ADVERTISEMENT

ರಜೆ ಖಾತರಿ: ಕಾಂಗ್ರೆಸ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:58 IST
Last Updated 16 ಏಪ್ರಿಲ್ 2014, 19:58 IST

ಬೆಂಗಳೂರು: ಮತದಾನದ ದಿನವಾದ ಗುರುವಾರ ರಜೆ ಘೋಷಿಸುವ ಆದೇಶವನ್ನು ಕಡ್ಡಾಯವಾಗಿ ಅನು­ಷ್ಠಾ­ನಕ್ಕೆ ತರುವಂತೆ ರಾಜ್ಯದ ಎಲ್ಲ ಖಾಸಗಿ ಕೈಗಾರಿಕೆ­ಗಳು ಮತ್ತು ಉದ್ಯಮ ಸಂಸ್ಥೆಗಳಿಗೆ ನಿರ್ದೇಶನ ನೀಡಲು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಸಹ ಅಧ್ಯ­ಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ.ಶಿವಕು­ಮಾರ್‌ ನೇತೃತ್ವದ ನಿಯೋಗ ರಾಜ್ಯದ ಮುಖ್ಯ ಚುನಾ­ವಣಾ­ಧಿಕಾರಿ ಅನಿಲ್‌ಕುಮಾರ್‌ ಝಾ ಅವರನ್ನು ಬುಧ­ವಾರ ಭೇಟಿಮಾಡಿ ಈ ಸಂಬಂಧ ಮನವಿ ಸಲ್ಲಿ­ಸಿದೆ. ಮತದಾನಕ್ಕೆ ರಜೆ ನೀಡದ ಉದ್ಯಮ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸು­ವಂತೆಯೂ ಒತ್ತಾಯಿ­ಸಿದೆ.

‘ಕಾರ್ಮಿಕರಿಗೆ ಮತ ಚಲಾವಣೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಗುರುವಾರ ವೇತನಸಹಿತ ರಜೆ ನೀಡುವಂತೆ ಚುನಾವಣಾ ಆಯೋಗ ಈಗಾಗಲೇ ಆದೇಶ ಹೊರಡಿಸಿದೆ. ಆದರೆ ಬೆಂಗಳೂರು ಮತ್ತು ಇತರೆ ನಗರ, ಪಟ್ಟಣಗಳಲ್ಲಿರುವ ಹಲವು ಖಾಸಗಿ ಉದ್ದಿಮೆಗಳು ಇನ್ನೂ ರಜೆ ಘೋಷಿಸಿಲ್ಲ. ಗುರುವಾರ ಕೆಲಸಕ್ಕೆ ಹಾಜರಾಗುವಂತೆ ನೌಕರರಿಗೆ ಒತ್ತಡ ಹೇರುತ್ತಿರುವುದು ಗಮನಕ್ಕೆ ಬಂದಿದೆ.

ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಇದೇ ರೀತಿ ಆಗಿತ್ತು. ಇದರಿಂದಾಗಿ ಹಲವು ಮತದಾರರಿಗೆ ತಮ್ಮ ಹಕ್ಕು ಚಲಾವಣೆ ಮಾಡಲು ಸಾಧ್ಯವಾಗಿರಲಿಲ್ಲ. ಇಂತಹ ಬೆಳವಣಿಗೆಗಳಿಂದ ಚುನಾವಣೆಯ ಮೂಲ ಉದ್ದೇಶಕ್ಕೆ  ಹಿನ್ನಡೆ ಆಗುತ್ತದೆ’ ಎಂದು ಶಿವಕುಮಾರ್‌ ಅವರು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ಮತದಾನಕ್ಕೆ ಅನುಕೂಲ ಆಗುವಂತೆ ಎಲ್ಲ ನೌಕರರಿಗೂ ಕಡ್ಡಾಯವಾಗಿ ವೇತನಸಹಿತ ರಜೆ ನೀಡುವಂತೆ ರಾಜ್ಯದ ಎಲ್ಲ ಖಾಸಗಿ ಉದ್ದಿಮೆಗಳು, ಕೈಗಾರಿಕೆಗಳು, ಸಿದ್ಧ ಉಡುಪು ಕಾರ್ಖಾನೆಗಳು ಮತ್ತು ಸಣ್ಣಪುಟ್ಟ ವಾಣಿಜ್ಯ ಸಂಸ್ಥೆಗಳಿಗೆ ಮತ್ತೊಮ್ಮೆ ಸೂಚನೆ ನೀಡಬೇಕು.

ಈ ಬಗ್ಗೆ ನಿಗಾ ಇರಿಸುವಂತೆ ಪೊಲೀಸ್‌ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡ­ಬೇಕು ಎಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್‌ ಮುಖಂಡರಾದ ಎಚ್‌.ಎಂ.ರೇವಣ್ಣ, ಪಿ.ಆರ್.­ರಮೇಶ್, ಜೆ.ಹುಚ್ಚಪ್ಪ, ಜಿ.ಸಿ.ಚಂದ್ರ­ಶೇಖರ್, ನಾರಾ­ಯ­ಣಪ್ಪ, ಶಫಿ ಉಲ್ಲಾ ಮತ್ತಿತರರು ನಿಯೋಗದ­ಲ್ಲಿದ್ದರು.

ರಜೆ ನೀಡುವುದು ಕಡ್ಡಾಯ
ಮತದಾನದ ದಿನವಾದ ಗುರುವಾರ ಸರ್ಕಾರಿ ರಜೆ ಘೋಷಿಸಲಾಗಿದೆ. ಅಲ್ಲದೆ ಎಲ್ಲ ತರಹದ ಖಾಸಗಿ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ವೇತನಸಹಿತ ರಜೆ ನೀಡುವುದು ಕಡ್ಡಾಯವಾಗಿದೆ.

1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್‌ 135ಬಿ ಪ್ರಕಾರ ಯಾವುದೇ ವ್ಯಾಪಾರ, ವಹಿವಾಟು ನಡೆಸುವ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಉದ್ದಿಮೆಗಳು ಕಡ್ಡಾಯವಾಗಿ ನೌಕರರಿಗೆ ರಜೆ ನೀಡಬೇಕು ಎಂದರು. ಚುನಾವಣೆ ದಿನ ರಜೆ ನೀಡಲಾಗಿದೆ ಎಂದು ಭಾನುವಾರ ಸಿಬ್ಬಂದಿಯಿಂದ ಕೆಲಸ ಮಾಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ರಜೆ ನೀಡದೆ ಇರುವ ಬಗ್ಗೆ ದೂರುಗಳು ಬಂದರೆ ಸಂಬಂಧಪಟ್ಟ ಸಂಸ್ಥೆಯ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.