ADVERTISEMENT

ಔಷಧಿ ಚೀಟಿಯಲ್ಲಿ ಮತದಾನ ಜಾಗೃತಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಔಷಧಿ ಚೀಟಿ ಮೇಲೆ ಮತದಾನ ಜಾಗೃತಿ
ಔಷಧಿ ಚೀಟಿ ಮೇಲೆ ಮತದಾನ ಜಾಗೃತಿ   

ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಜಿಲ್ಲಾಡಳಿತ, ಹೊಸ ಪ್ರಯೋಗಗಳಿಗೆ ಮುಂದಾಗಿದೆ.

ಸರ್ಕಾರಿ ವೈದ್ಯರು ನೀಡುವ ಔಷಧ ಚೀಟಿಗಳ ಮೇಲೆ ಕಡ್ಡಾಯ ಮತದಾನದ ಘೋಷಣೆಗಳನ್ನು ಮುದ್ರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕ್ರಮ ಅನುಸರಿಸುವಂತೆ ಖಾಸಗಿ ಆಸ್ಪತ್ರೆಗಳ ವೈದ್ಯರಿಗೂ ಮನವಿ ಮಾಡಲಾಗಿದೆ.

ಹೋಟೆಲ್‌ನಲ್ಲಿ ನೀಡುವ ರಸೀದಿಯಲ್ಲಿ ಮತದಾನ ಜಾಗೃತಿ ಘೋಷಣೆಗಳಿವೆ. ಈ ಸಂಬಂಧ ಐದು ಸಾವಿರ ಸ್ಟಿಕ್ಕರ್‌ಗಳನ್ನು ಮೈಸೂರು ಹೋಟೆಲ್‌ ಮಾಲೀಕರ ಸಂಘಕ್ಕೆ ನೀಡಲಾಗಿದೆ ಎಂದು ಜಿಲ್ಲಾ ‘ಸ್ವೀಪ್‌’ ಸಮಿತಿ ಅಧ್ಯಕ್ಷ ಪಿ. ಶಿವಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.‌

ADVERTISEMENT

ನಂದಿನಿ ಹಾಲಿನ ಪೊಟ್ಟಣ, ಬ್ಯಾಂಕ್‌ ಚಲನ್‌ಗಳ ಮೇಲೂ ಘೋಷಣೆ ಮುದ್ರಿಸಲು ಜಿಲ್ಲಾಡಳಿತ ಮುಂದಾಗಿದೆ. ಜಾತ್ರೆಗಳಲ್ಲಿ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಚಾಮುಂಡಿ ಬೆಟ್ಟದಲ್ಲಿ ದಸರಾ ಮಾದರಿಯಲ್ಲಿ ವಿದ್ಯುತ್‌ ಬಲ್ಬ್‌ ಬಳಸಿ ‘ನಿಮ್ಮ ಮತ ನಿಮ್ಮ ಹಕ್ಕು’ ಎಂಬ ಅಕ್ಷರಗಳನ್ನು ಜೋಡಿಸಿ ಏ.27ರಿಂದ ಮೇ 11ರ ವರೆಗೆ ದೀಪಾಲಂಕಾರ ಮಾಡಲಾಗುತ್ತಿದೆ. 24ರಂದು ಕೆ.ಆರ್‌.ವೃತ್ತದಲ್ಲಿ ಜಾಗೃತಿಗಾಗಿ ಪಂಜಿನ ಮೆರವಣಿಗೆ ನಡೆಯಲಿದೆ.

ಸಾರಿಗೆ ನಿಗಮದ ಸಂದೇಶ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ)  ‘ದಿನಾಂಕ 12.05.2018ರಂದು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ’ ಎಂಬ ಬರಹವನ್ನು ಬಸ್‌ ಟಿಕೆಟ್‌ಗಳಲ್ಲಿ ಮುದ್ರಿಸಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.