ADVERTISEMENT

ರಾಜ್ಯದಲ್ಲಿ ನೀತಿ ಸಂಹಿತೆ ಪೂರ್ಣ ಸಡಿಲ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 20:32 IST
Last Updated 24 ಏಪ್ರಿಲ್ 2014, 20:32 IST

ಬೆಂಗಳೂರು: ರಾಜ್ಯದಲ್ಲಿ ಲೋಕ­ಸಭಾ ಚುನಾವಣೆಯ ಮತದಾನ ಮುಗಿ­ದಿ­ರುವುದರಿಂದ ನೀತಿ ಸಂಹಿತೆ­ಯನ್ನು  ಪೂರ್ಣ ಪ್ರಮಾಣ­ದಲ್ಲಿ ಸಡಿಲಿಸ­ಲಾಗಿದೆ. ಚುನಾವಣಾ ಕಾರ್ಯಕ್ಕೆ ನಿಯೋಜನೆ­ಗೊಂಡಿರುವ ಜಿಲ್ಲಾ ಚುನಾವಣಾ­ಧಿಕಾರಿಗಳು, ಸಹಾಯಕ ಚುನಾವಣಾಧಿ ಕಾರಿಗಳನ್ನು ಹೊರತು­ಪಡಿಸಿ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಗೆ ಯಾವುದೇ ಅಡ್ಡಿ ಇಲ್ಲ ಎಂದು ಆಯೋಗ ಹೇಳಿದೆ.

ರಾಜ್ಯ ಮುಖ್ಯ ಚುನಾ­ವಣಾಧಿ­ಕಾರಿ ಅನಿಲ್‌ಕುಮಾರ್‌ ಝಾ ಅವರು ಕೋರಿದ್ದ ಸ್ಪಷ್ಟನೆಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ ಉತ್ತರ ನೀಡಿದ್ದು, ಸಹಜ ರೀತಿಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸಬಹುದು ಎಂದು ತಿಳಿಸಿದೆ.

ಹೊಸ ಯೋಜನೆ  ಪ್ರಕಟಿಸ­ಬಹುದು, ಟೆಂಡರ್‌ಗಳನ್ನು ಕರೆಯ­ಬಹುದು, ಹೊಸ ನೇಮಕಾತಿ, ಸಂದ­ರ್ಶನ ನಡೆಸಬಹುದು ಎಂದು ಸ್ಪಷ್ಟನೆ ನೀಡಿದೆ.
ಚುನಾವಣಾ ನೀತಿ ಸಂಹಿತೆ ರದ್ದಾಗಿ­ರುವುದರಿಂದ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗುವ ಸೂಚನೆ ಇದೆ.

ಮೇ ತಿಂಗಳ ಮೊದಲ ವಾರದಲ್ಲಿ ವಿಧಾನ ಪರಿಷತ್‌ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದೆ.

ಹೀಗಾಗಿ ಪರಿಷತ್‌ ಚುನಾವಣೆಗೂ ಮೊದಲೇ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕೇ ಅಥವಾ ಚುನಾವಣೆ ನಂತರ ನಡೆಸಬೇಕೇ ಎಂಬ ಬಗ್ಗೆ ಏ. 28ರ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT