ADVERTISEMENT

ನೀರು ಸ್ಥಗಿತ: ಗ್ರಾಮಸ್ಥರಿಗೆ 'ಮಹಾ' ಉಪಮುಖ್ಯಮಂತ್ರಿ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 10:38 IST
Last Updated 18 ಏಪ್ರಿಲ್ 2014, 10:38 IST

ಪುಣೆ (ಪಿಟಿಐ): ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಹಾಗೂ ಎನ್ ಸಿಪಿ ಅಭ್ಯರ್ಥಿ ಸುಪ್ರಿಯಾ ಸುಲೆ ಅವರಿಗೆ ಮತ ನೀಡದೇ ಇದ್ದಲ್ಲಿ ನೀರು ಸರಬರಾಜು ಸ್ಥಗಿತಗೊಳಿಸುವುದಾಗಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬೆದರಿಸುವುದಾಗಿ ಬಾರಾಮತಿ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಸುರೇಶ್ ಖೋರ್ಪಡೆ ಆಪಾದಿಸಿದ್ದಾರೆ.

ವಡಗಾಂವ್ ಪೊಲೀಸ್ ಠಾಣೆಗೆ ಗುರುವಾರ ನೀಡಿದ ದೂರಿನಲ್ಲಿ ಈ ಆರೋಪ ಮಾಡಿರುವ ಖೋರ್ಪಡೆ, ಪುಣೆ ಜಿಲ್ಲೆಯಲ್ಲಿ ಬಾರಾಮತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಸಲ್ವಾಡಿ ಗ್ರಾಮದಲ್ಲಿ ಏಪ್ರಿಲ್ 16ರಂದು ಚುನಾವಣಾ ಪ್ರಚಾರಸಭೆಯಲ್ಲಿ ನೀಡಿದ ಭಾಷಣದಲ್ಲಿ ಪವಾರ್ ಅವರು ನೀರು ಸ್ಥಗಿತಗೊಳಿಸುವ ಬೆದರಿಕೆ ಹಾಕಿದರು ಎಂದು ದೂರಿದ್ದಾರೆ.

ಈ ಭಾಷಣವು ಟೆಲಿವಿಷನ್ ನಲ್ಲಿ ಪ್ರಸಾರಗೊಂಡಿತ್ತು.

ಮಸಲ್ವಾಡಿ ಗ್ರಾಮದಲ್ಲಿ ಸುಲೆ ಬೆಂಬಲಾರ್ಥ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪವಾರ್ ಅವರು 'ಈ ಗ್ರಾಮದ ಯಾರಾದರೂ ಏನಾದರೂ ತೊಂದರೆ ಮಾಡಿದಲ್ಲಿ (ಸುಲೆ ಅವರಿಗೆ ಮತ ನೀಡಲು ವಿಫಲರಾದಲ್ಲಿ) ನಾನು ನೀರು ಸರಬರಾಜನ್ನು ಸ್ಥಗಿತಗೊಳಿಸುತ್ತೇನೆ' ಎಂಬುದಾಗಿ ಹೇಳಿದ್ದನ್ನು ತೋರಿಸುವ ವಿಡಿಯೋವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಸಮರ್ಪಕ ನೀರು ಸರಬರಾಜು ಕುರಿತು ಗ್ರಾಮಸ್ಥರು ದೂರಿನ ಸುರಿಮಳೆಗರೆದದ್ದಕ್ಕೆ ಪ್ರತಿಯಾಗಿ ಪವಾರ್ ಈ ಹೇಳಿಕೆ ನೀಡಿದರು ಎನ್ನಲಾಗಿದೆ.

ಖೋರ್ಪಡೆ ಅವರು ನೀಡಿದ ದೂರು ಲಭಿಸಿದೆ ಎಂಬುದಾಗಿ ಅಸಿಸ್ಟೆಂಟ್ ಪೊಲೀಸ್ ಇನ್ ಸ್ಪೆಕ್ಟರ್ ವಿಲಾಸ್ ಭೋಸಲೆ ಪಿಟಿಐಗೆ ದೃಢ ಪಡಿಸಿದರು. ಆದರೆ ಉಪಮುಖ್ಯಮಂತ್ರಿ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ.

ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳು ವಿಡಿಯೋ ನೈಜವೇ ಅಥವಾ ಅಲ್ಲವೇ ಎಂದು ಪರಿಶೀಲಿಸಿದ ಬಳಿಕವಷ್ಟೇ ದೂರು ದಾಖಲಿಸಬಹುದು. ವಿಡಿಯೋ ಸ್ಪಷ್ಟವಾಗಿಯೂ ಇಲ್ಲ' ಎಂದು ಹೇಳಿದರು.

ಪ್ರಕರಣವನ್ನು ದಾಖಲಿಸುವ ಮುನ್ನ ಪ್ರಾಥಮಿಕ ತನಿಖೆಗಳನ್ನು ನಡೆಸುವ ಪ್ರಕ್ರಿಯೆ ಜರುಗಿಸಲಾಗುವುದು ಎಂದು ಅವರು ನುಡಿದರು.

ವಾಸ್ತವವಾಗಿ ಇದು ಚುನಾವಣಾ ನೀತಿ ಸಂಹಿತೆ ಮತ್ತು ಚುನಾವಣಾ ಪ್ರಚಾರಕ್ಕೆ ಸಂಬಂಧ ಪಟ್ಟ ವಿಚಾರವಾದ್ದರಿಂದ ಖೋರ್ಪಡೆ ಅವರು ಚುನಾವಣಾ ಅಧಿಕಾರಿಗಳಿಗೆ ತಮ್ಮ ದೂರು ಸಲ್ಲಿಸಿದ್ದಾರೆ. ಸಂಬಂಧಪಟ್ಟ ವಿಡಿಯೋವನ್ನು ಕೂಡಾ ಪೊಲೀಸರಿಗೆ ಹಸ್ತಾಂತರಿಸಿಲ್ಲ' ಎಂದು ಭೋಸಲೆ ಹೇಳಿದರು.

ದೂರಿಗೆ ಸಂಬಂಧಪಟ್ಟ ಭಾಷಣವನ್ನು ಏಪ್ರಿಲ್ 16ರಂದು ಮಾಡಲಾಗಿದ್ದರೂ ಖೋರ್ಪಡೆ ನೀಡಿದ ದೂರನ್ನು ತಡವಾಗಿ ಏಪ್ರಿಲ್ 17ರಂದು ಪೊಲೀಸರಿಗೆ ನೀಡಲಾಗಿದೆ ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.