ADVERTISEMENT

ಹಂಗಾಮಿ ಸ್ಪೀಕರ್‌ ಕೆಲಸವೇನು?

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಹಂಗಾಮಿ ಸ್ಪೀಕರ್‌ ಕೆಲಸವೇನು?
ಹಂಗಾಮಿ ಸ್ಪೀಕರ್‌ ಕೆಲಸವೇನು?   

ಬೆಂಗಳೂರು: ಪ್ರೊ–ಟೆಮ್ (ತಾತ್ಕಾಲಿಕ ಅಥವಾ ಹಂಗಾಮಿ) ಸ್ಪೀಕರ್ ಅಡಳಿತ ಪಕ್ಷದವರಾಗಿರಬೇಕೇ ಅಥವಾ ವಿರೋಧ ಪಕ್ಷದವರು ಆಗಿರಬೇಕೇ ಎಂಬುದು ಈಗ ಜಿಜ್ಞಾಸೆಯ ವಿಷಯವಾಗಿದೆ.

ಎಷ್ಟು ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದಾರೆ ಎಂಬ ಹಿರಿತನ ಪರಿಗಣಿಸಿ ಹಂಗಾಮಿ ಸ್ಪೀಕರ್‌ ನೇಮಕ ಮಾಡಲು ಅವಕಾಶ ಇದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದವರು ಬಹುಮತ ಸಾಬೀತುಪಡಿಸಲು ಅಧಿವೇಶನ ನಡೆಸುವ ಮುನ್ನ, ಆಯ್ಕೆಯಾಗಿರುವ ಶಾಸಕರಲ್ಲಿ ಹಿರಿತನ ಯಾರಿಗೆ ಎಂಬ ಮಾಹಿತಿಯನ್ನು ಪಡೆಯುತ್ತಾರೆ. ವಿಧಾನಸಭೆ ಕಾರ್ಯದರ್ಶಿ ನೀಡುವ ಮಾಹಿತಿ ಆಧರಿಸಿ, ತಮಗೆ ಸೂಕ್ತವೆನಿಸಿದ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡುತ್ತಾರೆ. ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿ, ಜವಾಬ್ದಾರಿ ನಿಭಾಯಿಸುವಂತೆ ಆದೇಶ ಹೊರಡಿಸುತ್ತಾರೆ.

ADVERTISEMENT

ನೂತನವಾಗಿ ಆಯ್ಕೆಯಾದ ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸುವುದು ಮೊದಲ ಕರ್ತವ್ಯ. ಅದಾದ ಬಳಿಕ ಕಾಯಂ ಸಭಾಧ್ಯಕ್ಷರ ಆಯ್ಕೆಗಾಗಿ ಚುನಾವಣೆಗೆ ಸಮಯ ನಿಗದಿ ಮಾಡಲಾಗುತ್ತದೆ. ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರೆ ಆಯ್ಕೆಯನ್ನು ಘೋಷಿಸಲಾಗುತ್ತದೆ. ಆಡಳಿತ ಮತ್ತು ವಿರೋಧ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ ಸದನದೊಳಗೆ ಮತದಾನ ಮಾಡುವ ಮೂಲಕ ಆಯ್ಕೆ ನಡೆಸಲಾಗುತ್ತದೆ. ಈ ಜವಾಬ್ದಾರಿಯನ್ನು ಅವರೇ ನಿರ್ವಹಿಸುತ್ತಾರೆ.

ಈಗಿನ ಹೊಣೆ ಏನು? ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ, ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವುದು ಹಾಗೂ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಿರ್ವಹಣೆ ಅವರ ಜವಾಬ್ದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.