ADVERTISEMENT

ಕಡೆಗಣನೆಗೆ ಒಳಗಾದವರ ಬದುಕಿನ ‘ಆ್ಯಪಲ್ ಕೇಕ್’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 19:30 IST
Last Updated 2 ಫೆಬ್ರುವರಿ 2017, 19:30 IST
ಕಡೆಗಣನೆಗೆ ಒಳಗಾದವರ ಬದುಕಿನ ‘ಆ್ಯಪಲ್ ಕೇಕ್’
ಕಡೆಗಣನೆಗೆ ಒಳಗಾದವರ ಬದುಕಿನ ‘ಆ್ಯಪಲ್ ಕೇಕ್’   

‘ಬೇಕರಿಯಲ್ಲಿ ಮಾರಾಟವಾಗದೆ ಉಳಿಯುವ ಸಿಹಿತಿಂಡಿಗಳು ಮತ್ತು ಕೇಕ್‌ಗಳಿಂದ ತಯಾರಿಸುವ ತಿನಿಸು ‘ಆ್ಯಪಲ್ ಕೇಕ್’. ಅಂತೆಯೇ ಸಮಾಜದಲ್ಲೂ ಕಡೆಗಣನೆಗೆ ಒಳಗಾದವರು ಅನೇಕರಿದ್ದಾರೆ. ಅಂತಹವರನ್ನು ಪ್ರತಿನಿಧಿಸುವ ಚಿತ್ರ ನಮ್ಮದು’ ಎಂದು ನಿರ್ದೇಶಕ ರಂಜಿತ್ ಕುಮಾರ್ ಗೌಡ ತಮ್ಮ ಚಿತ್ರ ‘ಆ್ಯಪಲ್ ಕೇಕ್‌’ನ ತಿರುಳು ಮತ್ತು ಅದರ ಶೀರ್ಷಿಕೆಯನ್ನು ಸಮರ್ಥಿಸುವ ಧಾಟಿಯಲ್ಲಿ ಹೇಳಿದರು.

ಪದವಿ ಬಳಿಕ ರಂಗಭೂಮಿಯಲ್ಲಿ ತೊಡಗಿಸಿಕೊಂಡ ರಂಜಿತ್ ಕುಮಾರ್, ಬೆಳ್ಳಿತೆರೆಗೆ ಮೊದಲು ಬಣ್ಣ ಹಚ್ಚಿದ್ದು ‘ಆಟೊ’ ಚಿತ್ರದ ಮೂಲಕ. ಬಳಿಕ ಪರದೆ ಹಿಂದಿನ ಕೆಲಸದಲ್ಲಿ ತೊಡಗಿಸಿಕೊಂಡು, ‘ಮದರಂಗಿ’ ಮತ್ತು ‘ವಾಸ್ಕೋಡಿಗಾಮ’ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದೀಗ ರಂಗಭೂಮಿ ಮತ್ತು ಸಿನಿಮಾ ಅನುಭವವನ್ನು ಬೆರೆಸಿ ‘ಆ್ಯಪಲ್ ಕೇಕ್’ ಮಾಡಲು ಮುಂದಾಗಿದ್ದಾರೆ. ಮೊದಲ ಚಿತ್ರಕ್ಕೀಗ ಮುಹೂರ್ತದ ಸಂಭ್ರಮ.
‘ವಿಭಿನ್ನ ನೆಲೆ ಮತ್ತು ಅಭಿರುಚಿಯ ವ್ಯಕ್ತಿಗಳು ಸೇರುವ ಚಿತ್ರ ಇದಾಗಿದೆ. ಮೂರು ಹಾಡುಗಳು ಮತ್ತು ಎರಡು ಹೊಡೆದಾಟದ ದೃಶ್ಯಗಳಿವೆ.  ಮಂಡ್ಯ, ಚನ್ನಪಟ್ಟಣ, ಹಾವೇರಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದು ನಿರ್ದೇಶಕರು ಹೇಳಿದರು.

ನಿರ್ದೇಶಕ ರಂಜಿತ್ ಕುಮಾರ್, ಚಿತ್ರಕ್ಕೆ ಬಂಡವಾಳ ಹಾಕಿರುವ ಅರವಿಂದ್ ಕುಮಾರ್ ಗೌಡ ಹಾಗೂ ವಿಜಯ್ ಶಂಕರ್ ಚಿತ್ರದ ನಾಯಕರು. ‘ಬಳ್ಳಾರಿ ದರ್ಬಾರ್‌’ನಲ್ಲಿ ಮೋಹಕ ಮೈಮಾಟ ತೋರಿದ್ದ ಶುಭ ರಕ್ಷಾ ಮತ್ತು ರಂಗಭೂಮಿ ಹಿನ್ನೆಲೆಯ ಚೈತ್ರಾ ಶೆಟ್ಟಿ ನಾಯಕಿಯರು. ಮೂವರು ನಾಯಕರೂ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವುದು ಚಿತ್ರದ ವಿಶೇಷ.

‘ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಅರವಿಂದ್ ಹೇಳಿದರೆ, ‘ಚಿತ್ರದ ಕಲಾವಿದರಿಗಿಂತ ವಿಷಯ ವಸ್ತುವೇ ಹೀರೊ ಆಗುವಷ್ಟು ಸ್ಟ್ರಾಂಗ್ ಆಗಿದೆ’ ಎಂದರು ವಿಜಯ್ ಶಂಕರ್.

‘ಚಿತ್ರದಲ್ಲಿ ನನ್ನದು ಆಲ್‌ ಇನ್‌ ಒನ್ ರೋಲ್‌’ ಎಂದು ನುಲಿದ ಶುಭ ರಕ್ಷಾ ಅವರು ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಕ್ಕೂ ಬಣ್ಣ ಹಚ್ಚಿರುವುದಾಗಿ ಹೇಳಿದರು.‘ನನಗೆ ಹಳ್ಳಿ ಹುಡುಗಿಯಾಗೇ ಇರಲು ಇಷ್ಟ. ಚಿತ್ರದಲ್ಲೂ ನನಗೆ ಅಂತಹ ಪಾತ್ರವೇ ಸಿಕ್ಕಿದೆ’ ಎಂದು ಚೈತ್ರಾ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.
ಶ್ರೀಧರ್ ಕಶ್ಯಪ್ ಸಂಗೀತ ನಿರ್ದೇಶನ, ಎ.ಆರ್. ನಿರಂಜನ್ ಬಾಬು ಛಾಯಾಗ್ರಹಣ, ಬಸು ಸಂಕಲನ, ಜಾಗ್ವಾರ್ ಸಣ್ಣಪ್ಪ ಸಾಹಸ ಹಾಗೂ ಸೀನು ಕಲಾ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.