ADVERTISEMENT

‘ಫಲಿತಾಂಶಕ್ಕೆ ಜಂಟಿ ಹೊಣೆ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:57 IST
Last Updated 18 ಏಪ್ರಿಲ್ 2014, 19:57 IST
- ಸಾಂದರ್ಭಿಕ ಚಿತ್ರ.
- ಸಾಂದರ್ಭಿಕ ಚಿತ್ರ.   

ಬೆಂಗಳೂರು: ಲೋಕಸಭಾ ಚುನಾ­ವಣೆ ಫಲಿತಾಂಶದ ನಂತರವೂ ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿ­ಯಲ್ಲಿ ಮಾತ­ನಾಡಿದ ಅವರು, ರಾಜ್ಯ­ದಲ್ಲಿ  ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಎಐಸಿಸಿ ಗುರಿ ನಿಗದಿ ಮಾಡಿದೆ ಎಂಬುದು ಸತ್ಯಕ್ಕೆ ದೂರ ಎಂದರು.

ರಾಜ್ಯದಲ್ಲಿ ಗೆಲ್ಲಬೇಕಾದ ಸ್ಥಾನಗಳ ಬಗ್ಗೆ ಸಿ.ಎಂ ಸಿದ್ದರಾಮಯ್ಯ ಅವರಿಗೆ ಪಕ್ಷದ ಹೈಕಮಾಂಡ್‌ ಗುರಿ ನಿಗದಿ ಮಾಡಿದೆ ಎಂಬ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ‘ಇಲ್ಲಿ ಇಡೀ ಪಕ್ಷ ಚುನಾವಣೆ ಎದುರಿಸುತ್ತಿದೆ. ಸರ್ಕಾರ ಅಲ್ಲ. ಹೀಗಿರುವಾಗ ಸಿ.ಎಂಗೆ ಗುರಿ ನಿಗದಿ ಮಾಡುವುದು ಹೇಗೆ? ಆ ರೀತಿ ಏನೂ ನಡೆದಿಲ್ಲ. ಮತ್ತಿಕಟ್ಟಿ ಅವರ ಹೇಳಿಕೆಯನ್ನು ಅಧಿಕೃತವಾಗಿ ನಾನು ಅಲ್ಲಗಳೆಯುತ್ತಿದ್ದೇನೆ’ ಎಂದು ಉತ್ತರಿಸಿದರು.

ಇಬ್ಬರೂ ಹೊಣೆ:  ಫಲಿತಾಂಶಕ್ಕೆ ಏನೇ ಆದರೂ ತಾವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಹೊಣೆಗಾರರು. ಪಕ್ಷದ ಅಧ್ಯಕ್ಷರಾಗಿ ತಾವು ಈ ಹೊಣೆ ಹೊತ್ತರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹೊಣೆ ಹೊರುತ್ತಾರೆ. ಕಾಂಗ್ರೆಸ್‌ ಪಕ್ಷದ ಮುಂಚೂಣಿಯಲ್ಲಿ ಇರುವುದರಿಂದ ತಾವಿಬ್ಬರೇ ಹೊಣೆ ಹೊರಬೇಕಾಗುತ್ತದೆ ಎಂದರು.

ಬಿಜೆಪಿ–ಜೆಡಿಎಸ್‌ ಒಳ ಒಪ್ಪಂದ: ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿದ್ದವು ಎಂದು  ಪರಮೇಶ್ವರ್ ಆರೋಪಿಸಿದರು.

ಚಾಮರಾಜನಗರ, ಉತ್ತರ ಕನ್ನಡ, ಬೀದರ್, ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಗೌಪ್ಯ ಹೊಂದಾಣಿಕೆ ಇತ್ತು. ಆಯಾ ಕ್ಷೇತ್ರಗಳಿಂದಲೇ ಬಂದ ಮಾಹಿತಿ ಇದನ್ನು ಖಚಿತಪಡಿಸಿದೆ. ಕಾಂಗ್ರೆಸ್‌ ಪಕ್ಷದ ವಿರುದ್ಧವಾಗಿ ಎರಡೂ ಪಕ್ಷಗಳೂ ಜೊತೆಗೂಡಿವೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT