ADVERTISEMENT

ಆಡಿಯೊ ಬಿಡುಗಡೆಯಲ್ಲಿ ತಮಾಷೆ ನೃತ್ಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ಕಣ್ಣು ಕೋರೈಸುವ ಝಗ ಮಗ ಬೆಳಕಿನಲ್ಲಿ ನಟ ಚಿಕ್ಕಣ್ಣನ ಡಾನ್ಸ್ ಧಮಾಕ. ಕ್ರಿಕೆಟಿಗ ಸೈಯ್ಯದ್ ಕಿರ್ಮಾನಿ ವೇದಿಕೆಯಲ್ಲಿ ಬ್ಯಾಟು ಬೀಸಿದರೆ, ನಟಿ ಸಂಜನಾ ಯುವರಾಣಿಯಂತೆ ಕಿರೀಟ ಮತ್ತು ಪೋಷಾಕು ತೊಟ್ಟು ಮಿಂಚಿದ್ದಲ್ಲದೆ ಮಸ್ತ್ ಮಸ್ತ್ ಸ್ಟೆಪ್ ಸಹ ಅವರಿಂದ...

ಗಾಯಕರಾದ ಟಿಪ್ಪು ಹಾಗೂ ವಿಜಯ್ ಪ್ರಕಾಶ್ ಗಾಯನ ಮನಸೂರೆಗೊಂಡಿತು. ಇಷ್ಟೆಲ್ಲಾ ರಂಜನೆಯ ಕ್ಷಣಗಳಿಗೆ ಸಾಕ್ಷಿಯಾಗಿದ್ದು ‘ಬೆಂಗಳೂರು -560023’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ. ವರ್ಣರಂಜಿತ ಸಮಾರಂಭದಲ್ಲಿ ನಟ ಸುದೀಪ್ ಆಡಿಯೊ ಬಿಡುಗಡೆ ಮಾಡಿದರು.

ಈ ವರ್ಣಮಯ ಕಾರ್ಯಕ್ರಮಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ ಮಾಗಡಿ ರಸ್ತೆಯ ಗಲ್ಲಿ ಕ್ರಿಕೆಟ್ ಸುತ್ತ ಚಿತ್ರಕತೆ ಹೆಣೆಯಲಾಗಿದೆ. ಗೆಳೆತನ, ಪ್ರೀತಿ, ದ್ವೇಷ ಕಥೆ ಇಲ್ಲಿಯದ್ದು. ಐದು ಹಾಡುಗಳಿದ್ದು, ಲೋಕಲ್ ಹುಡುಗರಿಗೆ ಇಷ್ಟವಾಗುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು ಚಿತ್ರದ ನಿರ್ದೇಶಕ ಪ್ರದೀಪ್ ರಾಜ್, .

ನಾಯಕ ಕಾರ್ತಿಕ್ ಜಯರಾಮ್ ಚಿತ್ರ ಕಥೆಯ ತಿರುಳಿನ ಬಗ್ಗೆ ಮಾಹಿತಿ ನೀಡಿದರು. ‘ವಿಜಯ್ ಪ್ರಕಾಶ್ ಅವರ ಗಾಯನದ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ. ಸಂಗೀತವೇ ಚಿತ್ರದ ಜೀವಾಳ. ನೈಜವಾಗಿ ಮೂಡಿ ಬಂದಿದೆ’ ಎಂದು ಮಾತು ಮುಗಿಸಿದರು. ಚಿತ್ರದಲ್ಲಿ ನಟಿಸಿರುವ ರಾಜೀವ್, ಅರುಣ್ ಮ್ಯಾಥ್ಯೂ ಅವರಿಂದಲೂ ಇದೇ ವಿಶ್ವಾಸ ಮಾತು. ನಾಯಕಿ ಶಿವಾನಿ, ನಿರ್ಮಾಪಕರಾದ ಪುನೀತ್ ಹಾಗೂ ಮನು ಉಪಸ್ಥಿತರಿದ್ದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟ್ ಪಟುಗಳಾದ ಸೈಯದ್ ಕಿರ್ಮಾನಿ, ವಿಜಯ್ ಭಾರದ್ವಾಜ್, ನಟಿಯರಾದ ಸಂಜನಾ, ದೀಪಿಕಾ ದಾಸ್, ನರ್ಸ್ ಜಯಲಕ್ಷ್ಮಿ ನಡೆಸಿಕೊಟ್ಟ ರಸಪ್ರಶ್ನೆ ಕಾರ್ಯಕ್ರಮ ವಿನೋದಮಯವಾಗಿತ್ತು.

ಈ ವೇಳೆ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಮಾತನಾಡಿ, ‘ಮೂಲತಃ ಕ್ರಿಕೆಟ್ ಮಹಿಳೆಯರದ್ದು.16ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಹುಡುಗಿಯರು ಮೊದಲು ಕ್ರಿಕೆಟ್ ಆರಂಭಿಸಿದರು. ಆಗೆಲ್ಲ ಅಂಡರ್ ಆರ್ಮ್‌ ಬೌಲಿಂಗ್ ಮಾಡುತ್ತಿದ್ದರು. ಆದರೆ, ಹಾಗೆ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಅವರ ಲಂಗ ಅಡ್ಡಿ ಬರುತ್ತಿತ್ತು, ಆಗ ಅವರು ಈಗಿನ ಶೈಲಿಯ ಬೌಲಿಂಗ್ ಅನ್ನು ರೂಢಿಸಿಕೊಂಡರು. ಕಾಲಾಂತರದಲ್ಲಿ ಅದು ಪುರುಷರ ಕ್ರೀಡೆಯಾಗಿ ಬದಲಾಯಿತು’ ಎಂದರು. ನಟ ಚಿಕ್ಕಣ್ಣ ಅವರ ನೃತ್ಯ ಹಾಗೂ ಚಿನಕುರಳಿಯಂತಹ ಮಾತುಗಳು ಸಭಿಕರನ್ನು ನಗೆಯಲ್ಲಿ ತೇಲಿಸಿತು.

‘ಬೆಂಗಳೂರು -560023ನಲ್ಲಿ ನಟಿಸಿರುವ ಕಾರ್ತಿಕ್ ಜಯರಾಮ್, ಚಂದನ್, ರಾಜೀವ್, ಧ್ರುವ ಶರ್ಮಾ ಮತ್ತಿತರರು ನನಗೆ ಸಿಸಿಎಲ್ ಪಂದ್ಯಾವಳಿಯಲ್ಲಿ ಪರಿಚಿತರಾದವರು. ಅವರು ಕ್ರಿಕೆಟ್‌ನಲ್ಲಿ ಮಾತ್ರ ಅಲ್ಲ, ನಟನೆಯಲ್ಲೂ ಪ್ರತಿಭಾವಂತರು’ ಎಂದು ಆಡಿಯೊ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು ಕಿಚ್ಚ ಸುದೀಪ್. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ. ಗಂಗರಾಜು, ಕರಿಸುಬ್ಬು ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.