ADVERTISEMENT

‘ಮುಖ್ಯಮಂತ್ರಿ ವಿರುದ್ಧ ಆರೋಪಪಟ್ಟಿ ಬಿಡುಗಡೆ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:47 IST
Last Updated 23 ಜನವರಿ 2018, 19:47 IST
‘ಮುಖ್ಯಮಂತ್ರಿ ವಿರುದ್ಧ ಆರೋಪಪಟ್ಟಿ ಬಿಡುಗಡೆ’
‘ಮುಖ್ಯಮಂತ್ರಿ ವಿರುದ್ಧ ಆರೋಪಪಟ್ಟಿ ಬಿಡುಗಡೆ’   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಸಚಿವರ ವಿರುದ್ಧ ಸದ್ಯದಲ್ಲೇ ಆರೋಪಪಟ್ಟಿ ಬಿಡುಗಡೆ ಮಾಡಲಾಗುವುದು. ಅದರ ಪ್ರತಿಗಳನ್ನು ಮನೆಮನೆಗೂ ಹಂಚಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಲ್ಲಿ ಮಂಗಳವಾರ ತಿಳಿಸಿದರು.

ಪ್ರತಿ ಆರೋಪಗಳಿಗೂ ಪುರಾವೆಗಳು ಸಿಕ್ಕಿವೆ. ವಿವಿಧ ತನಿಖಾ ಸಂಸ್ಥೆಗಳಿಂದ ಮುಖ್ಯಮಂತ್ರಿ ಸೇರಿದಂತೆ ಕೆಲವು ಸಚಿವರು ‘ಕ್ಲೀನ್ ಚಿಟ್’ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಿದ್ದರಾಮಯ್ಯ, ಸಚಿವ ಎಚ್.ಸಿ.ಮಹದೇವಪ್ಪ ತಮ್ಮ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಗೊತ್ತಾದ ನಂತರ, ಕ್ಷೇತ್ರ ಬದಲಿಸುತ್ತಿದ್ದಾರೆ. ಅವರ ಆಡಳಿತ ವೈಖರಿಗೆ ಇದೊಂದು ನಿದರ್ಶನ ಎಂದರು.

ADVERTISEMENT

ಜೈಲಿನಿಂದ ಬಂದವರು ಆರೋಪ ಮಾಡುತ್ತಾರೆ ಎಂಬ ಟೀಕೆಗೆ ಪ್ರತಿಕ್ರಿಯಿಸಿ, ‘ಸೋನಿಯಾ, ರಾಹುಲ್ ಗಾಂಧಿ ಜಾಮೀನು ಪಡೆದು ಹೊರಗಿದ್ದಾರೆ. ನನ್ನನ್ನು ವ್ಯವಸ್ಥಿತ ಪಿತೂರಿ ನಡೆಸಿ ಜಾಮೀನು ಸಿಗದಂತೆ ಮಾಡಲಾಯಿತು. ಕೊನೆಗೆ, ಹೈಕೋರ್ಟ್‌ ಸರ್ಕಾರಕ್ಕೆ ಛೀಮಾರಿ ಹಾಕಿ ಜಾಮೀನು ನೀಡಿತು. ಈ ಸತ್ಯ ಸಿದ್ದರಾಮಯ್ಯ ಅವರಿಗೆ ಮರೆತು ಹೋಗಿದೆ’ ಎಂದರು.

‘ಕಳಸಾ ಬಂಡೂರಿ ಸಮಸ್ಯೆ ಕಾಂಗ್ರೆಸ್‌ನ ಪಾಪದ ಕೂಸು. ಪ್ರಕರಣ ನ್ಯಾಯಮಂಡಳಿ ತಲುಪಲು ಆ ಪಕ್ಷದ ನಾಯಕರೇ ಕಾರಣ. ಸಮಸ್ಯೆ ಪರಿಹಾರಕ್ಕೆ ನಾನು ಒಂದು ಹೆಜ್ಜೆ ಮುಂದೆ ಹೋದದ್ದೇ ತಪ‍್ಪಾಯಿತು. ಕಾಂಗ್ರೆಸ್ ಪ್ರೇರಿತ ರೈತರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿವಾರ ಹಾಗೂ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಬಜೆಟ್‌ನಲ್ಲಿ ಘೋಷ
ಣೆಯಾಗುವ ಸಾಧ್ಯತೆ ಇದೆ ಎಂದರು.

ಈ ಬಾರಿ ಸಿದ್ದರಾಮಯ್ಯ ಬಜೆಟ್ ಮಂಡಿಸುವಾಗ ಅದರ ಅವಧಿ ಕೇವಲ 3 ತಿಂಗಳು ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಹೊಂದಾಣಿಕೆ ಅನಿವಾರ್ಯವಲ್ಲ

ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯ ಬಿಜೆಪಿಗೆ ಇಲ್ಲ. ಯಾರಿಗೆ ಗೆಲ್ಲುವ ವಿಶ್ವಾಸ ಇಲ್ಲವೋ ಅವರು ಪದೇ ಪದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡುತ್ತಾರೆ ಎಂದು ಜೆಡಿಎಸ್‌ ವಿರುದ್ಧ ಯಡಿಯೂರಪ್ಪ ‍ಪರೋಕ್ಷ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.