ADVERTISEMENT

ಅದಿರು ಅಕ್ರಮ ಸಾಗಣೆ ಆಗಿಲ್ಲ

ಎಚ್‌.ಡಿ. ಕುಮಾರಸ್ವಾಮಿ ಕಪೋಲ ಕಲ್ಪಿತ ಆರೋಪ: ವಿನಯ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:37 IST
Last Updated 8 ಫೆಬ್ರುವರಿ 2018, 9:37 IST

ಬೆಂಗಳೂರು: ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಸುಬ್ಬರಾಯನಹಳ್ಳಿ ಮತ್ತು ತಿಮ್ಮಪ್ಪನಗುಡಿ ಗಣಿ ಪ್ರದೇಶದಿಂದ ಅದಿರು ಅಕ್ರಮವಾಗಿ ಸಾಗಣೆಯಾಗಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಸ್ಪಷ್ಟಪಡಿಸಿದರು.

‘ಈ ಗಣಿ ಪ್ರದೇಶದಿಂದ ₹ 5,450 ಕೋಟಿ ಮೊತ್ತದ ಅದಿರು ಅಕ್ರಮವಾಗಿ ಸಾಗಣೆಯಾಗಿದೆ ಎಂದು ‌ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮಾಡಿರುವ ಆರೋಪ ಸತ್ಯಕ್ಕೆ ದೂರ’ ಎಂದು ಬುಧವಾ‌ರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಗಣಿಗಾರಿಕೆಗೆ ನೀಡಿದ್ದ ಮೂರು ವರ್ಷದ ಗುತ್ತಿಗೆ ಅವಧಿಯಲ್ಲಿ ₹ 5,450 ಕೋಟಿ ಮೊತ್ತದ ಅದಿರು ಸಾಗಣೆಗೆ ಪ್ರತಿ ದಿನ ಸುಮಾರು 400 ಲಾರಿಗಳಲ್ಲಿ 2,000 ಟ್ರಿಪ್ ಮಾಡಬೇಕಾಗುತ್ತದೆ. ಇದು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ADVERTISEMENT

‌ಕಚ್ಚಾ ಅದಿರು ಉತ್ಪಾದನೆ ಮತ್ತು ಸಂಸ್ಕರಿಸಿ ಸಾಗಣೆ ಮಾಡಿದ ಅದಿರು ಪ್ರಮಾಣಗಳ ಅಂಕಿ ಅಂಶಗಳನ್ನು ತಾಳೆ ಮಾಡಿದಾಗ ವ್ಯತ್ಯಾಸಗಳು ಕಂಡು ಬಂದಿರುವುದು ನಿಜ. ಆದರೆ, ಅದೆಲ್ಲವೂ ಅಕ್ರಮವಾಗಿ ಸಾಗಣೆ ಎಂದು ಆರೋಪಿಸುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಅದಿರಿನ ಕೊರತೆ ಎದುರಾದ ಕಾರಣ ಸುಪ್ರೀಂಕೋರ್ಟ್‌ ಆದೇಶದಂತೆ ಸುಬ್ಬರಾಯನಹಳ್ಳಿ ಗಣಿಯಲ್ಲಿ ವಾರ್ಷಿಕ 30 ಲಕ್ಷ ಟನ್ ಮತ್ತು ತಿಮ್ಮಪ್ಪನಗುಡಿ ಗಣಿಯಲ್ಲಿ 10.60 ಲಕ್ಷ ಟನ್‌ ಅದಿರು ತೆಗೆಯುಲು ಮೈಸೂರು ಮಿನರಲ್ಸ್ ಲಿಮಿಟೆಡ್‌ಗೆ(ಎಂಎಂಎಲ್) ಗುರಿ ನೀಡಲಾಗಿತ್ತು.

‘ಅದಿರು ತೆಗೆಯುವ ಗುತ್ತಿಗೆಯನ್ನು ಮುಚ್ಚಂಡಿ ಸಂಸ್ಥೆಗೆ, ಬ್ಲಾಸ್ಟಿಂಗ್‌ ಜವಾಬ್ದಾರಿಯನ್ನು ಅಮಿತ್ ಅರ್ಥ ಮೂವರ್ಸ್ ಸಂಸ್ಥೆಗೆ ಮತ್ತು ಸಂಸ್ಕರಣೆ ಹೊಣೆಯನ್ನು ವಿಶಾಲ್ ಎಂಟರ್‌ ಪ್ರೈಸಸ್ ಸಂಸ್ಥೆಗೆ ಎಂಎಂಎಲ್‌ ಕಾನೂನು ಪ್ರಕಾರ ನೀಡಿದೆ. ಆದರೆ, ಈ ಗುತ್ತಿಗೆದಾರರು ಮೂರು ವರ್ಷದ ಅವಧಿಯಲ್ಲಿ ನಿಗದಿತ ಗುರಿಗಿಂತ ಕಡಿಮೆ ಅದಿರು ಉತ್ಪಾದನೆ ಮಾಡಿದ್ದಾರೆ. ಈ ಕಾರಣಕ್ಕೆ ಗುತ್ತಿಗೆದಾರರಿಗೆ ದಂಡ ವಿಧಿಸಲು ನಾನೇ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.

‘ನನ್ನ ಆದೇಶದಂತೆ ರಚನೆಯಾದ ಆಂತರಿಕ ತನಿಖಾ ತಂಡ ಗಣಿ ಪ್ರದೇಶಕ್ಕೆ ಹೋದಾಗ 2014ರಿಂದ ಮಾರ್ಚ್‌ 2017ರವರೆಗೆ ಒಟ್ಟಾರೆ 9,78,612 ಟನ್‌ ಕಡಿಮೆ ಉತ್ಪಾದನೆ ವರದಿಯಾಗಿರುವುದನ್ನು ಪತ್ತೆ ಮಾಡಿದೆ’ ಎಂದರು.

‘ಅಲ್ಲದೆ, ದಾಖಲೆಗಳನ್ನು ತಿದ್ದಿರುವುದು, ಸಹಿ ನಿರ್ವಹಣೆಯಲ್ಲಿನ ಲೋಪಗಳನ್ನೂ ಈ ಸಮಿತಿ ಪತ್ತೆ ಮಾಡಿದೆ. ನಿಗದಿತ ಗುರಿಗಿಂತ ಕಡಿಮೆ ಅದಿರು ಉತ್ಪಾದನೆ ಮಾಡಿದ ಕಾರಣಕ್ಕೆ ₹ 1.13 ಕೋಟಿ ದಂಡ ವಿಧಿಸಲು ಶಿಫಾರಸು ಮಾಡಿದೆ. ತಪ್ಪೆಸಗಿರುವ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆದೇಶ ಮಾಡಿದ್ದೇನೆ’ ಎಂದೂ ಅವರು ವಿವರಿಸಿದರು.

‘ವರದಿಯನ್ನು ಹೇಗೋ ಪಡೆದಿರುವ ಕುಮಾರಸ್ವಾಮಿ, ಅದರಲ್ಲಿರುವ ಅಂಶಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಆರೋಪ ಮಾಡಿದ್ದಾರೆ’ ಎಂದು ಅವರು ಹೇಳಿದರು.

ತನಿಖೆ ನಡೆದಿರುವುದು ಗಣಿ ಪ್ರದೇಶದ ಕಚ್ಚಾ ಅದಿರಿಗೆ ಸಂಬಂಧಿಸಿದ್ದಾಗಿದೆ. ಸಂಸ್ಕರಿಸಿ ಸಾಗಣೆ ಮಾಡಿ ಸಾಗಣೆಯಾಗಿರುವ ಅದಿರಿಗೆ ಸಂಬಂಧಿಸಿದ್ದಲ್ಲ. ಅದಿರನ್ನು ನಿಕ್ಷೇಪದಿಂದ ಮೇಲೆ ತಂದು ಡಂಪಿಂಗ್ ಯಾರ್ಡ್‌ಗೆ ಸುರಿ
ಯುವ ಸಂದರ್ಭದಲ್ಲಿ ಲೋಪ ಆಗಿದೆಯೇ ಹೊರತು, ಒಂದೇ ಒಂದು ಟನ್ ಅದಿರು ಗಣಿ ಪ್ರದೇಶದಿಂದ ಹೊರಕ್ಕೆ ಅಕ್ರಮವಾಗಿ ಸಾಗಣೆಯಾಗಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ನಾಲ್ಕು ಇಲಾಖೆಗಳ ಪ್ರತ್ಯೇಕ ಚೆಕ್‌ ಪೋಸ್ಟ್‌ಗಳಿವೆ. ಎಲ್ಲಾ ಪ್ರಕ್ರಿಯೆಗಳು ಕೇಂದ್ರ ಉನ್ನತಾಧಿಕಾರ ಸಂಸ್ಥೆಯ (ಸಿಇಸಿ) ಮೇಲುಸ್ತುವಾರಿ ಇದೆ. ಹೀಗಾಗಿ ಅಕ್ರಮಕ್ಕೆ ಅವಕಾಶ ಇಲ್ಲ ಎಂದರು.

ತುಷಾರ್ ಗಿರಿನಾಥ್ ಹಸ್ತಕ್ಷೇಪ ಇಲ್ಲ

ಗಣಿ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಸ್ತಕ್ಷೇಪ ಇಲ್ಲ ಎಂದು ವಿನಯ ಕುಲಕರ್ಣಿ ಹೇಳಿದರು.

‘ನಾನೇ ಸ್ವತಂತ್ರವಾಗಿ ಇಲಾಖೆ ನಿರ್ವಹಣೆ ಮಾಡುತ್ತೇನೆ. ನಾನು ತನಿಖೆ ಮಾಡಿಸದಿದ್ದರೆ ಲೋಪ ಆಗಿರುವುದು ಕುಮಾರಸ್ವಾಮಿ ಗಮನಕ್ಕೆ ಬರುತ್ತಲೆ ಇರಲಿಲ್ಲ. ಹೀಗಾಗಿ, ಸರ್ಕಾರ ಅವ್ಯವಹಾರದಲ್ಲಿ ಭಾಗಿಯಾಗಿ ಪ್ರಕರಣವನ್ನು ಮುಚ್ಚಿ ಹಾಕುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರ ರಹಿತವಾಗಿದೆ. ಜನರಲ್ಲಿ ತಪ್ಪು ಭಾವನೆ ಮೂಡಿಸುವ ದುರುದ್ದೇಶದಿಂದ ಅವರು ಈ ಆರೋಪ ಮಾಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.