ADVERTISEMENT

ಸಮೀಕ್ಷಾ ವಿಧಾನ

​ಪ್ರಜಾವಾಣಿ ವಾರ್ತೆ
Published 12 ಮೇ 2014, 19:30 IST
Last Updated 12 ಮೇ 2014, 19:30 IST

ಮತಗಟ್ಟೆ ಸಮೀಕ್ಷೆ ಎಂಬುದು ‘ಪ್ರಜಾವಾಣಿ’ಯ ಮಟ್ಟಿಗೆ ಮೊದಲ ಪ್ರಯತ್ನ. ಇದರ ವೈಶಿಷ್ಟ್ಯವಿರುವುದು ನಾವು ನಮ್ಮದೇ ವರದಿಗಾರರ ಜಾಲವನ್ನು ಈ ಸಮೀಕ್ಷೆಗಾಗಿ ಬಳಸಿಕೊಂಡದ್ದು. ರಾಜ್ಯದಾದ್ಯಂತ ಇರುವ ಪ್ರಜಾವಾಣಿಯ ಪೂರ್ಣಕಾಲಿಕ ಮತ್ತು ಅರೆಕಾಲಿಕ ವರದಿಗಾರರಲ್ಲಿ 336 ಮಂದಿ ಈ ಸಮೀಕ್ಷೆ ನಡೆಸುವ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನೂ ಒಳಗೊಂಡಿರುವ ಈ ಸಮೀಕ್ಷಾ ಪ್ರಕ್ರಿಯೆಯಲ್ಲಿ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಮತಗಟ್ಟೆಗಳಿ­ರುವಂತೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಬ್ಬ ವರದಿಗಾರರೂ ಕನಿಷ್ಠ ಮೂರು ಮತಗಟ್ಟೆಗಳನ್ನು ಸಂದರ್ಶಿ­ಸಿದ್ದರು. ಈ ಮತಗಟ್ಟೆಗಳ ನಡುವಣ ಅಂತರ ಕನಿಷ್ಠ 10 ಕಿಲೋಮೀಟರ್ ಇರುವಂತೆ ನೋಡಿಕೊಳ್ಳಲಾಗಿತ್ತು. ಸಮೀಕ್ಷೆಗಾಗಿ ಬಳಸಿದ ಪ್ರಶ್ನೆಗಳು ಬಹಳ ಸರಳವಾಗಿದ್ದವು. ಮತದಾರರು ಯಾವ ಪಕ್ಷಕ್ಕೆ ಮತ ಹಾಕಿದರು ಎಂಬುದನ್ನು ತಿಳಿದುಕೊಳ್ಳುವುದರ ಜೊತೆಗೆ ಅವರ ವಯೋಮಾನ ಮತ್ತು ಲಿಂಗವನ್ನು ಗುರುತಿ­ಸುವ ಕೆಲಸವಷ್ಟೇ ವರದಿಗಾರ­ರಿಗಿತ್ತು.

ಶಾಸ್ತ್ರೀಯವಾಗಿ ನಡೆಸುವ ಸಮೀಕ್ಷೆಗಳಲ್ಲಿ ಮತಗಟ್ಟೆಗಳನ್ನು ಮತ್ತು ಮತದಾರರನ್ನು ಯಾವ ಆವರ್ತನದಲ್ಲಿ ಪ್ರಶ್ನಿಸಬೇಕು  ಎಂಬುದನ್ನು ಮೊದಲೇ ನಿಗದಿ ಪಡಿಸಲಾಗಿರುತ್ತದೆ. ಉದಾ­ಹರಣೆಗೆ ಮತಗಟ್ಟೆಯಿಂದ ಹೊರ­ಬರುವ ಪ್ರತೀ ನಾಲ್ಕನೇ ಮತದಾರ ಇತ್ಯಾದಿಯಾಗಿ ಈ ಆವರ್ತನವನ್ನು ನಿಗದಿ ಪಡಿಸಲಾಗಿರುತ್ತದೆ. ‘ಪ್ರಜಾ­ವಾಣಿ’ ನಡೆಸಿದ ಸಮೀಕ್ಷೆಯಲ್ಲಿ ಈ ತತ್ವವನ್ನು ಅಳವಡಿಸಿಕೊಂಡಿರಲಿಲ್ಲ. ಮತಗಟ್ಟೆಗಳನ್ನು ಆರಿಸಿಕೊಳ್ಳುವ ಮತ್ತು ಯಾವ ನಿರ್ದಿಷ್ಟ ಮತದಾರರಲ್ಲಿ ಈ ಪ್ರಶ್ನೆಗಳನ್ನು ಕೇಳಬೇಕೆಂಬುದನ್ನು ಕ್ಷೇತ್ರ ಕಾರ್ಯದಲ್ಲಿ ನಿರತರಾಗಿದ್ದ ವರದಿ­ಗಾರರೇ ನಿರ್ಧರಿಸುತ್ತಿದ್ದರು. ಈ ದೃಷ್ಟಿಯಲ್ಲಿ ಸಮೀಕ್ಷೆ ಅಷ್ಟೊಂದು ವೈಜ್ಞಾನಿಕವಲ್ಲ.

ಸಮೀಕ್ಷೆಯನ್ನು ಸಂಖ್ಯಾಶಾಸ್ತ್ರೀಯ­ವಾಗಿ ವಿಶ್ಲೇಷಿಸುವುದಕ್ಕೆ ಕೆಲಮಟ್ಟಿಗಿನ ತಜ್ಞರ ನೆರವನ್ನು ಪಡೆಯಲಾಯಿತು. ಆದರೆ, ಮತದಾರರ ಒಲವನ್ನು ಸ್ಥಾನಗಳ ಸಂಖ್ಯೆಯನ್ನಾಗಿ ಪರಿವರ್ತಿ­ಸುವ ಕ್ರಿಯೆ ಹೆಚ್ಚು ಸಂಕೀರ್ಣವಾದುದು. ಇದಕ್ಕಾಗಿ ಚಾರಿತ್ರಿಕ ಅಂಕಿ–ಅಂಶಗಳನ್ನು ಪರಿಗಣಿಸುವ ನಿರ್ಧಾರಕ್ಕೆ ಬಂದೆವು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳ ಸರಾಸರಿ ಗೆಲುವಿನ ಅಂತರ ಶೇಕಡಾ 13.9. ಇದನ್ನು ಆಧಾರವಾಗಿಟ್ಟು ಸಮೀಪದ ಪ್ರತಿಸ್ಪರ್ಧಿಗಿಂತ ಶೇಕಡಾ 10ರಷ್ಟು ಹೆಚ್ಚು ಮತಗಳಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿದೆವು. ಇದು 15 ಕ್ಷೇತ್ರಗಳ ಫಲಿತಾಂಶದ ದಿಕ್ಕಿನ ಕುರಿತಂತೆ ಒಂದು ಸ್ಪಷ್ಟ ಸೂಚನೆಯನ್ನು ನೀಡಿತು. ಏಳು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಶೇಕಡಾ 7ರಿಂದ 9ರ ಮಧ್ಯೆ ಇತ್ತು. ಆರು ಕ್ಷೇತ್ರಗಳಲ್ಲಿ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲದಂತೆ ಗೆಲುವಿನ ಅಂತರ ಶೇಕಡಾ 0.24ರಿಂದ 3.6ರಷ್ಟಿತ್ತು. ಈ ಅಂಕಿ–ಅಂಶಗಳ ಜೊತೆಗೆ ಗೆಲುವನ್ನು ನಿರ್ಧರಿಸಬಹುದಾದ ಸ್ಥಳೀಯವಾ­ಗಿರುವ ಅಂಶಗಳನ್ನೂ ಸೇರಿಸಿಕೊಂಡು ಸ್ಥಾನಗಳ ಸಂಖ್ಯೆಯನ್ನು ನಿಖರವಾಗಿ ಊಹಿಸಲು ಪ್ರಯತ್ನ ನಡೆಸಿದೆವು.

ಈ ಸಂಖ್ಯೆಗಳು ವೈಜ್ಞಾನಿಕ ಸಮೀಕ್ಷೆ ಮತ್ತು ಲೆಕ್ಕಾಚಾರಗಳಿಂದ ಬಂದದ್ದು ಎನ್ನುವುದಕ್ಕಿಂತ ಹೆಚ್ಚಾಗಿ ಸಮೀಕ್ಷೆಯ ಫಲಿತಾಂಶ ಮತ್ತು ಪ್ರಜಾವಾಣಿಯ ಪತ್ರಕರ್ತರ ಕ್ಷೇತ್ರಾನುಭವದ ಹಿನ್ನೆಲೆ­ಯಲ್ಲಿ ರೂಪುಗೊಂಡವು ಎಂಬುದು ಹೆಚ್ಚು ಸರಿ. ಈ ಮಿತಿಯೊಂದಿಗೇ ಅಂತಿಮ ಫಲಿತಾಂಶವನ್ನು ಅರ್ಥ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇವೆ. ಹಾಗೆ ನೋಡಿದರೆ ವೈಜ್ಞಾನಿಕ ಸಮೀಕ್ಷೆಗಳ ಫಲಿತಾಂಶಗಳೂ ಒಂದಲ್ಲ ಒಂದು ರೀತಿಯಲ್ಲಿ ಈ ಬಗೆಯ ಊಹೆಗಳ ಮೂಲಕವೇ ಹುಟ್ಟಿಕೊಳ್ಳು­ತ್ತವೆ­ಯಲ್ಲವೇ?
–ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.