ADVERTISEMENT

ಕಾಡ ಹಾದಿಯ ನಡುವೆ ಬದುಕಿನ ಬಿಂಬಗಳು

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST
ಲೈಫ್ 360 ಪಾಯಲ್
ಲೈಫ್ 360 ಪಾಯಲ್   

ಕಣ್ಣು ಹಾಸಿದಷ್ಟೂ ದೂರ ಹರಡಿಕೊಂಡ ನೀರಿನ ಮೇಲೆ ಆಡುತ್ತಿರುವ ಸಂಜೆಸೂರ್ಯನ ಕೆಂಬಣ್ಣದ ಕುಂಚ. ದಂಡೆಯ ಸಣ್ಣಕಲ್ಲುಗಳನ್ನು ಕ್ಷಣಕ್ಷಣಕ್ಕೂ ಮುಚ್ಚಿಮೀಯಿಸುವ ತೆಳು ಅಲೆಗಳು. ದಡದೊಡನೆ ನೀರ ಆಟದಿಂದ ತಲೆಯೆತ್ತಿದ ಕ್ಯಾಮೆರಾ ಭುವಿ–ಬಾನು ಸೇರುವ ದೂರ ದಿಗಂತದಲ್ಲಿ ಕಣ್ಣು ನೆಡುವಷ್ಟು ಹೊತ್ತಿಗೆ ಗಡಸು ಧ್ವನಿಯಲ್ಲಿ ಕೇಳಿಬರುವ ಆ ಸಾಲುಗಳು – ‘ಜೀವನ ಅನ್ನೋದು ಶುರುವಾಗೋದೆ ಕಂಫರ್ಟ್‌ಜೋನ್‌ ಎಂಡ್‌ ಆದಾಗ...’

ಮರುಕ್ಷಣವೇ ತೆರೆದುಕೊಳ್ಳುವ ಮತ್ತೊಂದು ದೃಶ್ಯದಲ್ಲಿ ಆಕಾಶಕ್ಕೆ ಗುದ್ದುವಂತೆ ಮುಖ ಮಾಡಿ ನಿಂತ ಬೃಹತ್‌ ಬಂಡೆಯ ಮೇಲೆ ಸೈಕಲ್‌ ಸಮೇತ ನಿಂತಿರುವ ನಾಯಕ, ಜಗವೆಲ್ಲ ಅವನ ಕಾಲ ಕೆಳಗೆ...

‘ಜೀವನ ಅನ್ನೋ ಈ ದಾರಿಯಲ್ಲಿ ಒಳ್ಳೆದರ ಥರಾನೇ ಕೆಟ್ಟದ್ದನ್ನೂ ಅಕ್ಸೆಪ್ಟ್‌ ಮಾಡಿಕೊಳ್ಳಬೇಕು. ಬೇಜಾರಲ್ಲೂ ನಗಬೇಕು, ಇರೋದನ್ನೇ ಪ್ರೀತಿಸಬೇಕು. ಬಂದ ದಾರೀನ ನೆನಪಿಸ್ಕೋಬೇಕು. ಏನೇ ಆದ್ರೂ ಜರ್ನಿ ಮುಂದುವರಿಯಬೇಕು’. ಈ ಮಾತುಗಳು ಹಿನ್ನೆಲೆಯಲ್ಲಿ ಕೇಳಿಬರುತ್ತಿರುವ ಹಾಗೆಯೇ ನಾಯಕ ತನ್ನ ಸೈಕಲ್ ಸಮೇತ ಮೇರು ಪರ್ವತಗಳ ಎದೆಯ ಮೇಲೆ ಸಾಗುತ್ತಾನೆ. ಸೈಕಲ್‌ ಹೆಗಲ ಮೇಲೆ ಹೊತ್ತು ಹಳ್ಳ ದಾಟುತ್ತಾನೆ. ಕಡಿದಾದ ಕಲ್ಲುಬಂಡೆಗಳನ್ನು ಉಡದ ಹಾಗೆ ಹತ್ತುತ್ತಾನೆ.

ಇವೆಲ್ಲ ನ್ಯಾಷಲ್‌ ಜಿಯೋಗ್ರಾಫಿಕ್ಸ್‌ ವಾಹಿನಿಯ ಯಾವುದೋ  ಕಾರ್ಯಕ್ರಮದ ವಿವರಣೆ ಅಂದುಕೊಂಡಿರಾ? ಖಂಡಿತ ಅಲ್ಲ. ಕನ್ನಡದ ‘ಲೈಫ್‌ 360’ ಎಂಬ ಸಿನಿಮಾದ ಟ್ರೈಲರ್‌ನ ಝಲಕ್‌!

ಕಣ್ಣರಳಿಸುವ ಹಸಿರು ಸಿರಿ, ಬೆರಗು ಹುಟ್ಟಿಸುವ ಕಾಡ ನಡುವಿನ ದಾರಿ, ಕಪ್ಪು ಬಂಡೆಗಳು, ಕಾಲುದಾರಿ ಇವೆಲ್ಲದರ ನಡುವೆ ಬಂದು ಹೋಗುವ ಪ್ರೇಮ, ಸಂಬಂಧ, ಬದುಕು, ಹರೆಯದ ಕುರಿತ ಮಾತುಗಳಿಂದ ಎರಡು ಟ್ರೈಲರ್‌ಗಳು ‘ಲೈಫ್‌ 360’ ಸಿನಿಮಾದ ಕುರಿತು ಕುತೂಹಲ ಹುಟ್ಟಿಸುತ್ತವೆ.

ತೀವ್ರ ಸಿನಿಮಾ ವ್ಯಾಮೋಹ ಇರುವ ಹೊಸಬರೇ ಸೇರಿಕೊಂಡು ರೂಪಿಸಿರುವ ‘ಲೈಫ್‌ 360’ ತಂಡ, ಇತ್ತೀಚೆಗೆ ಎರಡು ಟ್ರೈಲರ್‌ಗಳನ್ನು ಮಾಧ್ಯಮದೆದುರು ಬಿಡುಗಡೆ ಮಾಡಿತು. ಹೊಸಬರ ಪ್ರಯತ್ನಕ್ಕೆ ಬೆಂಬಲ ಸೂಚಿಸಲು ನಿರ್ದೇಶಕ ಪವನ್‌ ಕುಮಾರ್‌ ಸಹ ಬಂದಿದ್ದರು.

ಕಾಲೇಜು ದಿನಗಳಿಂದಲೇ ಸಿನಿಮಾದತ್ತ ಆಕರ್ಷರಾಗಿದ್ದ ಅರ್ಜುನ್‌ ಕಿಶೋರ್‌ ಚಂದ್ರ ಅವರು ಈ ಚಿತ್ರ ಆರಂಭಿಸಿದ್ದು ಕ್ರೌಡ್‌ ಫಂಡಿಂಗ್‌ ಮೂಲಕ. ಆದರೆ ಬಜೆಟ್‌ ಸಾಲದೇ ಚಿತ್ರ ನಿಲ್ಲುವ ಪರಿಸ್ಥಿತಿ ಬಂದಾಗ ಅವರ ಸಹಾಯಕ್ಕೆ ಬಂದಿದ್ದು ಎಸ್‌. ರಾಜಶೇಖರ್‌. ‘ಹೊಸಬರ ಪ್ರತಿಭೆ ಗಮನಿಸಿ ಈ ಸಿನಿಮಾಕ್ಕೆ ಹಣ ಹೂಡಿದ್ದೇನೆ’ ಎಂದರು ರಾಜಶೇಖರ್‌.

ಸಿನಿಮಾ ವ್ಯಾಮೋಹದಿಂದ ಕೈಲಿದ್ದ ಕೆಲಸವನ್ನು ಬಿಟ್ಟು ಬಂದಿರುವ ಅರ್ಜುನ್‌ ಅವರಿಗೆ ‘ಲೈಫ್‌ 360’ ಬಗ್ಗೆ ಅಪಾರ ನಿರೀಕ್ಷೆಗಳಿವೆ. ತಾವೇ ಕಥೆ ಬರೆದು ನಿರ್ದೇಶಿಸಿರುವ ಈ ಸಿನಿಮಾದ ನಾಯಕರೂ ಅವರೇ.

‘ಇದು ಹರೆಯದ ಹುಡುಗನ ಕಥೆ. ಸೈಕಲ್‌ ಪ್ರಯಾಣ ಹೊರಟು, ಆ ಪ್ರಯಾಣದಲ್ಲಿ ಬದುಕಿನ ಸತ್ಯಗಳನ್ನು ಕಂಡುಕೊಳ್ಳುತ್ತಾನೆ. ಈ ಅಂತರಂಗ–ಬಹಿರಂಗದ ಪ್ರಯಾಣದ ವರ್ತುಲವೇ ಲೈಫ್‌ 360’ ಎಂದು ಅವರು ಸಿನಿಮಾ ಶೀರ್ಷಿಕೆಯ ಮೂಲಕವೇ ಕಥನ ಭೂಮಿಕೆಯ ಕುರಿತೂ ಸುಳಿವು ನೀಡಿದರು. ಈ ಸಿನಿಮಾ ಮಾಡುತ್ತಾ ಅರ್ಜುನ್‌ ಅವರಿಗೆ ಬದುಕಿನ ಸತ್ಯಗಳ ಅರಿವಾಗಿದೆಯಂತೆ.

ಪಾಯಲ್‌ ಮತ್ತು ಅನುಷಾ ಎಂಬಿಬ್ಬರು ನಾಯಕಿಯರೂ ‘360’ ವರ್ತುಲದ ಭಾಗವಾಗಿದ್ದಾರೆ. ‘ಎರಡು ವರ್ಷದಿಂದ ತಂಡದ ಶ್ರಮವನ್ನು ನೋಡಿದ್ದೇನೆ. ಖಂಡಿತ ಈ ಸಿನಿಮಾ ಜನರಿಗೆ ಇಷ್ಟವಾಗುತ್ತದೆ’ ಎಂದು ಪಾಯಲ್‌ ಭವಿಷ್ಯ ನುಡಿದರು. ಅನುಷಾ ‘ಜೀವನದಲ್ಲಿ ಯಾರು ಯಾರನ್ನೋ ಭೇಟಿಯಾಗುತ್ತೇವೆ. ಅವರಿಂದ ಹಲವು ಸಂಗತಿಗಳನ್ನು ಕಲಿತುಕೊಳ್ಳುತ್ತೇವೆ.

ಹಾಗೆ ನಾಯಕನಿಗೆ ಪ್ರೇಮದ ಅರಿವು ಮೂಡಿಸುವ ನಾಯಕಿಯ ಪಾತ್ರ ನನ್ನದು’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು. ಅನಿಲ್‌ ಕುಮಾರ್‌ ಕೆ. ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಮಹಾಂತ್‌ ನೀಲ್‌, ಆಕಾಶ್‌ ಶಿವಕುಮಾರ್‌ ಮತ್ತು ಪ್ರಜ್ವಲ್‌ ಪೈ ಎಂಬ ಮೂವರು ಸಂಗೀತ ನೀಡಿದ್ದಾರೆ. ಫೆಬ್ರುವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.