ADVERTISEMENT

‘ಅತೃಪ್ತ’ ಆತ್ಮದೊಂದಿಗೆ ಒಡನಾಟ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST
ಶ್ರುತಿ ರಾಜ್
ಶ್ರುತಿ ರಾಜ್   

ನವದಂಪತಿ ನಡುವೆ ನಡೆಯುವುದೇ ‘ಅತೃಪ್ತ’ ಚಿತ್ರದ ಕಥೆ. ಗಂಡ ಸಾಫ್ಟ್‌ವೇರ್ ಎಂಜಿನಿಯರ್‌. ಆತ ಕಚೇರಿಗೆ ಹೋದಾಗ ಆತ್ಮವೊಂದು ಏನೆಲ್ಲಾ ತೊಂದರೆ ನೀಡುತ್ತದೆ ಎನ್ನುವುದೇ ಕಥಾಹಂದರ.

ಯು.ಎಫ್‌.ಒ ಮತ್ತು ಕ್ಯೂಬ್‌ ಕಂಪನಿಗಳಿಂದ ತಲೆದೋರಿದ್ದ ಬಿಕ್ಕಟ್ಟಿನ ಪರಿಣಾಮ ಒಂದು ವಾರ ತಡವಾಗಿ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಬಂದಿದ್ದ ಚಿತ್ರತಂಡದ ಮನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ದ್ವಂದ್ವ ನಿರ್ಧಾರದ ವಿರುದ್ಧ ಅತೃಪ್ತಿ ಎದ್ದುಕಾಣುತ್ತಿತ್ತು.

ನಿರ್ದೇಶಕ ನಾಗೇಶ ಕ್ಯಾಲನೂರು ಬಹಿರಂಗವಾಗಿಯೇ ವಾಣಿಜ್ಯ ಮಂಡಳಿ ವಿರುದ್ಧ ತಮ್ಮ ಅತೃಪ್ತಿ ಸ್ಫೋಟಿಸಿದರು. ‘ಡಿಜಿಟಲ್‌ ಸೇವೆ ಸಂಬಂಧ ಬಿಕ್ಕಟ್ಟು ಎದುರಾಗಿದ್ದು ಎಲ್ಲರಿಗೂ ಗೊತ್ತಿದೆ. ಬಿಡುಗಡೆಯ ದಿನಾಂಕ ಸಂಬಂಧ ಮಂಡಳಿ ನೀಡಿದ್ದ ಭರವಸೆ ಹುಸಿಯಾಗಿದೆ. ದೊಡ್ಡ ಬಜೆಟ್‌ನ ಚಿತ್ರಗಳು ಕೂಡ ಈ ವಾರವೇ ತೆರೆಕಾಣುತ್ತಿವೆ. ಇದರಿಂದ ಅಲ್ಪಪ್ರಮಾಣದ ಬಂಡವಾಳ ಹೂಡಿದವರು ತೊಂದರೆಯ ಸುಳಿಗೆ ಸಿಲುಕಿದ್ದಾರೆ’ ಎಂದು ಅಸಮಾಧಾನ ತೋಡಿಕೊಂಡರು.

ADVERTISEMENT

‘ಉತ್ತಮವಾಗಿ ಚಿತ್ರ ಮಾಡಿದ್ದೇನೆ. ಜನರಿಗೆ ಖಂಡಿತ ಇಷ್ಟವಾಗಲಿದೆ. ಇದು ಮನೆಯೊಂದರಲ್ಲಿ ನಡೆಯುವ ಹಾರರ್‌ ಸಿನಿಮಾ’ ಎಂದರು.

ನಾಯಕನಾಗಿ ಅರ್ಜುನ್‌ ಯೋಗಿಗೆ ಇದು ಎರಡನೇ ಸಿನಿಮಾ. ‘ಎರಡು ಶೇಡ್‌ಗಳಿರುವ ಚಿತ್ರ ಇದು. ಮೊದಲ ಶೇಡ್‌ನಲ್ಲಿ ನನ್ನದು ಸಾಫ್ಟ್‌ವೇರ್ ಗಂಡನ ಪಾತ್ರ. ಎರಡನೇ ಶೇಡ್‌ ತುಂಬಾ ಭಿನ್ನವಾಗಿದೆ. ಚಿತ್ರದಲ್ಲಿ ಭಯಾನಕ ದೃಶ್ಯಗಳಿವೆ’ ಎಂದರು.

ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿದ್ದ ಶ್ರುತಿ ರಾಜ್‌ ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿದ್ದಾರೆ. ಈ ಚಿತ್ರ ಅವರಿಗೆ ಹೊಸ ಅನುಭವ ನೀಡಿದೆಯಂತೆ.

ಬಿ. ರಘುನಾಥ್‌ ರಾವ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಶೈಲಜಾ ಜೋಷಿ ತಾರಾಗಣದಲ್ಲಿದ್ದಾರೆ. 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ.


ಅರ್ಜುನ್ ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.