ADVERTISEMENT

‘ಒಳ್ಳೆಯ ಕಥೆಯ ಭಾಗವಾಗಲು ಬಯಸುವೆ’

ಪದ್ಮನಾಭ ಭಟ್ಟ‌
Published 2 ನವೆಂಬರ್ 2017, 19:30 IST
Last Updated 2 ನವೆಂಬರ್ 2017, 19:30 IST
‘ಒಳ್ಳೆಯ ಕಥೆಯ    ಭಾಗವಾಗಲು ಬಯಸುವೆ’
‘ಒಳ್ಳೆಯ ಕಥೆಯ ಭಾಗವಾಗಲು ಬಯಸುವೆ’   

ವಿದ್ಯಾ ಖುಷಿ ಖುಷಿಯಾಗಿರುವ ಹುಡುಗಿ. ತಾನು ಎಷ್ಟೇ ದುಃಖದಲ್ಲಿದ್ದರೂ ಬೇರೆಯವರ ಸಂತೋಷಕ್ಕೆ ಹೆಣಗುವ ಗುಣದವಳು. ಈ ಸ್ವಭಾವಕ್ಕೆ ಪೂರ್ತಿ ವಿರುದ್ಧ ಗುಣ ವಿನಾಯಕನದು. ಬ್ಯುಸಿನೆಸ್‌ ಮತ್ತು ಅಮ್ಮ ಅಷ್ಟೇ ಅವನ ಲೋಕ. ಬೇರೆ ಏನೂ ಬೇಕಾಗಿಯೂ ಇಲ್ಲ. ವಿದ್ಯಾಗೆ ಮದುವೆ ಅಂದ್ರೆ ತುಂಬ ಇಷ್ಟ. ವಿನಾಯಕ ಮದ್ವೆ ಅಂದ್ರೆ ಮಾರು ದೂರ ಓಡ್ತಾನೆ. ಹೀಗೆ ಉತ್ತರ– ದಕ್ಷಿಣ ಗುಣಗಳ ವಿದ್ಯಾ ಮತ್ತು ವಿನಾಯಕರಿಗೆ ಅವರಿಗೇ ಗೊತ್ತಿಲ್ಲದೇ ಮದ್ವೆ ಆಗಿಬಿಡುತ್ತದೆ.

–ಇದೇನು ಯಾವುದೋ ಸಿನಿಮಾ ಕಥೆ ಹೇಳುತ್ತಿರುವ ಹಾಕಿದೆಯಲ್ಲ ಎಂದು ಹುಬ್ಬೇರಿಸಬೇಡಿ. ಇದು ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಆರಂಭವಾಗಿರುವ ‘ವಿದ್ಯಾವಿನಾಯಕ’ ಹೊಸ ಧಾರಾವಾಹಿಯ ಕಥೆಯ ಎಳೆ. ಜಯಂತ್‌ ಅವರು ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಸಂಚಿಕೆ ನಿರ್ದೇಶಕನಾಗಿ ಸಂತೋಷ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸದಾ ತನ್ನ ಲೋಕದಲ್ಲಿಯೇ ಮುಳುಗಿರುವ ‘ವಿನಾಯಕ’ನನ್ನು ಸದ್ಯಕ್ಕೆ ಅವನ ಲೋಕದಲ್ಲಿಯೇ ಇರಲು ಬಿಟ್ಟು, ಸದಾ ಪಟಪಟ ಮಾತಾಡುವ, ಎಲ್ಲದರಲ್ಲಿಯೂ ಒಳಿತನ್ನೇ ಕಾಣುವ, ಎಲ್ಲರಿಗೂ ಒಳಿತನ್ನೇ ಬಯಸುವ ವಿದ್ಯಾ ಜತೆ ಕೊಂಚ ಹರಟೋಣ.

ADVERTISEMENT

‘ಲಕ್ಷ್ಮೀ ಬಾರಮ್ಮಾ’ದಲ್ಲಿ ಚಿನ್ನು ಆಗಿ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದ ಇವಳು ಈಗ ವಿನಾಯಕನ ಮನಸ್ಸನ್ನು ಬದಲಿಸುವ ಅಕ್ಕರೆಯ ಹುಡುಗಿಯಾಗಿ ಜೀ ಕನ್ನಡದಲ್ಲಿ ಪ್ರತ್ಯಕ್ಷಳಾಗಿದ್ದಾಳೆ. ಹೆಸರು ಕವಿತಾ ಗೌಡ.

ತಮ್ಮ ಹೊಸ ಧಾರಾವಾಹಿಯ ಕುರಿತು ಕವಿತಾ ಅವರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಆ ನಿರೀಕ್ಷೆ ಈಡೇರುತ್ತದೆ ಎಂಬ ವಿಶ್ವಾಸವೂ ಇದೆ.

‘ಈ ಧಾರಾವಾಹಿ ಒಂದು ಕೌಟುಂಬಿಕ ಪ್ರೇಮಕಥೆ. ವಿದ್ಯಾ– ವಿನಾಯಕ ಇಬ್ಬರೂ ಹೇಗೆ ಭೇಟಿಯಾಗುತ್ತಾರೆ. ವಿರುದ್ಧ ಸ್ವಭಾವದ ನಡುವೆಯೂ ಹೇಗೆ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾರೆ. ತಮ್ಮ ಸಂಬಂಧದ ಜತೆ ಕುಟುಂಬದವರ ಭಾವನೆಗಳನ್ನೂ ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೆ ಎಂಬುದೇ ಈ ಧಾರಾವಾಹಿಯ ಕಥಾವಸ್ತು’ ಎಂದು ಕವಿತಾ ವಿವರಿಸುತ್ತಾರೆ.

ತಮ್ಮ ಹಿಂದಿನ ಧಾರಾವಾಹಿಗಿಂತ ವಿದ್ಯಾ ಪಾತ್ರ ತುಂಬ ಭಿನ್ನ ಎಂದು ಅವರಿಗೂ ಅನಿಸಿದೆ. ‘ಇದು ರಿಮೇಕ್‌ ಧಾರಾವಾಹಿ ಅಲ್ಲ’ ಎಂಬುದನ್ನು ಒತ್ತಿ ಹೇಳಿಯೇ ಮಾತು ಮುಂದುವರಿಸುತ್ತಾರೆ. ‘ಈ ಧಾರಾವಾಹಿಯಲ್ಲಿ ನನ್ನ ಪಾತ್ರಕ್ಕಿಂತ ನನಗೆ ಪೋಷಕವಾಗಿ ನಿಲ್ಲುವ ಪಾತ್ರಗಳೂ ತುಂಬ ಚೆನ್ನಾಗಿವೆ. ಎಲ್ಲ ಪಾತ್ರಗಳಿಗೂ ಅಷ್ಟೇ ಮಹತ್ವ ಇದೆ. ವಿದ್ಯಾ ಪಟಪಟ ಮಾತಾಡುವ ಹುಡುಗಿ. ಮುಗ್ಧತೆ ಅವಳ ಹೃದಯ ತುಂಬಿದೆ. ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು, ಅಯ್ಯೋ ಹಿಂಗಾಗೋಯ್ತಲ್ವಾ ಎಂದು ಪರಿತಪಿಸುತ್ತಾಳೆ. ಒಂಥರಾ ಮುದ್ದು ಹುಡುಗಿ ಅವಳು’ ಎಂದು ಅವರು ತಮ್ಮ ಸ್ನೇಹಿತೆಯ ಬಗ್ಗೆ ಮಾತಾಡುತ್ತಿದ್ದೆನೇನೋ ಎಂಬಷ್ಟು ಆಪ್ತವಾಗಿ ಪಾತ್ರದ ಒಳ ಹೊರಗನ್ನು ಬಿಚ್ಚಿಡುತ್ತಾರೆ.

ಧಾರಾವಾಹಿಯ ಮೊದಲ ಸಂಚಿಕೆಯಲ್ಲಿಯೇ ವಿದ್ಯಾ ಪಾತ್ರ ಎಲ್ಲರಿಗೂ ತುಂಬ ಇಷ್ಟವಾಗಿಬಿಟ್ಟಿದೆಯಂತೆ.

ಟಿ‍‍ಪಿಕಲ್‌ ಧಾರಾವಾಹಿಯ ಹಳಸಲು ಮಾದರಿಯನ್ನು ‘ವಿದ್ಯಾವಿನಾಯಕ’ ಖಂಡಿತ ಮುರಿಯುತ್ತದೆ ಎಂದೂ ಅವರು ವಿಶ್ವಾಸದಿಂದ ಹೇಳುತ್ತಾರೆ. ‘ಒಂದೇ ಸಂಗತಿಯನ್ನು ವಿಪರೀತ ಎಳೆದಾಡುವುದು ಈ ಧಾರಾವಾಹಿಯಲ್ಲಿ ಇಲ್ಲವೇ ಇಲ್ಲ. ನಿರೂಪಣೆ ತುಂಬ ಚುರುಕಾಗಿದೆ. ಈವತ್ತು ನೋಡಿದವರು ನಾಳೆಯೂ ನೋಡಲೇ ಬೇಕು ಎಂದು ಟಿ.ವಿ. ಮುಂದೆ ಕುಳಿತುಕೊಳ್ಳುವ ರೀತಿ ಇಡೀ ಧಾರಾವಾಹಿ ಇದೆ’ ಎಂದು ಹೇಳಿಕೊಳ್ಳುತ್ತಾರೆ.

ಕವಿತಾ ಭರತನಾಟ್ಯ ಕಲಾವಿದೆ. ಈ ಶಾಸ್ತ್ರೀಯ ಕಲೆಯ ಅಭ್ಯಸನ ಅವರ ನಟನೆಯನ್ನೂ ಸಾಕಷ್ಟು ಪ್ರಭಾವಿಸಿದೆ. ‘ಭರತನಾಟ್ಯ ಮತ್ತು ನಟನೆ ಪೂರ್ತಿ ಬೇರೆಯದೇ ರೀತಿಯ ಪ್ರತಿಭೆಯನ್ನು ಬೇಡುತ್ತವೆ. ಆದರೆ, ಭರತನಾಟ್ಯದಿಂದ ನನ್ನ ನಟನೆಗೆ ತುಂಬ ಸಹಾಯವಾಗಿದೆ. ಭರತನಾಟ್ಯ ಕಲಿತಿರದಿದ್ದರೆ ನಾನು ಖಂಡಿತ ಇಂದು ಈ ಮಟ್ಟಕ್ಕೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಅವರು ಸ್ಪಷ್ಟವಾಗಿಯೇ ಹೇಳುತ್ತಾರೆ.

‘ಎಂಥ ಪಾತ್ರಗಳಲ್ಲಿ ನಟಿಸಲು ಬಯಸುತ್ತೀರಿ’ ಎಂದು ಹೇಳಿದರೆ ಅವರು ‘ನನಗೆ ಪಾತ್ರಕ್ಕಿಂತ ಒಳ್ಳೆಯ ಕಥೆ ಮುಖ್ಯ. ನಾನು ಯಾವಾಗಲೂ ಒಂದು ಒಳ್ಳೆಯ ಕಥೆಯ ಭಾಗವಾಗಲು ಇಷ್ಟಪಡುತ್ತೇನೆ’ ಎಂದು ಉತ್ತರಿಸುತ್ತಾರೆ ಅವರು.

ಕಿರುತೆರೆಯಿಂದ ಹಿರಿತೆರೆಗೆ ಜಿಗಿಯುವ ಹಂಬಲವೂ ಕವಿತಾ ಅವರಿಗೆ ಇದ್ದೇ ಇದೆ. ಹಾಗಂತ ಕಿರುತೆರೆಯನ್ನು ತೊರೆಯುವ ಮನಸ್ಸೂ ಅವರಿಗಿಲ್ಲ. ‘ಒಳ್ಳೆಯ ಅವಕಾಶ ಬಂದರೆ ಧಾರಾವಾಹಿಗೆ ಯಾವುದೇ ರೀತಿ ತೊಂದರೆ ಆಗದೇ ನಟಿಸಲು ಸಾಧ್ಯವಾದರೆ ಸಿನಿಮಾದಲ್ಲಿಯೂ ನಟಿಸುತ್ತೇನೆ’ ಎನ್ನುತ್ತಾರೆ ಕವಿತಾ.

ಸದ್ಯಕ್ಕಂತೂ ಅವರು ‘ವಿದ್ಯಾ’ ಪಾತ್ರಕ್ಕೆ ಜೀವತುಂಬುವುದರಲ್ಲಿ ಪೂರ್ತಿ ತನ್ಮಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.