ADVERTISEMENT

ಕಾಲೇಜು ಮುಗಿಸಿದ ಕುಮಾರ!

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಕಾಲೇಜು ಮುಗಿಸಿದ ಕುಮಾರ!
ಕಾಲೇಜು ಮುಗಿಸಿದ ಕುಮಾರ!   

ದೇವಸ್ಥಾನದ ಎದುರು ಹಾದು ಹೋಗುವಾಗ ನಮಗೆ ಗೊತ್ತಿಲ್ಲದೆಯೇ ಭಕ್ತಿಭಾವ ಆವರಿಸಿ ನಮಸ್ಕರಿಸುತ್ತೇವಲ್ಲ, ಹಾಗೆಯೇ ರವಿಶಂಕರ್‌, ಶ್ರುತಿ ಅವರಂಥ ಶ್ರೇಷ್ಠ ಕಲಾವಿದರ ಎದುರಿಗೆ ನಿಂತರೆ ಸಾಕು; ಗೊತ್ತಿಲ್ಲದೆಯೇ ಅಭಿನಯ ಮಾಡಲು ಶುರುಮಾಡುತ್ತೇವೆ. ಗಂಧದವರ ಜತೆ ಗುದ್ದಾಡಿ ಮೈಗೆ ಸುಗಂಧ ಅಂಟಿಸಿಕೊಂಡ ಖುಷಿಯಲ್ಲಿ ನಾನಿದ್ದೇನೆ’ ಎಂದು ಪಕ್ಕ ಕೂತಿದ್ದ ಶ್ರುತಿ ಮುಖ ನೋಡಿದರು ವಿಕ್ಕಿ. ‘ಸಿನಿಮಾ ಆರಂಭದ ಮೊದಲಲ್ಲಿ ಏನೇನು ಮಾತಾಡ್ತಿರಲಿಲ್ಲ. ಈಗ ನೋಡಿ ಎಷ್ಟು ಚೆನ್ನಾಗಿ ಮಾತಾಡೋದು ಕಲ್ತುಬಿಟ್ಟಿದಾನೆ’ ಎಂದು ತಮಾಷೆ ಮಾಡಿ ನಕ್ಕರು ಶ್ರುತಿ.

‘ಈ ಸಿನಿಮಾದಲ್ಲಿ ಏನಾದ್ರೂ ಕಿರಿಕ್‌ ಇದೆಯಾ’ ಎಂಬ ಪ್ರಶ್ನೆಗೆ ’ಕಿರಿಕ್‌ ಇಲ್ಲ, ಆದರೆ ಕಿರಿಕ್‌ ಮಾಡಿಕೊಂಡ್ರೆ ಏನಾಗತ್ತೆ ಎನ್ನುವುದು ತೋರಿಸಿದ್ದೇವೆ. ಯಾವುದೇ ಕಿರಿಕ್‌ ಮಾಡುವ ಮೊದಲು ಐದು ನಿಮಿಷ ಯೋಚನೆ ಮಾಡಬೇಕು. ಇಲ್ಲದಿದ್ದರೆ ಅದರ ಪರಿಣಾಮ ಬೇರೆಯೇ ಆಗುತ್ತದೆ ಎನ್ನುವುದು ಸಿನಿಮಾದಲ್ಲಿದೆ’ ಎಂದು ಜಾಣತನದಿಂದಲೇ ಉತ್ತರಿಸಿದರು. ಅವರ ಮಾತಿಗೆ ಪ್ರತಿಕ್ರಿಯೆ ನೀಡಲು ಕಿರಿಕ್‌ ಹುಡುಗಿ ಸಂಯುಕ್ತ ಹೆಗಡೆ ಅಲ್ಲಿರಲಿಲ್ಲ.

ಅದು ಹರಿ ಸಂತೋಷ್‌ ನಿರ್ದೇಶನದ ‘ಕಾಲೇಜ್‌ ಕುಮಾರ’ ಸಿನಿಮಾದ ಚಿತ್ರೀಕರಣದ ಕೊನೆಯ ದಿನ. ಐವತ್ತನಾಲ್ಕು ದಿನಗಳಲ್ಲಿ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಆ ಸುದ್ದಿಯನ್ನು ಹಂಚಿಕೊಳ್ಳಲಿಕ್ಕಾಗಿಯೇ ಪತ್ರಿಕಾಗೋಷ್ಠಿ ಕರೆದಿತ್ತು.

ADVERTISEMENT

‘ಈ ಸಿನಿಮಾದಲ್ಲಿ ನಾಲ್ಕು ಜನ ನಾಯಕರು. ವಿಕ್ಕಿ, ಸಂಯುಕ್ತಾ, ರವಿಶಂಕರ್ ಮತ್ತು ಶ್ರುತಿ’ ಎಂದು ಹೇಳಿದರು ನಿರ್ಮಾಪಕ ಎಲ್‌. ಪದ್ಮನಾಭ. ಈ ಸಿನಿಮಾದ ಪ್ರತಿಯೊಂದು ಹಂತದಲ್ಲಿಯೂ ಅವರು ಸ್ವಂತ ಮುತುವರ್ಜಿವಹಿಸಿ ಕೆಲಸ ಮಾಡಿದ್ದಾರಂತೆ.

’ಸಾಮಾನ್ಯವಾಗಿ ಎರಡು ಮೂರು ಶೆಡ್ಯೂಲ್‌ನಲ್ಲಿ ಸಿನಿಮಾ ಚಿತ್ರೀಕರಿಸುವುದು ರೂಢಿ. ಆದರೆ ಈ ಸಿನಿಮಾವನ್ನು ಒಂದೇ ಶೆಡ್ಯೂಲ್‌ನಲ್ಲಿ ಮುಗಿಸಿದ್ದೇವೆ. ಇದೊಂದು ಹೊಸ ಅನುಭವ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಚಿತ್ರೀಕರಿಸಿದ್ದೇವೆ’ ಎಂದರು ಹರಿ ಸಂತೋಷ್‌.

ನಿರ್ದೇಶಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಚಿತ್ರೀಕರಣದ ಜಾಗದಲ್ಲಿಯೇ ಎಡಿಟ್‌ ಮಾಡುವ ಸೌಲಭ್ಯವನ್ನೂ ಒದಗಿಸಿಕೊಟ್ಟಿದ್ದರಂತೆ ನಿರ್ಮಾಪಕರು.

ಶ್ರುತಿ ಎರಡು ಕಾರಣಗಳಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಒಂದು ಚಿತ್ರದ ಕಥೆಯಲ್ಲಿನ ಸತ್ವ. ಇನ್ನೊಂದು ರವಿಶಂಕರ್‌ ಅವರ ಜತೆ ನಟಿಸಬಹುದಲ್ಲ ಎಂಬ ಆಸೆಯಿಂದ. ‘ನಾನು ಮೊದಲಿನಿಂದಲೂ ರವಿಶಂಕರ್‌ ಅವರ ಅಭಿಮಾನಿ’ ಎಂದೂ ಅವರು ಹೇಳಿಕೊಂಡರು. ರವಿಶಂಕರ್‌ ಕೂಡ ತಮ್ಮ ಮಾತಿನಲ್ಲಿ ಶ್ರುತಿ ಅವರನ್ನು ಹಾಡಿ ಹೊಗಳಲು ಮರೆಯಲಿಲ್ಲ.

‘ಈ ಸಿನಿಮಾದ ಕಥೆಯೇ ತುಂಬ ಚೆನ್ನಾಗಿದೆ. ಅದನ್ನು ಬೆಳೆಸುತ್ತ ಹೋದಹಾಗೆ ಪ್ರಕಾಶ ಬೆಳವಾಡಿ ಅವರ ಪಾತ್ರವನ್ನೂ ಸೇರಿಸಬೇಕಾಯ್ತು. ಅದು ಈ ಚಿತ್ರಕ್ಕೆ ಧನಾತ್ಮಕ ಅಂಶ ಆಗಲಿದೆ’ ಎಂದರು ರವಿಶಂಕರ್‌.

‘ಕಾಲೇಜ್‌ ಕುಮಾರ’ನ ನಾಲ್ಕು ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಎ. ಅಳಗನ್‌ ಛಾಯಾಗ್ರಹಣ ಮಾಡಿದ್ದಾರೆ. ಸೆಪ್ಟೆಂಬರ್‌ ಅಷ್ಟರಲ್ಲಿ ‘ಕಾಲೇಜ್‌ ಕುಮಾರ’ ತೆರೆಗೆ ಹಾಜರಾಗಲಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.