ADVERTISEMENT

ಊರೊಳಗಿದ್ದೂ ಊರವರಾಗದೆ...

ವೆಂಕಟೇಶ ಪ್ರಸಾದ್‌ ಬಿ.ಎಸ್‌.
Published 29 ಏಪ್ರಿಲ್ 2013, 19:59 IST
Last Updated 29 ಏಪ್ರಿಲ್ 2013, 19:59 IST

ಬೆಂಗಳೂರು: ನಮ್ಮ ಈ ರಾಜಧಾನಿ ರಾಜ್ಯದ, ರಾಷ್ಟ್ರದ ಎಲ್ಲಾ ಭಾಗದ ಜನರಿಗೂ ನೆಲೆ ನೀಡಿದೆ. ಆಡಳಿತ ಶಕ್ತಿ ಕೇಂದ್ರವಾದ ಈ ನಗರದಲ್ಲಿ ರಾಜ್ಯದ ಬೇರೆಡೆಗೆ ಹೋಲಿಸಿದರೆ ಹೆಚ್ಚಿನ ಅನುಕೂಲಗಳಿವೆ. ಆದರೆ ಇದೇ ವೇಳೆ ಎಷ್ಟು ದುಡಿದರೂ ಸಾಕಾಗದಷ್ಟು ಆರ್ಥಿಕ ಒತ್ತಡ, ವ್ಯವಸ್ಥೆಯಲ್ಲಿನ ಲೋಪ, ಊರೊಂದಿಗಿನ ಭಾವನಾತ್ಮಕ ಸಂಬಂಧದ ಕೊರತೆ, ರಾಜಕೀಯದ ಬಗ್ಗೆ ನಿಸಕ್ತಿ ಇವೆಲ್ಲವೂ ಸೇರಿಕೊಂಡು ಮತಪಟ್ಟಿಗೆ ಹೆಸರು ನೋಂದಣಿ ಮಾಡಿಸದ, ಇಲ್ಲಿನ ರಾಜಕೀಯದ ಬಗ್ಗೆ ಒಂದಿಷ್ಟೂ ಮಾಹಿತಿ ಇಲ್ಲದವರ ಸಂಖ್ಯೆಯೂ ದೊಡ್ಡದೇ ಇದೆ.

ಮೈಸೂರು ಮೂಲದ ಗಿರೀಶ್ ರಾವ್ ಈಗ ತುಮಕೂರು ಹೆದ್ದಾರಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಸಹಾಯಕ ಪ್ರೊಫೆಸರ್. ಆರೇಳು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಆದರೆ, ಇಬ್ಬರು ಮಕ್ಕಳ ಪೋಷಕರಾಗಿರುವ ಗಿರೀಶ್ ರಾವ್ ದಂಪತಿ ತಮ್ಮ ಹೆಸರನ್ನು ಈವರೆಗೆ ಮತಪಟ್ಟಿಗೆ ನೋಂದಣಿ ಮಾಡಿಸಿಲ್ಲ. ಏಕೆ ಎಂದು ಕೇಳಿದರೆ, `ಮುಂಚೆ ಮೈಸೂರಿನಲ್ಲೇ ಕೆಲಸ ಮಾಡುತ್ತಿದ್ದೆ.

ಅಲ್ಲಿನ ವೋಟರ್ಸ್‌ ಲಿಸ್ಟ್‌ನಲ್ಲಿ ಹೆಸರು ಇದೆ. ಇಲ್ಲಿಗೆ ಸೇರಿಸಿಲ್ಲ' ಎನ್ನುತ್ತಾರೆ. ಹಾಗಾದರೆ, ವೋಟ್ ಮಾಡಲು ಮೈಸೂರಿಗೆ ಹೋಗುತ್ತೀರಾ ಎಂದು ಕೇಳಿದರೆ, `ಹೋಗಿಯೇ ಹೋಗುತ್ತೇವೆ ಅಂಥಾ ಹೇಳಕ್ಕಾಗಲ್ಲ. ಸಾಧ್ಯವಾದರೆ ಹೋಗುತ್ತೀವಿ' ಎನ್ನುತ್ತಾರೆ.

ಕುಂದಾಪುರ ಮೂಲದ ರತ್ನಾಕರ್ ಹಲವು ವರ್ಷಗಳಿಂದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದಾರೆ. ಆದರೆ ಅವರ ಕುಟುಂಬದವರ ಹೆಸರು ಇಲ್ಲಿನ ಮತಪಟ್ಟಿಯಲ್ಲಿ ಇಲ್ಲ. ಕಾರಣ ಕೇಳಿದರೆ, `ನೋಡಿ, ಇಲ್ಲಿ ಸರ್ಕಾರಿ ಶಾಲೆಗೆ ಹೋಗಿ ಎರಡು ಸಲ ಅರ್ಜಿ ಕೊಟ್ಟೆ. ಫೋಟೋವನ್ನೂ ತೆಗೆದುಕೊಂಡು ಹೋಗಿದ್ದೆ. ಗುರುತಿನ ಚೀಟಿ ಮಾಡಿಸಲು ಹೋದರೆ, ಊರಿನ ಹಳೆ ಲಿಸ್ಟ್‌ನಲ್ಲಿ ಹೆಸರು ತೆಗೆಸಿ ಅಂತಾರೆ. ಅವರೇನು ಹೇಳುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ನಾನಂತೂ ತಲೆ ಕೆಡಿಸಿಕೊಳ್ಳಲ್ಲ. ಹೆಸರು ಇದ್ದರೆ ವೋಟು ಹಾಕ್ತೀನಿ, ಇಲ್ಲದಿದ್ದರೆ ಇಲ್ಲ ಅಷ್ಟೆ' ಎನ್ನುತ್ತಾರೆ ಕಡ್ಡಿ ಮುರಿದಂತೆ.

ಬಸವನಗುಡಿ ಕ್ಷೇತ್ರ ವ್ಯಾಪ್ತಿಯ ಸುಪ್ರಭಾ ದೇವಿ ಅವರದ್ದೂ ಇದೇ ಕತೆ. `ಗುರುತಿನ ಚೀಟಿಗೆಂದು ಹೋದ ವರ್ಷದ ಏಪ್ರಿಲ್‌ನಲ್ಲೇ ಚೆನ್ನಮ್ಮನಕೆರೆ ಅಚ್ಚುಕಟ್ಟು ಕಚೇರಿಗೆ ಹೋಗಿ ಅರ್ಜಿ ಕೊಟ್ಟಿದ್ದೆ. ಆದರೆ ಇವತ್ತಿನ ತನಕ ಐ.ಡಿ ಕಾರ್ಡ್ ಬಂದಿಲ್ಲ. ಒಂದು ಕಡೆ ವಿದ್ಯಾವಂತರು ವೋಟ್ ಹಾಕಲ್ಲ ಅಂತಾರೆ, ಇನ್ನೊಂದು ಕಡೆ ನೋಡಿದ್ರೆ ಇಂತಾ ವ್ಯವಸ್ಥೆ' ಎಂದು ಬೇಸರ ವ್ಯಕ್ತಪಡಿಸುವ ಅವರು, `ಐ.ಡಿ. ಕಾರ್ಡ್‌ಗಾಗಿ ಎಷ್ಟು ರೋಸಿದ್ದೇನೆ ಎಂದರೆ, ಯಾವ ಪಕ್ಷ ಐ.ಡಿ ಕಾರ್ಡ್ ಮಾಡಿಸಿಕೊಡುತ್ತದೋ ಅವರಿಗೇ ವೋಟ್ ಹಾಕುತ್ತೀನಿ' ಎಂದು ಘೋಷಿಸುತ್ತಾರೆ.

ಕೆಲವು ವರ್ಷಗಳಿಂದ ಐಬಿಎಂ ಕಂಪೆನಿಯಲ್ಲಿ ಎಂಜಿನಿಯರ್ ಆಗಿರುವ ಮಂಗಳೂರು ಮೂಲದ ಅರವಿಂದ್‌ಗೆ ಕೂಡ ಮತ ಚಲಾವಣೆ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲ.

`ನನಗೂ ರಾಜಕೀಯಕ್ಕೂ ಬಲು ದೂರ. ಇಲ್ಲಿನ ಮತಪಟ್ಟಿಗೆ ಹೆಸರನ್ನೂ ಸೇರಿಸಿಲ್ಲ. ಮತ ಹಾಕುವುದಕ್ಕೆಂದೇ ಊರಿಗೆ ಹೋಗುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಅರವಿಂದ್ ದಿನಾ ಕಂಪ್ಯೂಟರ್ ಮುಂದೆಯೇ ಕೆಲಸ ಮಾಡುವವರು. ಮನೆಯಲ್ಲೂ ಲ್ಯಾಪ್‌ಟಾಪ್, ಇಂಟರ್‌ನೆಟ್ ಇದೆ. ಅವರು ಬೇಕೆಂದರೆ ಆನ್‌ಲೈನ್ ಮೂಲಕವೇ ಹೆಸರು ಸೇರಿಸಲು ಅರ್ಜಿ ಹಾಕಬಹುದಿತ್ತು. ಆದರೂ ಅವರಿಗೆ ಆ ಬಗ್ಗೆ ಆಸಕ್ತಿಯೇ ಇಲ್ಲ. ಅವರಿಗೆ ತಾವು ಹೊಸದಾಗಿ ಖರೀದಿಸಿರುವ  ಫ್ಲ್ಯಾಟ್ ಆದಷ್ಟು ಬೇಗ ವಾಸಕ್ಕೆ ಸಿದ್ಧವಾದರೆ ಸಾಕಾಗಿದೆ. `ನೋಡಿ, ಈಗಷ್ಟೇ ವಿದ್ಯಾರಣ್ಯಪುರದಲ್ಲಿ ಒಂದು ಫ್ಲ್ಯಾಟ್ ತಗೊಂಡಿದ್ದೀನಿ. ಕಾರ್ಪೆಂಟರ್ ಬೇಗ ಬಂದು ಕೆಲಸ ಮುಗಿಸಿದರೆ ಸಾಕಾಗಿದೆ. ಅವರು ತಡ ಮಾಡಿದರೆ, ಇಲ್ಲಿ ಮನೇಗೆ ಬಾಡಿಗೆ, ಅಲ್ಲಿ ಬ್ಯಾಂಕ್ ಸಾಲದ ಕಂತು ಎರಡನ್ನೂ ಕಟ್ಟುವುದು ಕಷ್ಟವಾಗುತ್ತದೆ' ಎಂದು ತಮ್ಮ ಫ್ಲ್ಯಾಟ್‌ನತ್ತ ಮುಖ ಮಾಡಿದರು.

ಮೂಲತಃ ಹಾಸನ ಜಿಲ್ಲೆಯ ಯುವತಿ ಶೋಭಾ ರಾಜಾಜಿನಗರದ ಷೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಇಲ್ಲಿನ ಮತಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ, ಇಲ್ಲವೋ ಗೊತ್ತಿಲ್ಲ. `ಇಲ್ಲಿ ಇದ್ದರೆ ವೋಟು ಹಾಕ್ತೀನಿ, ಇಲ್ಲದಿದ್ದರೆ ಇಲ್ಲ.  ಊರಿನ ವೋಟ್ ಲಿಸ್ಟ್‌ನಲ್ಲಿ ಇದ್ದರೆ ಯಾರಾದರೂ ಬಸ್ ಚಾರ್ಜ್ ಕೊಟ್ಟು ಕರೆಸಿಕೊಂಡರೆ ಹೋಗಿ ವೋಟು ಹಾಕುತ್ತೀನಿ' ಎನ್ನುತ್ತಾರೆ.

ಹೆಬ್ಬಾಳ ವ್ಯಾಪ್ತಿಯಲ್ಲಿ ಚಿಪ್ಸ್ ಅಂಗಡಿ ನಡೆಸುತ್ತಿರುವ ಯುವಕ ಚೇತನ್ ಕುಮಾರ್‌ಗೂ ಮತಪಟ್ಟಿಯಲ್ಲಿ ತನ್ನ ಹೆಸರು ಇರುವ ಖಾತ್ರಿ ಇಲ್ಲ. 23 ವರ್ಷದ ಆತ ಈವರೆಗೂ ಒಮ್ಮೆಯೂ ಮತ ಹಾಕಿಲ್ಲ. `ನಾನು ಮುಂಚೆ ಯಲಹಂಕ ಹತ್ತಿರ ಬೆಟ್ಟದ ಹಲಸೂರಿನಲ್ಲಿ ಅತ್ತೆ ಮನೆಯಲ್ಲಿ ಇದ್ದೆ. ನನ್ನ ಹೆಸರು ಅಲ್ಲಿದೆಯೋ, ಇಲ್ಲಿದೆಯೋ ಗೊತ್ತಿಲ್ಲ' ಎನ್ನುತ್ತಾನೆ. ಇಲ್ಲಿರುವ ಪಕ್ಷಗಳ ಬಗ್ಗೆಯೂ ಅವನಿಗೆ ಒಂದಿಷ್ಟೂ ಮಾಹಿತಿ ಇಲ್ಲ. `ನೋಡಬೇಕು. ಲಿಸ್ಟ್‌ನಲ್ಲಿ ಹೆಸರಿದ್ದರೆ ಅಪ್ಪ- ಅಮ್ಮ ಯಾವುದಕ್ಕೆ ಹೇಳುತ್ತಾರೋ ಅದಕ್ಕೆ ವೋಟು ಹಾಕುತ್ತೀನಿ' ಎನ್ನುತ್ತಾನೆ.

ಕೋಣನಕುಂಟೆಯ ವಾಸಿ ಮಣಿ ಅವರಿಗೆ ಕೂಡ ರಾಜಕೀಯದ ಗಂಧಗಾಳಿ ಇಲ್ಲ. ತಮ್ಮ ಮನೆ ಯಾವ ಕ್ಷೇತ್ರದಲ್ಲಿದೆ, ಯಾವ್ಯಾವ ಪಕ್ಷಗಳಿವೆ, ಅಭ್ಯರ್ಥಿಗಳು ಯಾರ್ಯಾರು ಏನೊಂದೂ ಗೊತ್ತಿಲ್ಲ. `ನಿಮಗೆ ರಾಜಕೀಯದ ಆಸಕ್ತಿ ಇಲ್ಲವೇ' ಎಂದರೆ, `ಸಾರ್, ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮನೆಮನೆಗೆ ಹಾಲು ಹಾಕಲು ಹೋಗ್ತೀನಿ. ಅದು ಮುಗಿದ ಮೇಲೆ ಡ್ರೈವಿಂಗ್ ಕೆಲಸಕ್ಕೆ ಹೋದರೆ ಮನೆಗೆ ವಾಪಸ್ಸು ಬರೋದು ರಾತ್ರಿ. ರಾಜಕೀಯದ ಬಗ್ಗೆ ತಿಳಿದುಕೊಳ್ಳೋಕೂ ಟೈಮ್ ಇಲ್ಲ' ಎಂದು ಕಷ್ಟ ಮುಂದಿಡುತ್ತಾರೆ.

ಗುಲ್ಬರ್ಗ ಮೂಲದ ಎಂಜಿನಿಯರ್ ಶಿವರಾಜ್, ಬಿಜಾಪುರ ಮೂಲದ ಕುಲಕರ್ಣಿ, ಕಡಪಾ ಮೂಲದ ಶ್ರೀರಾಜ್ ಅವರ ಹೆಸರುಗಳೂ ಇಲ್ಲಿನ ಮತಪಟ್ಟಿಯಲ್ಲಿಲ್ಲ. ಊರಿಗೆ ಹೋಗಿ ಮತ ಹಾಕುವ ಚಿಂತೆಯೂ ಅವರಿಗಿಲ್ಲ.

ಮದುವೆಯಾದಂದಿನಿಂದ ಇಲ್ಲಿಯೇ ನೆಲೆಸಿರುವ 62 ವರ್ಷದ ಕುಸುಮಾ ತಮ್ಮ ಹೆಸರು ಮತಪಟ್ಟಿಯಲ್ಲಿದ್ದರೂ ವೋಟು ಹಾಕುವುದಿಲ್ಲವಂತೆ. `ನಮ್ಮ ಹತ್ತಿರದ ಸಂಬಂಧಿಗಳೇ ರಾಜಕೀಯದಲ್ಲಿದ್ದಾರೆ. ಎಲ್ಲರನ್ನೂ ಬೈದು ಈ ವಿಷಯದಲ್ಲಿ ದೂರ ಇಟ್ಟಿದ್ದೇನೆ' ಎನ್ನುತ್ತಾರೆ. ಇಲ್ಲಿನ ಆರ್.ಟಿ. ನಗರದಲ್ಲಿ ಬೇಕರಿ ನಡೆಸುತ್ತಿರುವ ಬೇಲೂರು ಮೂಲದ ರಾಧಾಕೃಷ್ಣ ಅವರದ್ದೂ ಹೆಚ್ಚು ಕಡಿಮೆ ಇದೇ ಧೋರಣೆ. `ಏನು, ಎಲೆಕ್ಷನ್ ಜೋರಾ' ಎಂದರೆ `ನಮ್ಮದು ಎಲೆಕ್ಷನ್ನೂ ಇಲ್ಲ, ಕಲೆಕ್ಷನ್ನೂ ಇಲ್ಲ. ಮನಸ್ಸಾದರೆ ಹೋಗಿ ವೋಟು ಹಾಕುತ್ತೀವಿ. ಇಲ್ಲದಿದ್ದರೆ ಇಲ್ಲ' ಎಂದರು.

ಬಳ್ಳಾರಿ ಮೂಲದ ಎಂಜಿನಿಯರ್ ಸೋಮಶೇಖರ್ ಇವರೆಲ್ಲರಿಗಿಂತ ಸ್ವಲ್ಪ ಭಿನ್ನ. ಕೆಲವು ವರ್ಷಗಳಿಂದ ಇಲ್ಲಿ ನೆಲೆಸಿರುವ ಅವರ ಹೆಸರೂ ಇಲ್ಲಿನ ಮತಪಟ್ಟಿಯಲ್ಲಿಲ್ಲ.

ಆದರೆ, ಊರಿಗೇ ಹೋಗಿ ಮತ ಹಾಕಲು ದೃಢ ನಿಶ್ಚಯ ಮಾಡಿದ್ದಾರೆ. `ನಾನಂತೂ ವೋಟ್ ಮಿಸ್ ಮಾಡಿಕೊಳ್ಳಲ್ಲ' ಎನ್ನುತ್ತಾರೆ.
ಹೀಗೆ ನಿತ್ಯದ ಬದುಕಿಗೆ- ವ್ಯವಹಾರಕ್ಕೆ ಬೆಂಗಳೂರನ್ನೇ ನೆಚ್ಚಿಕೊಂಡಿರುವ, ಆದರೆ ರಾಜಕೀಯದ ವಿಷಯದಲ್ಲಿ ಮಾತ್ರ ಅದನ್ನು ದೂರವೇ ಇಟ್ಟು `ಊರೊಳಗಿದ್ದೂ ಊರವರಾಗದೇ' ಇರುವವರ ಸಂಖ್ಯೆ ದೊಡ್ಡದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.