ADVERTISEMENT

‘ಕೆಂಪೇಗೌಡ’ರ ಪೋಷಾಕಲ್ಲಿ ಕೋಮಲ್!

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
ರೋಷ್ ಮೋಹನ್
ರೋಷ್ ಮೋಹನ್   

‘ಕೆಂಪೇಗೌಡ’ ಎಂದಾಕ್ಷಣ ಕನ್ನಡ ಚಿತ್ರರಸಿಕರಿಗೆ ಒಂದು ಇಮೇಜ್ ಕಣ್ಮುಂದೆ ಬರುತ್ತದೆ. ಖಡಕ್ ಕಂಠ, ತಿದ್ದಿ ತೀಡಿದ ಮೀಸೆ, ನೀಳ ಕಾಯದ ಸುದೀಪ್ ಕೆಂಪೇಗೌಡನಾಗಿ ಅಭಿಮಾನಿಗಳ ಹೃದಯ ಗೆದ್ದಿದ್ದರು. ಈಗ ‘ಕೆಂಪೇಗೌಡ 2’ ಸರದಿ. ಈಗಲೂ ಸುದೀಪ್ ಅವರೇ ಚಿತ್ರದ ನಾಯಕ ಎಂಬ ಹಲವರ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ ನಿರ್ಮಾಪಕ ಶಂಕರ್ ಗೌಡ. ‘ಕೆಂಪೇಗೌಡ 2’ರ ನಾಯಕ ಕೋಮಲ್ ಕುಮಾರ್.  ಚಿತ್ರದ ಮೊದಲ ಸುದ್ದಿಗೋಷ್ಠಿಯಲ್ಲಿ ಶೀರ್ಷಿಕೆ ಮತ್ತು ಒಂದು ಟ್ರೈಲರ್ ಅನಾವರಣ ಮಾಡಲಾಯಿತು.

‘ಡೀಲ್ ರಾಜ’ ಚಿತ್ರದ ಸುಮಾರು ಒಂದು ವರ್ಷದ ನಂತರ ಕೋಮಲ್ ಮತ್ತೆ ರಂಜಿಸುವ ತಯಾರಿ ನಡೆಸಿದ್ದಾರೆ. ಹನ್ನೆರಡು ತಿಂಗಳುಗಳ ನಂತರ ಅವರು ಬಣ್ಣ ಹಚ್ಚಿದ್ದಾರೆ ಎನ್ನುವಂತಿಲ್ಲ. ಏಕೆಂದರೆ ಅವರು ಈ ಚಿತ್ರದಲ್ಲಿ ಮೇಕಪ್ ಇಲ್ಲದೆಯೇ ತಮ್ಮ ಮೂಲ ಬಣ್ಣದಲ್ಲಿಯೇ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇಪ್ಪತ್ತೆರಡು ವರ್ಷಗಳ ಬಣ್ಣದ ಬದುಕಿನಲ್ಲಿ ಮೊದಲ ಬಾರಿ ಅವರು ಬಣ್ಣವಿಲ್ಲದೇ ನಟಿಸುತ್ತಿರುವುದು.

ಕೋಮಲ್ ಅಭಿಮಾನಿಗಳಿಗೆ ಇನ್ನೊಂದು ಅಚ್ಚರಿಯ ಸುದ್ದಿ ಎಂದರೆ ಅವರು ತಮ್ಮ ತೂಕ ಮತ್ತು ಆಕಾರವನ್ನು ಗಮನಾರ್ಹವಾಗಿ ಬದಲಾಯಿಸಿಕೊಂಡಿರುವುದು. ಅವರು ಕೆಂಪೇಗೌಡರ ಪಾತ್ರಕ್ಕಾಗಿ ಸಿಕ್ಸ್ ಪ್ಯಾಕ್ ಕೂಡ ಮಾಡುತ್ತಾರೆ ಎನ್ನಲಾಗುತ್ತಿದೆ. ಈಗಾಗಲೇ ಜಿಮ್‌ನಲ್ಲಿ ಸಾಕಷ್ಟು ಬೆವರು ಸುರಿಸಿರುವ ಅವರು ಇಪ್ಪತ್ತು ಕೇಜಿಗೂ ಹೆಚ್ಚು ತೂಕ ಇಳಿಸಿಕೊಂಡಿದ್ದಾರಂತೆ. ಅನಗತ್ಯ ಕೊಬ್ಬು ಕರಗಿರುವ ದಿನಗಳಲ್ಲಿ ಮುಂದಿನ ದಿನಗಳಲ್ಲಿ ಸಿಕ್ಸ್ ಪ್ಯಾಕ್‌ ಮಡಿಕೆಗಳು ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ.

ADVERTISEMENT

ಈ ಬಾರಿ ತಮ್ಮ ಹಾಸ್ಯದ ಅಭಿನಯದಿಂದ ಹೊರಬಂದು ಪಕ್ಕಾ ಮಾಸ್ ಆ್ಯಕ್ಷನ್ ಹೀರೊ ಲುಕ್‌ನಲ್ಲಿ ಅವರು ಮಿಂಚಲಿದ್ದಾರೆ. ಸಿನಿಮಾದಲ್ಲಿ ಕೋಮಲ್ ಹಾಸ್ಯ ಮಾಡದಿದ್ದರೂ ಸಂದರ್ಭಕ್ಕೆ ತಕ್ಕಂತೆ ಸ್ಕ್ರಿಪ್ಟ್‌ನಲ್ಲಿ ಕಚಗುಳಿ ನುಸುಳಬಹುದು.

‘ಇದು ಕನ್ನಡ ಚಿತ್ರೋದ್ಯಮಕ್ಕೆ ಹೊಸದೊಂದು ಅಧ್ಯಾಯ ಬರೆಯುವಂಥ ಸಿನಿಮಾ. ನಿರ್ದೇಶಕ ರೋಷ್ ಮೋಹನ್ ಪ್ರತಿಭಾವಂತ’ ಎಂಬುದು ಕೋಮಲ್ ಮಾತು. ಕೋಮಲ್ ಇಲ್ಲಿ ವೈಟ್‌ಕಾಲರ್ ಕ್ರಿಮಿನಲ್‌ಗಳ ಬೆನ್ನು ಹತ್ತುವ ಪೊಲೀಸ್ ಅಧಿಕಾರಿ. ಆ ಪಾತ್ರದ ಸಿದ್ಧತೆಗಾಗಿ ಅವರು ಎಂಟು ತಿಂಗಳು ವ್ಯಯಿಸಿದ್ದಾರೆ. ಟ್ರೈಲರ್‌ನ ಚಿತ್ರೀಕರಣಕ್ಕೇ ಹತ್ತು ದಿನಗಳನ್ನು ತೆಗೆದುಕೊಂಡಿದೆ ತಂಡ. ಇನ್ನು ನೂರಿಪ್ಪತ್ತು ದಿನಗಳಷ್ಟು ಚಿತ್ರೀಕರಣ ನಡೆಸುವ ಯೋಜನೆ ಇದೆ. ನಾಯಕಿ, ಕಲಾವಿದರು, ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕು. ಜಾಹೀರಾತುಗಳನ್ನು ತಯಾರಿಸಿದ್ದ  ಕೇರಳಿಗ ರೋಷ್ ಮೋಹನ್ ಚಿತ್ರದ ನಿರ್ದೇಶಕ. ಅವರಿಗಿದು ಮೊದಲ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.