ADVERTISEMENT

ಸಂದರ್ಶನ: ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ– ಆರ್. ಅಶೋಕ

ಕಟುಕ ಹೃದಯಿಗಳಿಗೆ ಏದುಸಿರು: ಆರ್. ಅಶೋಕ

ಎಸ್.ರವಿಪ್ರಕಾಶ್
Published 18 ಏಪ್ರಿಲ್ 2024, 0:28 IST
Last Updated 18 ಏಪ್ರಿಲ್ 2024, 0:28 IST
ಆರ್. ಅಶೋಕ 
ಆರ್. ಅಶೋಕ    

‘ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಆಗೋದು ನೂರಕ್ಕೆ ನೂರು ಗ್ಯಾರಂಟಿ ಎಂದು’ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

 ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

*ಎಷ್ಟು ಸ್ಥಾನ ಗೆಲ್ಲುತ್ತೀರಿ?

ADVERTISEMENT

ಒಂದು ತಿಂಗಳಿಂದ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಇಡೀ ರಾಜ್ಯದಲ್ಲಿ ಮೋದಿ, ಬಿಜೆಪಿ ಮತ್ತು ಎನ್‌ಡಿಎ ಪರವಾದ ವಾತಾವರಣವಿದೆ. 2014 ಮತ್ತು 2019ರಲ್ಲಿ ನಾವು ನೋಡಿದ್ದ ಮೋದಿ ಅಲೆಗಿಂತಲೂ ಈ ಬಾರಿ ಮೋದಿ ಹವಾ ಜೋರಾಗಿದೆ. ಎನ್‌ಡಿಎ 28 ಸ್ಥಾನಗಳನ್ನೂ ಗೆಲ್ಲುತ್ತದೆ.

* ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂಬ ಅಭಿಪ್ರಾಯವಿದೆ. ಅಲ್ಲಿ ಗೆಲ್ಲುವ ತಂತ್ರಗಾರಿಕೆ ಏನು?

ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದು ನಾವಲ್ಲ, ಕಾಂಗ್ರೆಸ್ ಅಭ್ಯರ್ಥಿ. ನಾವು ಒಳ್ಳೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಡಾ. ಮಂಜುನಾಥ್ ಅವರಿಗೆ ತಮ್ಮದೇ ಆದ ವರ್ಚಸ್ಸಿದೆ, ಜನಮನ್ನಣೆ ಇದೆ. ನಮ್ಮ ಹೃದಯವಂತ ವೈದ್ಯರ ಜನಪ್ರಿಯತೆ ನೋಡಿ ಕಾಂಗ್ರೆಸ್‌ನ ಕಟುಕ ಹೃದಯಿಗಳಿಗೆ ಏದುಸಿರು ಹೆಚ್ಚಾಗಿದೆ. ಉಪ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್‌ಗೆ ಇದು ವೈಯಕ್ತಿಕ ಪ್ರತಿಷ್ಠೆ, ಭವಿಷ್ಯದ ಪ್ರಶ್ನೆಯಾಗಿದೆ.

*ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಪಲ್ಲಟಗಳಾಗುತ್ತವೆ ಎಂದು ನೀವೆಲ್ಲ ಹೇಳುತ್ತಿದ್ದೀರಿ? ಇದರ ಗುಟ್ಟೇನು?

ಆ ಲಕ್ಷಣಗಳು ಗೋಚರಿಸುತ್ತಿವೆ. ಒಂದು ಕಡೆ ಸಿದ್ದರಾಮಯ್ಯ 60 ಸಾವಿರ ಲೀಡ್‌ ಕೊಟ್ಟರೆ ನನ್ನನ್ನು ಯಾರೂ ಮುಟ್ಟಲಿಕ್ಕೆ ಆಗುವುದಿಲ್ಲ ಅಂತ ವರುಣದಲ್ಲಿ ಹೇಳಿದ್ದಾರೆ. ನಾನು ಇರಬೇಕಾ ಬೇಡವಾ ಎಂದೂ ಕೇಳಿದ್ದಾರೆ. ಕಾಂಗ್ರೆಸ್‌ ಸೋತರೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಶಾಸಕ ಗುಬ್ಬಿ ಶ್ರೀನಿವಾಸ್‌ ಹೇಳಿದ್ದಾರೆ. ದೆಹಲಿಯಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗಿದೆ. ಇನ್ನು ಜಾಸ್ತಿ ದಿನ ಇಲ್ಲ, ತಡೆದುಕೊಳ್ಳಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇವೆಲ್ಲಾ ನೋಡುತ್ತಿದ್ದರೆ ಲೋಕಸಭೆ ಚುನಾವಣೆ ಆದ ಮೇಲೆ ಕಾಂಗ್ರೆಸ್‌ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಆಗೋದು ನೂರಕ್ಕೆ ನೂರು ಗ್ಯಾರಂಟಿ ಅನ್ನಿಸುತ್ತೆ.

*ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪ್ರಚಾರಕ್ಕೆ ಇಳಿದಿದೆ. ಅವರ ಉತ್ಸಾಹ ನಿಮ್ಮ ಓಟಕ್ಕೆ ತಡೆ ಒಡ್ಡಿದೆಯೇ?

ತೆರಿಗೆ ಹಂಚಿಕೆ ಆಗಲಿ, ಕೇಂದ್ರದ ಅನುದಾನ ಆಗಿರಲಿ, ಎನ್‌ಡಿಆರ್‌ಎಫ್‌ ಪರಿಹಾರ ಆಗಿರಲಿ, ಯುಪಿಎ ಸರ್ಕಾರಕ್ಕೆ ಹೋಲಿಸಿದರೆ  ಎನ್‌ಡಿಎ ಸರ್ಕಾರದಲ್ಲಿ ರಾಜ್ಯಕ್ಕೆ 2-3 ಪಟ್ಟು ಹೆಚ್ಚು ಬಂದಿದೆ. ಇನ್ನೂ ಏನಾದರೂ ಸಮಸ್ಯೆ ಇದ್ದರೆ ಒಕ್ಕೂಟ ವ್ಯವಸ್ಥೆಯಲ್ಲಿ ಅದನ್ನು ಮಾತುಕತೆ ಮೂಲಕ ಪರಿಹಾರ ಮಾಡಿಕೊಳ್ಳಬೇಕೇ ಹೊರತು ರಾಜಕೀಯ ಪ್ರೇರಿತ ಸಂಘರ್ಷಕ್ಕೆ ಇಳಿಯುವುದರಿಂದ ಏನೂ ಉಪಯೋಗವಿಲ್ಲ. ಹೈಕಮಾಂಡ್‌ ಮೆಚ್ಚಿಸಲು ಇವೆಲ್ಲ ನಾಟಕ. ಮೋದಿ ಅವರ ಬಗ್ಗೆ ಟೀಕೆ ಮಾಡುವುದಕ್ಕೆ ಇವೆಲ್ಲ ಆಟ. 28 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ತಿಣುಕಾಡುತ್ತಿತ್ತು. ಅಭ್ಯರ್ಥಿಗಳು ಸಿಗದೇ  ಸಚಿವರ ಮಕ್ಕಳು, ಪತ್ನಿಯರು, ಅಳಿಯಂದಿರಿಗೆ ಟಿಕೆಟ್ ನೀಡಿದ್ದಾರೆ. 20 ಸ್ಥಾನಗಳನ್ನು ಹೇಗೆ ಗೆಲ್ಲುತ್ತಾರೆ ಹೇಳಿ?

*ಗ್ಯಾರಂಟಿಗಳು ಕೈ ಹಿಡಿಯುತ್ತವೆ ಎಂಬ ದೃಢ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ?

ಗ್ಯಾರಂಟಿಗಳು ಕೈಹಿಡಿಯುತ್ತವೆ ಎನ್ನುವ ವಿಶ್ವಾಸ ಸ್ವತಃ ಕಾಂಗ್ರೆಸ್ ನಾಯಕರಿಗೇ ಇಲ್ಲ. ಅದಕ್ಕಾಗಿಯೇ ನೂರಾರು ಕೋಟಿ ಖರ್ಚು ಮಾಡಿ ಗ್ಯಾರಂಟಿ ಅನುಷ್ಠಾನ ಸಮಿತಿ, ಗ್ಯಾರಂಟಿ ಸಮೀಕ್ಷೆ ಅಂತೆಲ್ಲ ದುಂಬಾಲು ಬೀಳುತ್ತಿರುವುದು ಏಕೆ?  ನಿಜವಾಗಿಯೂ ಗ್ಯಾರಂಟಿಗಳು ಅವರ ಕೈಹಿಡಿದಿದೆ ಎನ್ನುವ ವಿಶ್ವಾಸ ಇದ್ದಿದ್ದರೆ ಇಷ್ಟೆಲ್ಲಾ ಆತಂಕ, ಅನುಮಾನ ಯಾಕೆ? 

ಷರತ್ತುಗಳನ್ನು ಹಾಕಿ ಗ್ಯಾರಂಟಿ ಫಲಾನುಭವಿಗಳನ್ನು ಕಡಿಮೆ ಮಾಡಿದ್ದಾರೆ. ಸಾರಿಗೆ ಸಂಸ್ಥೆಗಳು ನಷ್ಟದಿಂದ ಬಸ್ಸುಗಳ ಓಡಾಟವನ್ನೇ ಕಡಿಮೆ ಮಾಡಿ, ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ತಂದಿಟ್ಟಿದ್ದಾರೆ. 200 ಯೂನಿಟ್ ವಿದ್ಯುತ್‌ ಉಚಿತ ಅಂತ ಹೇಳಿ ಕಡೆಗೆ ವರ್ಷದ ಸರಾಸರಿ ಅಂತ ವರಸೆ ಬದಲಿಸಿದ್ದಾರೆ. ಎಷ್ಟು ಜನ ಮಹಿಳೆಯರಿಗೆ ಗೃಹ ಲಕ್ಷ್ಮಿ ಸಿಗುತ್ತಿದೆ? ಎಷ್ಟು ಜನ ಯುವಕರಿಗೆ ಯುವನಿಧಿ ಸಿಗುತ್ತಿದೆ? 

*ಜೆಡಿಎಸ್‌ ಜತೆ ಹೊಂದಾಣಿಕೆ ಬಿಜೆಪಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ?

ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಇಡೀ ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳಲ್ಲೂ ಅನುಕೂಲವಾಗುತ್ತದೆ. ಇದು ಚುನಾವಣೆಗಾಗಿ ಮಾಡಿಕೊಂಡ ಮೈತ್ರಿ ಅಲ್ಲ. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಮೋದಿ ಮತ್ತು ದೇವೇಗೌಡರು ಮಾಡಿರುವ ನಿರ್ಧಾರ.

*ಚುನಾವಣೆಗಾಗಿ ಒಕ್ಕಲಿಗ ಸಮುದಾಯ ಮತ್ತು ಆದಿಚುಂಚನಗಿರಿ ಸ್ವಾಮೀಜಿಗಳನ್ನು ಎಳೆದು ತರುವ ಅಗತ್ಯವಿತ್ತೇ?

ಕಳೆದ 10 ವರ್ಷಗಳಲ್ಲಿ ನಿಷ್ಕಳಂಕ, ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವ ಮೋದಿ ಸರ್ಕಾರದ ಮೇಲೆ ಟೀಕೆ ಮಾಡಲು ಕಾಂಗ್ರೆಸ್‌ಗೆ ವಿಷಯಗಳೇ ಇಲ್ಲ. ಇನ್ನು ‘ಇಂಡಿ’ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಅಂತ ಅವರಿಗೇ ಗೊತ್ತಿಲ್ಲ. ರಾಹುಲ್‌ಗಾಂಧಿ ಪ್ರಚಾರಕ್ಕೆ ಬರದಿದ್ದರೆ ಒಳ್ಳೆಯದು ಎನ್ನುವ ಸ್ಥಿತಿ ಕಾಂಗ್ರೆಸ್‌ನದು. ಹೀಗಾಗಿ ಗೊಂದಲ ಸೃಷ್ಟಿಸಲು ಒಕ್ಕಲಿಗ ಸಮುದಾಯ ಮತ್ತು ಆದಿಚುಂಚನಗಿರಿ ಸ್ವಾಮೀಜಿಯವರನ್ನು ಅವರು ಎಳೆದು ತಂದಿದ್ದಾರೆ.

‘ದೊಡ್ಡ ರಾಜಕೀಯ ಪಕ್ಷದಲ್ಲಿ ಇವೆಲ್ಲ ಸಹಜ’

*ಹಲವು ಕ್ಷೇತ್ರಗಳಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಬಂಡಾಯ ಎದ್ದವರು ಮತ್ತು ಅಸಮಾಧಾನಿತರು ಇದ್ದಾರೆ. ಇವರಿಂದ ನಿಮ್ಮ ಗೆಲುವಿಗೆ ಅಡ್ಡಿ ಆಗುವುದಿಲ್ಲವೇ? ನಮ್ಮದು ದೊಡ್ಡ ಪಕ್ಷ. ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಸಂಘಟನೆ ಎನ್ನುವುದನ್ನು ಮರೆಯಬಾರದು. ನಮ್ಮದು ಕುಟುಂಬ ಆಧಾರಿತ ಪಕ್ಷವಲ್ಲ. ಆಂತರಿಕ ಪ್ರಜಾಪ್ರಭುತ್ವ ಆರೋಗ್ಯಕರ ಪೈಪೋಟಿ ಇರುವ ‘ಕೇಡರ್ ಬೇಸ್ಡ್’ ಪಕ್ಷ. ಅದರಲ್ಲೂ ಸತತವಾಗಿ ಮೂರನೇ ಅವಧಿಗೆ ನಾವೇ ಗೆಲ್ಲುತ್ತೇವೆ ಎಂದು ಎಲ್ಲ ಸಮೀಕ್ಷೆಗಳು ಹೇಳುತ್ತಿವೆ. ಇಂತಹ ಸಂದರ್ಭದಲ್ಲಿ ಹಲವಾರು ಆಕಾಂಕ್ಷಿಗಳಿರುವುದು ಅತ್ಯಂತ ಸಹಜ. ಅಂತಿಮವಾಗಿ ಟಿಕೆಟ್ ಸಿಗದಿದ್ದಾಗ ಅವರ ಬೆಂಬಲಿಗರಿಗೆ ಕಾರ್ಯಕರ್ತರಿಗೆ ಬೇಸರ ಆಗುವುದೂ ಅಷ್ಟೇ ಸಹಜ. ಈಗ ಅವಕಾಶ ಸಿಗದವರಿಗೆ ಮುಂದೆ ಸಿಗುತ್ತೆ. ಪ್ರತಿಭೆ ಸಾಮರ್ಥ್ಯಕ್ಕೆ ಬೆಲೆ ಕೊಡುವ ಪಕ್ಷ ನಮ್ಮದು. ಪಕ್ಷ ಯಾರನ್ನೂ ಕೈಬಿಡುವುದಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.