ADVERTISEMENT

ಆದಿಯ ಬದುಕಿನಲ್ಲಿ ಮೋಕ್ಷಾ ಪುರಾಣ!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
ಅಹಲ್ಯಾ, ಶಶಾಂಕ್‌, ಮೋಕ್ಷಾ
ಅಹಲ್ಯಾ, ಶಶಾಂಕ್‌, ಮೋಕ್ಷಾ   

‘ಐದೇ ನಿಮಿಷ ಸಾಕು... ಯಾರೇ ಆಗಿದ್ರೂ ಫ್ರೆಂಡ್ಸ್‌ ಮಾಡ್ಕೋಬಿಡ್ತೀನಿ. ಅಷ್ಟೇ ಬೇಗ ಅವ್ರು ಎಂಥ ಮನುಷ್ಯರು ಅಂತ ಜಡ್ಜ್‌ ಮಾಡ್ಬಿಡ್ತೀನಿ’ ಹೀಗೆಂದು ಹೇಳಿ ಮರುಕ್ಷಣವೇ ‘ಹಾಯ್‌ ಹೇಗಿದ್ದೀರಾ?’ ಎಂದು ವೇದಿಕೆ ಮೇಲಿಂದಲೇ ಎದುರು ಕೂತವರನ್ನು ಮಾತಾಡಿಸಿ, ‘ನೋಡಿದ್ರಾ ಹೆಂಗೆ’ ಎನ್ನುವಂತೆ ನಕ್ಕರು ಮೋಕ್ಷಾ ಕುಶಾಲ್‌.

ಅದು ‘ಆದಿ ಪುರಾಣ’ ಸಿನಿಮಾ ಪತ್ರಿಕಾಗೋಷ್ಠಿ. ಮೊದಲ ಸಿನಿಮಾ, ಮೊದಲ ಪತ್ರಿಕಾಗೋಷ್ಠಿ ಎದುರಿಸುತ್ತಿರುವ ಉತ್ಸಾಹದಲ್ಲಿದ್ದ ಮೋಕ್ಷಾ ತುಸು ಹೆಚ್ಚು ಅನಿಸುವಷ್ಟೇ ಮಾತಾಡಿದರು. ಕಾಲೇಜು ದಿನಗಳಿಂದಲೇ ಮಾಡೆಲಿಂಗ್‌ನಲ್ಲಿ ತೊಡಗಿಕೊಂಡಿದ್ದು, ನಂತರ ಮನೆಯವರ ವಿರೋಧ ಕಟ್ಟಿಕೊಂಡೂ ಒಂದು ವರ್ಷ ಕಾದು ಸಿನಿಮಾರಂಗಕ್ಕೆ ಬಂದಿದ್ದು ಎಲ್ಲವನ್ನೂ ಪಟಪಟನೇ ಹೇಳಿಕೊಂಡರು. ಈ ಚಿತ್ರದಲ್ಲಿ ಅವರು ಬೋಲ್ಡ್‌ ಆ್ಯಂಡ್‌ ಬ್ಯೂಟಿಫುಲ್‌ ಆಗಿ ಕಾಣಿಸಿಕೊಂಡಿದ್ದಾರಂತೆ. ‘ಐಟಿ ತಂಡದ ಮುಖ್ಯಸ್ಥೆಯ ಪಾತ್ರ ನನ್ನದು. ಸುಲಭವಾಗಿ ಯಾವ ಹುಡುಗರತ್ತಲೂ ಕಣ್ಣೆತ್ತಿ ನೋಡುವವಳಲ್ಲ. ಅಂಥ ಹುಡುಗಿ ಪ್ರೇಮದಲ್ಲಿ ಬಿದ್ದರೆ ಹೇಗಿರುತ್ತದೆ ಎನ್ನುವುದೇ ಈ ಸಿನಿಮಾದ ಕಥಾವಸ್ತು’ ಎಂದು ಅವರು ತಮ್ಮ ಪಾತ್ರದ ಕುರಿತೂ ಹೇಳಿಕೊಂಡರು.

‘ಆದಿ ಪುರಾಣ’ ಮೋಹನ್‌ ನಿರ್ದೇಶನದ ಮೊದಲ ಸಿನಿಮಾ. 12 ವರ್ಷಗಳಿಂದ ಸಂಕಲನ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ‘ಆದಿ ಪುರಾಣ’ 40 ದಿನಗಳ ಚಿತ್ರೀಕರಣವನ್ನು ಮುಗಿಸಿ ರೀರೆಕಾರ್ಡಿಂಗ್‌ ಹಂತದಲ್ಲಿದೆ. ‘ಈ ಚಿತ್ರದ ಹಾಡನ್ನು ಚಿತ್ರೀಕರಿಸಬೇಕಾದರೆ ಜೇನುನೊಣ ನಮ್ಮ ಮೇಲೆ ದಾಳಿ ಮಾಡಿದವು. ಇನ್ನೊಮ್ಮೆ ಇನೊವೇಟೀವ್‌ ಫಿಲಂ ಸಿಟಿಯಲ್ಲಿ ಬೆಂಕಿ ಬಿದ್ದು ತೊಂದರೆ ಆಯ್ತು. ಇಷ್ಟೆಲ್ಲ ಸವಾಲುಗಳು ಇದ್ದಾಗ್ಯೂ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ತುಂಬಾ ಚೆನ್ನಾಗಿ ಬಂದಿದೆ’ ಎಂದ ಮೋಹನ್‌ ‘ಇದು ಅಡಲ್ಟ್‌ ಕಾಮಿಡಿ ಅಲ್ಲ. ಹಾಗೆಯೇ ಇಬ್ಬರು ನಾಯಕಿಯರು ಇರುವುದು ನಿಜವಾದರೂ ಪ್ರೇಮಕಥೆಯಲ್ಲ. ಇದೊಂದು ರೊಮ್ಯಾಂಟಿಕ್‌ ಕಾಮಿಡಿ’ ಎಂದು ಸ್ಪಷ್ಟಪಡಿಸಿದರು. 

ADVERTISEMENT

‘ಈ ಚಿತ್ರದ ನಾಯಕ ಶಶಾಂಕ್‌ ನನ್ನ ತಮ್ಮ. ಆದಿ ಎಂಬ ಹುಡುಗನ ಬದುಕಿನ ವಿವಿಧ ಹಂತಗಳನ್ನು ಕಾಮಿಕ್‌ ಆಗಿ ಹೇಳುವ ಪ್ರಯತ್ನವನ್ನು ಈ ಚಿತ್ರ ಮಾಡಿದ್ದೇವೆ’ ಎಂದರು ನಿರ್ಮಾಪಕ ಶಮಂತ್‌.

‘ಟೀಸರ್‌ಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈ ಚಿತ್ರದಲ್ಲಿ ನನ್ನದು ಡಿಸೆಂಟ್‌ ಕಾಲೇಜು ಹುಡುಗನ ಪಾತ್ರ. ತುಂಬ ಒಳ್ಳೆಯ ಪಾತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ಸಂತಸ ನನಗಿದೆ’ ಎಂದ ನಾಯಕ ಶಶಾಂಕ್‌ ಅವರಿಗೆ ಸಿನಿಮಾದಲ್ಲಿನ ಕೆಲವು ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ನಟಿಸಲು ಸಾಕಷ್ಟು ಪರದಾಡಿದರಂತೆ.

ಅಹಲ್ಯಾ ಸುರೇಶ್‌ ಇನ್ನೋರ್ವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ನಾನು ಸಾಂಪ್ರದಾಯಿಕ ಹುಡುಗಿಯಾಗಿಯೂ, ಗೃಹಿಣಿಯಾಗಿಯೂ ಕಾಣಿಸಿಕೊಂಡಿದ್ದೇನೆ. ಈ ಪಾತ್ರದ ಕುರಿತು ನನಗೆ ಸಾಕಷ್ಟು ನಿರೀಕ್ಷೆ ಇದೆ’ ಎಂದು ಹೇಳಿ ಅವರು ಮಾತು ಮುಗಿಸಿದರು.

ಹಿರಿಯ ನೃತ್ಯ ನಿರ್ದೇಶಕಿ ತಾರಾ ‘ಆದಿ ಪುರಾಣ’ಕ್ಕಾಗಿ ಒಂದು ಕ್ಯಾಬರೆ ನೃತ್ಯ ಸಂಯೋಜಿಸಿದ್ದಾರೆ. ಗುರುಪ್ರಸಾದ್‌ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಸಿದ್ಧಾರ್ಥ್‌, ಚಂದನಾ ಮತ್ತು ವಿಕ್ರಮ್‌ ಮೂವರು ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.