ADVERTISEMENT

ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ನಾಮಪತ್ರ ಸಲ್ಲಿಸುವ ಮುನ್ನ ಮೈಸೂರಿನ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿಮಾನಿಗಳು ಸುತ್ತುವರಿದರು.
ನಾಮಪತ್ರ ಸಲ್ಲಿಸುವ ಮುನ್ನ ಮೈಸೂರಿನ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿಮಾನಿಗಳು ಸುತ್ತುವರಿದರು.   

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ 2.15ಕ್ಕೆ ನಜರಾಬಾದ್‌ನ ಮಿನಿ ವಿಧಾನಸೌಧದಲ್ಲಿರುವ ಕ್ಷೇತ್ರ ಚುನಾವಣಾಧಿಕಾರಿ ಕಚೇರಿಗೆ ಬಂದು ಉಮೇದುವಾರಿಕೆಸಲ್ಲಿಸಿದರು.

‘1983ರಲ್ಲಿ ನನ್ನ ಮೊದಲ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಕೊನೆಯ ಚುನಾವಣೆಯನ್ನೂ ಇದೇ ಕ್ಷೇತ್ರದಿಂದ ಎದುರಿಸುತ್ತೇನೆ’ ಎಂದು ನಾಮಪತ್ರ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ತಿಳಿಸಿದರು.

ADVERTISEMENT

ಇದಕ್ಕೂ ಮುನ್ನ ಹಲವು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬೆಳಿಗ್ಗೆ ಹುಟ್ಟೂರು ಸಿದ್ಧರಾಮನಹುಂಡಿಗೆ ತೆರಳಿ ಸಿದ್ಧರಾಮೇಶ್ವರ ಸ್ವಾಮಿ ಮತ್ತು ಆದಿಶಕ್ತಿ ಚಾಮುಂಡಮ್ಮ ದೇವಿಗೆ ಪೂಜೆ ಸಲ್ಲಿಸಿದರು.

ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು. ಅಲ್ಲಿಂದ ಅರಮನೆ ಬಳಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನೇರವಾಗಿ ನಾಮಪತ್ರ ಸಲ್ಲಿಸಲು ತೆರಳಿದರು.

ಜಿ.ಟಿ.ಡಿ ನಾಮಪತ್ರ ಸಲ್ಲಿಕೆ: ಸಿದ್ದರಾಮಯ್ಯ ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರೂ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು ಚುನಾವಣಾಧಿಕಾರಿ ಕಚೇರಿಗೆ ಬೆಂಬಲಿಗರ ಜತೆ ಮೆರವಣಿಗೆಯಲ್ಲಿ ಬಂದರು.

20 ನಿಮಿಷ ಕಾದು ಕುಳಿತ ಸಿ.ಎಂ
ಜಿ.ಟಿ.ದೇವೇಗೌಡ ಅವರು ಮಧ್ಯಾಹ್ನ 2.05ಕ್ಕೆ ಚುನಾವಣಾಧಿಕಾರಿ ಕಚೇರಿಗೆ ಬಂದರು. 10 ನಿಮಿಷ ಕಳೆದು ಅಲ್ಲಿಗೆ ಬಂದ ಸಿದ್ದರಾಮಯ್ಯ ನೇರವಾಗಿ ವಿಶ್ರಾಂತಿ ಕೊಠಡಿಗೆ ತೆರಳಿದರು. ಜಿ.ಟಿ.ದೇವೇಗೌಡ ಅವರು ನಾಮಪತ್ರ ಸಲ್ಲಿಸಿ ಹೊರಬರುವವರೆಗೆ ಸುಮಾರು 20 ನಿಮಿಷ ಅಲ್ಲೇ ಇದ್ದರು. ಆ ಬಳಿಕ ಚುನಾವಣಾಧಿಕಾರಿ ಬಿ.ವೆಂಕಟೇಶ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

*
ನನಗೆ ಯಾವುದೇ ಒತ್ತಡ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನ ಆಶೀರ್ವಾದ ಮಾಡುವರು ಎಂಬ ವಿಶ್ವಾಸವಿದೆ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.