ADVERTISEMENT

ಲೆಕ್ಕಾಚಾರಗಳ ಮಧ್ಯೆ ‘ಟಾರ್ಗೆಟ್‌ 30’!

ಕಾಂಗ್ರೆಸ್‌, ಬಿಜೆಪಿಗೆ ಸರಳ ಬಹುಮತ ನಿರೀಕ್ಷೆ; ಜೆಡಿಎಸ್‌ಗೆ ‘ಕಿಂಗ್‌ ಮೇಕರ್‌’ ಕನಸು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಲೆಕ್ಕಾಚಾರಗಳ ಮಧ್ಯೆ ‘ಟಾರ್ಗೆಟ್‌ 30’!
ಲೆಕ್ಕಾಚಾರಗಳ ಮಧ್ಯೆ ‘ಟಾರ್ಗೆಟ್‌ 30’!   

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಬಹುದು ಎಂಬ ‘ಲೆಕ್ಕಾಚಾರ’ದ ಮಧ್ಯೆಯೇ, ಅಂತಹ ಸಂದರ್ಭದಲ್ಲಿ ನಿರ್ಣಾಯಕ ಆಗಬಹುದಾದ 30 ಕ್ಷೇತ್ರಗಳನ್ನು ಗೆದ್ದು ಬೀಗಲು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ!

ಮೂರೂ ಪಕ್ಷಗಳು ಗೆಲ್ಲುವ ಖಚಿತ ಕ್ಷೇತ್ರಗಳನ್ನು ಗುರುತಿಸಿಕೊಂಡಿವೆ. ಮತ್ತೆ ‘ಟಾರ್ಗೆಟ್‌– 30’ರ ಮೇಲೆ ಕಣ್ಣಿಟ್ಟು ಚುನಾವಣಾ ಕಾರ್ಯತಂತ್ರ ರೂಪಿಸಿಕೊಳ್ಳುತ್ತಿರುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿ 80ರಿಂದ 90, ಜೆಡಿಎಸ್‌ 40 ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿವೆ. ಸರಳ ಬಹುಮತಕ್ಕೆ ಕಡಿಮೆ ಆಗಬಹುದಾದ 30ರಷ್ಟು ಸ್ಥಾನಗಳನ್ನು ಗೆದ್ದುಕೊಳ್ಳಲು ಎರಡೂ ರಾಷ್ಟ್ರೀಯ ಪಕ್ಷಗಳು (ಬಿಜೆಪಿ, ಕಾಂಗ್ರೆಸ್‌) ಹೋರಾಟ ನಡೆಸಿದರೆ, ಇನ್ನೂ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಜೆಡಿಎಸ್‌ ‘ಕಿಂಗ್‌ ಮೇಕರ್‌’ ಆಗುವ ಯೋಚನೆಯಲ್ಲಿದೆ.

ADVERTISEMENT

ಚುನಾವಣೆಯಲ್ಲಿ ಬಿಜೆಪಿ ‘ಮಿಷನ್–150’ ಗುರಿ ಹೊಂದಿದೆ. ಆದರೆ ಈಗಿರುವ ಸ್ಥಿತಿಯಲ್ಲಿ, ಸರಳ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಸುಮಾರು 20ರಿಂದ 30 ಸ್ಥಾನಗಳ ಕೊರತೆ ಬೀಳಬಹುದು. ಗೆಲುವು ಖಚಿತ ಎಂದು ಗುರುತಿಸಿದ ಕ್ಷೇತ್ರಗಳನ್ನು ಬಿಟ್ಟು, ಗೆಲುವಿನ ಸಮೀಪ ತಲುಪಬಹುದಾದ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಚುನಾವಣಾ ತಂತ್ರಗಳನ್ನು ರೂಪಿಸಲು ಬಿಜೆಪಿ ಮುಂದಾಗಿದೆ. ಬಹುಮತ ಗಳಿಸಿ ಮತ್ತೆ ಆಡಳಿತ ಕೈವಶ ಮಾಡಿಕೊಳ್ಳುತ್ತೇವೆ ಎಂದು ಆ ಪಕ್ಷದ ನಾಯಕರು ವಿಶ್ವಾಸ ಹೊಂದಿದ್ದಾರೆ. ಆದರೆ, ಬಿಜೆಪಿ ಸ್ಥಿತಿಯೇ ಕಾಂಗ್ರೆಸ್‌ನಲ್ಲೂ ಇದೆ.

ಸದ್ಯದ ಸ್ಥಿತಿಯಲ್ಲಿ ಗೆಲ್ಲುವ ಭರವಸೆ ಇರುವ 40 ಸ್ಥಾನಗಳ ಜೊತೆಗೆ, ಇನ್ನೂ 25–30 ಸ್ಥಾನ ಗೆದ್ದರೆ ಹೊಂದಾಣಿಕೆ ರಾಜಕೀಯ ಅನಿವಾರ್ಯವಾಗುತ್ತದೆ ಎನ್ನುವುದು ಜೆಡಿಎಸ್‌ ನಾಯಕರ ಮನಸ್ಸಿನಲ್ಲಿದೆ. ಕಾಂಗ್ರೆಸ್‌– ಬಿಜೆಪಿಗಿಂತ ಕಡಿಮೆ ಸ್ಥಾನ (ಸುಮಾರು 60 ಕ್ಷೇತ್ರ) ಗೆದ್ದರೂ ಮೈತ್ರಿ ಮೂಲಕ ಅಧಿಕಾರ ಸೂತ್ರ ಹಿಡಿಯಬಹುದು ಎಂಬ ಕನಸು ಆ ಪಕ್ಷದಲ್ಲಿದೆ. ಒಟ್ಟಿನಲ್ಲಿ ಮೂರೂ ಪಕ್ಷಗಳ ಈಗಿನ ಯೋಜನೆ ‘ಟಾರ್ಗೆಟ್‌ 30’ ಸ್ಥಾನಗಳನ್ನು ಗೆಲ್ಲುವುದೇ ಆಗಿದೆ ಎಂದು ರಾಜಕೀಯ ವಿಶ್ಲೇಷಕರೊಬ್ಬರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.