ ಮಾಡುವ ಕ್ಷೇತ್ರ ಯಾವುದು, ನಮ್ಮ ಉದ್ದೇಶ ಏನು, ಯಾಕಾಗಿ ಇಲ್ಲಿ ಬಂದಿದ್ದೇವೆ ಎನ್ನುವ ವಿವೇಚನೆ ಇಲ್ಲದಿದ್ದರೆ ಶಿಕ್ಷಕನಾದವನು ಸಮಾಜಕ್ಕೆ ಅಪಕಾರಿಯಾಗಿಬಿಡಬಲ್ಲ. ಶಿಕ್ಷಕನ ಒಂದು ಸಣ್ಣ ತಪ್ಪು ಅದು ಒಂದು ಮಗುವಿನ ಸುಂದರ ಭವಿಷ್ಯವನ್ನು ನುಚ್ಚು ನೂರು ಮಾಡಬಲ್ಲದು.

ನಿಃಸ್ವಾರ್ಥವಾಗಿ, ನಿಸ್ಪೃಹವಾಗಿ ಕೆಲಸ ಮಾಡಬೇಕಾದ ನಾವು ಯಾಕಿಷ್ಟು ಸಂಕುಚಿತಗೊಳ್ಳುತ್ತಾ ಹೋಗುತ್ತೇವೆ? ಶಿಕ್ಷಣವೆಂಬ ಪರಸ್ಪರ ಭಾಗೀದಾರರ ನಡುವೆ ಸಕ್ರಿಯವಾಗಿ ಕಾರ್ಯೋನ್ಮುಖವಾಗಬೇಕಾದ ಪ್ರಕ್ರಿಯೆ. ಅದು ಶಿಕ್ಷಕರಿಂದ  ಏಕೆ ಕಲುಷಿತಗೊಳ್ಳಬೇಕು? ಶಾಲೆಗಳೆಂಬ ಸೌಹಾರ್ದಯುತ ಅಂಗಳ; ನಮ್ಮ ನಮ್ಮ ಪ್ರತಿಷ್ಠೆಯ ಕಣಗಳೇಕಾಗಬೇಕು?

ಭಾರತ ದೇಶ ಭವ್ಯ ಇತಿಹಾಸ ಹೊಂದಿರುವ ದೇಶ. ಇಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ಇಲ್ಲಿ ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ. ಕಾಲ ಬದಲಾಗಿದೆ, ಬದಲಾದ ಕಾಲಘಟ್ಟದಲ್ಲಿ ಶಿಕ್ಷಕನ ಸ್ಥಾನಮಾನವೂ ಸಾಕಷ್ಟು ಸ್ಥಿತ್ಯಂತರಗೊಂಡಿದೆ, ನಿಜ. ನಮ್ಮ ಮಾತು ಕೃತಿಗಳಲ್ಲಿ ಒಂದಷ್ಟು ಸಾಮ್ಯತೆ ಕಂಡುಕೊಂಡರೂ ಮಕ್ಕಳು ನಮ್ಮನ್ನು ನಂಬುತ್ತಾರೆ.

ಮಕ್ಕಳೇ ನಮ್ಮ ಬಗ್ಗೆ ನಂಬಿಕೆ ಕಳೆದುಕೊಂಡುಬಿಟ್ಟರೆ ಶಿಕ್ಷಣವ್ಯವಸ್ಥೆಯ ಗತಿ ಏನಾದೀತು? ಶಿಕ್ಷಕರೇ, ಒಂದು ಚೂರು ಪ್ರೀತಿಸಿ ನೋಡಿ, ಮಕ್ಕಳಿಂದ ಅದು ಹತ್ತು ಪಟ್ಟಾಗಿ ಹಿಂದುರುಗುವುದನ್ನು ಕಾಣುತ್ತೀರಿ.

ಇಂದಿಗೂ ಯಾರಾದರೂ ನಮ್ಮನ್ನು ನಿಲ್ಲಿಸಿ ‘ನಿಮ್ಮ ಮೆಚ್ಚಿನ ಶಿಕ್ಷಕ/ಶಿಕ್ಷಕಿ ಯಾರು?’ ಎಂದು ಕೇಳಿದರೆ ಸಾಕು ಸರ್ರನೆ ಬಾಲ್ಯ ಹುಡುಕಿಕೊಂಡು ಹೊರಟುಬಿಡುತ್ತೇವೆ. ಅಂದಿನ ಆ ಶಿಕ್ಷಕರು ಎಂಥವರಿದ್ದರು? ಯಾಕೆ ನಾವವರನ್ನು ಇಂದಿಗೂ ಮರೆಯಲು ಆಗುತ್ತಿಲ್ಲ? ಶಿಕ್ಷಕರು ಎಂದಾಕ್ಷಣ ನಾವು ಅವರನ್ನೇ ಯಾಕೆ ನೆನಪಿಸಿಕೊಳ್ಳುತ್ತೇವೆ? ಅವರೆಲ್ಲ ಅಂದು ಅಷ್ಟೆಲ್ಲ ಕಷ್ಟಪಟ್ಟದ್ದು, ನಾವು ಇಂದು ಅದನ್ನೆಲ್ಲ ಕಳೆದುಕೊಂಡು ಶುಷ್ಕವಾಗುವುದಕ್ಕಾಗಿಯೇ?  ಸಾವಿರ ಬಾರಿ ನಾವು – ಶಿಕ್ಷಕರು ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

ಇನ್ನು ಹದಿಹರೆಯದ ಮಕ್ಕಳನ್ನು ನಿರ್ವಹಿಸುವುದು ಇನ್ನೊಂದು ಸವಾಲು. ಒಮ್ಮೆ ಒಬ್ಬ ಶಿಕ್ಷಕಿ, ತನ್ನ ಹತ್ತನೇ ತರಗತಿಯ ವಿದ್ಯಾರ್ಥಿನಿ ಯಾರೋ ಹುಡುಗನೊಟ್ಟಿಗೆ ಮಾತಾಡುತ್ತಿರುವುದನ್ನು ನೋಡುತ್ತಾಳೆ. ಮರುದಿನ ಶಾಲೆಗೆ ಬಂದ ಆ ವಿದ್ಯಾರ್ಥಿನಿಯನ್ನು ಪೂರ್ವಾಪರ ವಿಚಾರಿಸಿಕೊಳ್ಳದೆ, ಹಿಗ್ಗಾಮುಗ್ಗಾ ಬೈಯ್ಯಲು ಶುರುಮಾಡುತ್ತಾಳೆ. ಮತ್ತೆ ತನ್ನ ಸಹೋದ್ಯೋಗಿಗಳು ಹಾಗೂ ಮಕ್ಕಳ ಮುಂದೆಯೇ ನೀನು ಸರಿಯಿಲ್ಲ ಎಂದುಬಿಡುತ್ತಾಳೆ.

ಏನಾಯಿತು? ಮರುದಿನ ಆ ಹುಡುಗಿ ಯಾವುದೋ ದುಡುಕಿನ ನಿರ್ಧಾರ ತೆಗೆದುಕೊಂಡ ಸುದ್ದಿ ಬಂದಿರುತ್ತದೆ. ಹತ್ತನೇ ತರಗತಿಯ ವಿದ್ಯಾರ್ಥಿಯೋರ್ವ ಪರೀಕ್ಷಾ ಶುಲ್ಕ ಭರಿಸಿಲ್ಲ ಎಂಬ ಕಾರಣಕ್ಕೆ ಮುಖ್ಯ ಶಿಕ್ಷಕರು ಅವನಿಗೆ ಹಾಲ್‌–ಟಿಕೆಟ್ ಕೊಡದೆ ಸತಾಯಿಸುತ್ತಾರೆ.

ಆ ಹುಡುಗ ನೊಂದು ಏನಾದರು ಅಪಾಯ ಮಾಡಿಕೊಂಡರೆ? ಹಾಗಾದರೆ ಯೋಚಿಸಿ ನಾವೆಲ್ಲಿ ಎಡವುತ್ತಿದ್ದೇವೆ? ಹದಿನೈದು ಹದಿನಾರನೆ ವಯಸ್ಸಿಗೆ ಒಬ್ಬನ ಚಾರಿತ್ರ್ಯವನ್ನು ನಿರ್ಧರಿಸಲು ಸಾಧ್ಯವೆ? ತಿದ್ದಿಕೊಂಡು ಬದುಕುವುದಕ್ಕೆ ಅವಕಾಶವನ್ನೇ ಕೊಡಬಾರದೆ? ನಮ್ಮ ಬಡ ಮಕ್ಕಳು ಫೀಸ್ ಕಟ್ಟದಿದ್ದದ್ದಕ್ಕೇ ಸಾಯಬೇಕೆ?

ತಪ್ಪುಗಳು ಕಲಿಸುವ ಪಾಠ ಅದು ಬದುಕಿನ ಪಾಠ. ಹಾಗೆಂದು ಮಕ್ಕಳನ್ನು ತಪ್ಪು ಮಾಡಲು ಪ್ರಚೋದಿಸಿ ಎಂದು ಹೇಳುತ್ತಿಲ್ಲ. ಆದರೆ ಒಂದು ಸಣ್ಣ ತಪ್ಪನ್ನು ಅವರ ತಲೆಗೆ ಕಟ್ಟಿ ಜೀವಾವಧಿಶಿಕ್ಷೆಯನ್ನೋ ಮರಣದಂಡನೆಯನ್ನೋ ಯಾಕೆ ವಿಧಿಸುವುದು? ಕಾಯಬೇಕಾದ ಗುರುವೇ ಕಾಡಿದರೆ? ಶಿಕ್ಷಕರೇ ಕಾಮುಕರಾದರೆ? ನಮ್ಮ ಮುಗ್ಧ ಹೆಣ್ಣುಮಕ್ಕಳು ಎಲ್ಲಿಗೆ ಹೋಗಬೇಕು? ಇದು ಎಲ್ಲರಿಗೂ ಅನ್ವಯಿಸಿ ಹೇಳುತ್ತಿರುವುದಲ್ಲ. 
(ಲೇಖಕಿ ಶಿಕ್ಷಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.